ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು: ಸರ್ಕಾರದ ಮಾನದಂಡ ಕಡ್ಡಾಯ – ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಬೆಳಗಾವಿ:
ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಹರಿಸುವ ಬಗ್ಗೆ ಸರ್ಕಾರದಿಂದ ತೀರ್ಮಾನವಾದರೂ, ನೀರಿನ ಬಳಕೆಗಾಗಿ ನಿಗದಿಪಡಿಸಿರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವಶ್ಯಕ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 1 ಟಿಎಂಸಿ ನೀರು ಹರಿಸುವ ಕುರಿತು ಅಧಿಕಾರಿಗಳಿಂದ ಪತ್ರ ಬಂದಿದ್ದು, ಸರ್ಕಾರದಿಂದ ಈ ಕುರಿತು ಆದೇಶವೂ ಹೊರ ಬಿದ್ದಿದೆ.. ಆದರೆ ನೀರಿನ ಬಿಡುಗಡೆ ವೇಳೆ ಎಲ್ಲಾ ನಿಯಮಗಳು ಪಾಲನೆಯಲ್ಲಿರಬೇಕು,” ಎಂದರು.

ಹಿಡಕಲ್ ಜಲಾಶಯದಿಂದ ನೀರು ಹರಿಸುವ ವಿಷಯದಲ್ಲಿ ಮುನ್ನೆಚ್ಚರಿಕೆ
“ಕಾಮಗಾರಿ ಆರಂಭಕ್ಕೂ ಮೊದಲು ಹಿಡಕಲ್ ಡ್ಯಾಮ್ ನಿಂದ ಕೈಗಾರಿಕಾ ಬಳಕೆಗೆ ನೀರು ಹರಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೆವು.
ಆದರೆ ಇದೀಗ ಕುಡಿಯುವ ನೀರಿಗಾಗಿ ಸರ್ಕಾರವೇ ನಿರ್ಧಾರ ತೆಗೆದುಕೊಂಡಿದೆ. ಪ್ರಸ್ತುತ 0.58 ಟಿಎಂಸಿ ನೀರು ಪೂರೈಕೆಗಾಗಿ ಟೆಂಡರ್ ಕೂಡ ಕರೆದು ಕಾಮಗಾರಿಗಳನ್ನು ಆರಂಭಿಸಲಾಗಿದೆ. ಆದರೆ ಮುಂದಿನ ಹಂತಗಳಲ್ಲಿ ಯಾವುದೇ ನೀರು ಬಿಡುಗಡೆಗೂ ಮುನ್ನ ಎಲ್ಲಾ ನಿಯಮ, ಶರತ್ತುಗಳನ್ನು ಪಾಲನೆ ಮಾಡಬೇಕು,” ಎಂದು ಸಚಿವರು ಎಚ್ಚರಿಸಿದರು.

ರಾಯಬಾಗ ಕೆರೆ ಯೋಜನೆ ಮುಗಿಸುವ ಹಂತದಲ್ಲಿ
2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಆರಂಭವಾಗಿದ್ದ ರಾಯಬಾಗ ತಾಲೂಕಿನ 39 ಕೆರೆಗಳ ನೀರಾವರಿ ಯೋಜನೆಯು ಈಗ ಶೇ.99 ಮುಗಿದ ಹಂತದಲ್ಲಿದೆ. “ಈ ಯೋಜನೆಯಿಂದ ಮಳೆಯಾಶ್ರಿತ ಪ್ರದೇಶಗಳಿಗೆ ನಿಸ್ಸಂದೇಹವಾಗಿ ಉಪಯೋಗವಾಗಲಿದೆ. ಜಿಲ್ಲೆಯ ಅಲವು ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಶೀಘ್ರ ಚಾಲನೆ ನೀಡಲಿದ್ದಾರೆ,” ಎಂಬ ಮಾಹಿತಿಯನ್ನೂ ಸಚಿವರು ಹಂಚಿಕೊಂಡರು.
ನದಿ ಜಲ ಸ್ಥಿತಿ: ಕೃಷ್ಣಾ ನದಿಗೆ 80 ಸಾವಿರ ಕ್ಯೂಸೆಕ್ಸ್ ಹರಿವು
“ಈಗಾಗಲೇ ಜಿಲ್ಲೆಯ ಪ್ರಮುಖ ಜಲಾಶಯಗಳು ತುಂಬಿ ಬಿದ್ದಿವೆ. ನಾಳೆಯಿಂದ ಹಿಡಕಲ್ ಜಲಾಶಯದಿಂದ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೃಷ್ಣಾ ನದಿಗೆ ಸದ್ಯ 80 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ,” ಎಂದು ಅವರು ಮಾಹಿತಿ ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ಶಾಸಕ ದುರ್ಯೋಧನ ಐಹೊಳೆ, ಜಿಪಂ ಸಿಇಒ ರಾಹುಲ್ ಶಿಂಧೆ ಹಾಗೂ ನೀರಾವರಿ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು..