
78ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾಮಾಜಿಕ ನುಡಿ, ಶ್ರದ್ಧಾ ಪೂರ್ಣ ಶ್ಲಾಘನೆಗಳು
ಅಂಕಲಿ (ಚಿಕ್ಕೋಡಿ), ಆಗಸ್ಟ್ 1:
“ಫಲ ನೀಡದ ಅಕ್ಷರ ವ್ಯರ್ಥ. ಶ್ರಮವಿಲ್ಲದ ಬದುಕು ಶೂನ್ಯ” ಎಂಬಂತೆ ಜೀವನವನ್ನೇ ಒಂದು ಯಜ್ಞವಾಗಿ ರೂವಾರಿ ಮಾಡಿಕೊಂಡ ಡಾ. ಪ್ರಭಾಕರ ಕೋರೆ ಅವರ 78ನೇ ಜನ್ಮದಿನ, ಈ ಬಾರಿ ಕೇವಲ ಸ್ಮರಣೀಯವಲ್ಲ, ಪ್ರೇರಣಾದಾಯಕವೂ ಆಗಿತ್ತು. ಈ ವೈಭವದ ಸಂದರ್ಭದಲ್ಲಿ ವೇದಿಕೆಯಲ್ಲಿ ನುಡಿದ ಮಹಾಸ್ವಾಮಿಗಳ ನುಡಿಮುತ್ತುಗಳು, ಸಮಾಜಮುಖಿ ಚಿಂತನೆಯ ಶಕ್ತಿವಚನಗಳಾಗಿದ್ದವು.
“ಕೋರೆ ಎನ್ನುವ ಹೆಸರಲ್ಲೇ ಬೆಳಕು!”
ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಆಶೀರ್ವಚನ ನೀಡುತ್ತಾ –

> “ಮೊಬೈಲ್ ತಲೆ ತಗ್ಗಿಸುತ್ತದೆ, ಪುಸ್ತಕ ತಲೆ ಎತ್ತಿಸುತ್ತದೆ. ಡಾ. ಕೋರೆ ಅವರು ಸಮಾಜಕ್ಕೆ ಬೆಳಕಾಗಿದ್ದಾರೆ” ಎಂಬ ಮಾತುಗಳಿಂದ ಜನಮನ ತಟ್ಟಿದರು.

ಅವರು ತಮ್ಮ ಭಾಷಣದಲ್ಲಿ – “ಮನುಷ್ಯನ ಬದುಕು ನಿತ್ಯೋತ್ಸವವಾಗಬೇಕೆಂಬ ಸಂದೇಶ ನೀಡಿದರು. ಕೊಡುವ ಮನಸ್ಸು, ಅರ್ಪಣೆಯ ಬದುಕು ಇವರದು” ಎಂದರು.

ಕನಸನ್ನು ಕನಸಾಗಿ ಬಿಡದ ವ್ಯಕ್ತಿ:
ಕೊಲ್ಲಾಪುರ ಜೈನ ಮಠದ ಸ್ವಸ್ತಿಶ್ರೀ ಲಕ್ಷ್ಮೀಸೆನ ಭಟ್ಟಾರಕ ಸ್ವಾಮೀಜಿ ಕೋರೆ ಅವರನ್ನು “ಯುವಕರಿಗೆ ಪ್ರೇರಣೆಯ ವ್ಯಕ್ತಿತ್ವ” ಎಂದು ವರ್ಣಿಸಿ –
> “41 ವರ್ಷದಲ್ಲಿ 310ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಕಾರಣರಾಗಿ, ಡಾ. ಕೋರೆ ಉತ್ತರ ಕರ್ನಾಟಕಕ್ಕೆ ಶೈಕ್ಷಣಿಕ ದೀಪ ಉರಿದಿದ್ದಾರೆ” ಎಂದರು.

ಫೇಲ್ ಆದ ವಿದ್ಯಾರ್ಥಿ, ರ‍್ಯಾಂಕ್ ಕೊಡೋ ಸಾಧಕ”
ಸಂಸದ ಜಗದೀಶ ಶೆಟ್ಟರ್ ಮಾತನಾಡಿ,
“ದಕ್ಷಿಣದಂತೆ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಸಂಸ್ಥೆಗಳು ಆಗಿರಲಿಲ್ಲ. ಆದರೆ ಡಾ. ಕೋರೆ ಅವರ ದೂರದೃಷ್ಟಿಯಿಂದ ಈ ಭಾಗ ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದೆ. ಅವರು ಬಸವಣ್ಣನವರ ಕಾಯಕತತ್ತ್ವದ ಜೀವಂತ ಮಾದರಿ” ಎಂದು ಶ್ಲಾಘಿಸಿದರು.

ಕೋರೆ ಅವರ ಆತ್ಮಸಾಕ್ಷಾತ್ಕಾರ:
ಸ್ವತಃ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ,
“ನಾನು ಫೇಲ್ ಆದರೂ ನಿಲ್ಲಲಿಲ್ಲ. ಮೊದಲ ಕನ್ನಡ ಕಲಿತವನಾಗಿದ್ದೇನೆ. ನಮ್ಮ ತಂದೆ ಮರಾಠಿ ಶಾಲೆ ಆರಂಭಿಸಿದರು. ನಾನು ಭಾಷೆಯು ಹೆಸರಾಗಿ ಬೆಳೆದವನಲ್ಲ, ಎಲ್ಲಾ ಭಾಷೆಗಳನ್ನು ಪ್ರೀತಿಸುವವನಾಗಿ ಬೆಳೆದವನು” ಎಂದು ಹೇಳಿದರು.

ಮಯೂರ ಚಿತ್ರಮಂದಿರದಿಂದ ಕನ್ನಡ ಪ್ರಚಾರ, ಹಳ್ಳಿ ಥಿಯೇಟರ್ ಆರಂಭ, ಮೊದಲ ಸಕ್ಕರೆ ಕಾರ್ಖಾನೆ, ನಂತರ ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಸ್ಥಾನ – ಎಲ್ಲವೂ ನನ್ನ ಬದುಕಿನ ನಿರಂತರ ಯಾತ್ರೆಯ ಭಾಗ” ಎಂದೂ ಹೇಳಿದರು.
*ಸಮಾಜಮುಖಿ ಸೇವೆಗೆ ಸಾಕ್ಷಿ ಕಾರ್ಯಕ್ರಮ:*
ಈ ಸಂದರ್ಭದ ಅಂಗವಾಗಿ ಅಂಕಲಿಯಲ್ಲಿ ಭವ್ಯ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜರುಗಿದ್ದು, 8800 ಜನರಿಗೆ ಚಿಕಿತ್ಸೆ, 800 ಜನರಿಗೆ ಶಸ್ತ್ರಚಿಕಿತ್ಸಾ ಸಲಹೆ, 320 ರಕ್ತದಾನಿಗಳು ಪಾಲ್ಗೊಂಡರು. ಜೊತೆಗೆ ದೇಶ-ವಿದೇಶದ 78 ಕುಸ್ತಿಪಟುಗಳ ಜಂಗಿ ನಿಖಾಲಿ ಸ್ಪರ್ಧೆ ಕೂಡ ಪ್ರೇಕ್ಷಕರ ಮನ ಗೆದ್ದಿತು.
ಅಂಕಲಿ ಕ್ರೆಡಿಟ್ ಸೊಸಾಯಿಟಿಯಿಂದ ಗವಿಸಿದ್ದೇಶ್ವರ ಮಠಕ್ಕೆ ₹5 ಲಕ್ಷ ದೇಣಿಗೆ ನೀಡಲಾಯಿತು.