ಸಾಕ್ಷ್ಯ ನಾಶದ ನೆರಳು:
ಪಾಲಿಕೆಯ ಬಹುಕೋಟಿ ತೆರಿಗೆ ವಂಚನೆ
ಇನ್ನೂ ನಡೆಯದ ಲೋಕಾ ತನಿಖೆ..
ಲೋಕಾಯುಕ್ತ ನ್ಯಾಯಮೂರ್ತಿಗಳ ಭೇಟಿ ಹಿನ್ನೆಲೆಯಲ್ಲಿ ಅಧಿಕಾರಿಗಳಲ್ಲಿ ನಡುಕ ಶುರು.
ಪಾಲಿಕೆ ಆಯುಕ್ತರ ಪತ್ರಕ್ಕೆ ತನಿಖೆಯ ಸುಳಿವು ಬಿಟ್ಟುಕೊಡದ ಬೆಳಗಾವಿ ಲೋಕಾಯುಕ್ತ ಕಚೇರಿ.
ಪತ್ರ ಬರೆದು ತಿಂಗಳು ಗತಿಸಿದರೂ ತನಿಖೆ ವಿಳಂಬಕ್ಕೆ ಕಾರಣವಾದರೂ ಏನು?
ತೆರಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತವರಿಂದ ಸಾಕ್ಷಿ ನಾಶದ ಭೀತಿ.

ಬೆಳಗಾವಿ:
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ತೆರಿಗೆ ವಂಚನೆ ಪ್ರಕರಣ ಈಗ ಮತ್ತೊಮ್ಮೆ ಮರು ಚರ್ಚಗೆ ಕಾರಣವಾಗಿದೆ.
ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿಗಳು ಬೆಳಗಾವಿ ಜಿಲ್ಲೆಯ ಎರಡು ದಿನಗಳ ಭೆಟ್ಟಿಯ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ಬಗ್ಗೆ ಚಚರ್ೆ ಆರಂಭವಾಗಿದೆ.
ಪ್ರಕರಣದ ತನಿಖೆ ವಿಳಂಬದ ಹಿನ್ನಲೆಯಲ್ಲಿ ಆರೋಪ ಹೊತ್ತವರಿಂದ ಸಾಕ್ಷ್ಯ ನಾಶವಾಗಬಹುದೆಂಬ ಆತಂಕ ಬಹುತೇಕರನ್ನು ಕಾಡುತ್ತಿದೆ.

ಮಾಧ್ಯಮ ವರದಿಗಳ ಮೂಲಕ ಬಹಿರಂಗವಾದ ಈ ಪ್ರಕರಣದಲ್ಲಿ, ಪಾಲಿಕೆಗೆ ಬರೊಬ್ಬರಿ 7 ಕೋಟಿ ರೂಪಾಯಿ ತೆರಿಗೆ ವಂಚನೆಯಾಗಿದೆ ಎಂಬುದು ಆಯುಕ್ತೆ ಶುಭ ಬಿ ಅವರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತೆರಿಗೆ ವಂಚನೆ ಮಾಡಿದ ಆರೋಪ ಹೊತ್ತ ಕಂಪನಿಯಿಂದಲೇ ದಾಖಲೆಗಳನ್ನು ಒದಗಿಸಲಾಗದ ಹಿನ್ನೆಲೆಯಲ್ಲಿ ಪಾಲಿಕೆ ಕಂಪನಿಗೆ ಡಿಮ್ಯಾಂಡ್ ನೋಟೀಸ್ ನೀಡಿತ್ತು.
ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಕರಣದ ಕುರಿತು ಗಂಭೀರ ಚರ್ಚೆ ನಡೆದಿತ್ತು. ಅದೇ ವೇಳೆ ಮೇಯರ್ ಅವರಿಂದ ಲೊಕಾಯುಕ್ತ ತನಿಖೆಗೆ ರೂಲಿಂಗ್ ಕೂಡ ಬಂತು.
ಆದರೆ ಈ ನಿರ್ಧಾರವಾದ ತಿಂಗಳ ಕಾಲ ಪೆಂಡಿಂಗ್ ಇಟ್ಟುಕೊಳ್ಳಲಾಯಿತು. ಕೊನೆಗೆ ಆಯುಕ್ತರು ತನಿಖೆಗೆ ಪತ್ರ ಬರೆದರೂ ಲೋಕಾಯುಕ್ತ ಕಚೇರಿಯಿಂದ ಇದುವರೆಗೆ ಅಷ್ಟೊಂದು ಸ್ಪಂದನೆ ಕಂಡುಬಂದಿಲ್ಲ ಎನ್ನುವ ಮಾತಿದೆ. ಅದಕ್ಕೆ ಕಾರಣ ಕೂಡ ಗೊತ್ತಾಗಿಲ್ಲ.
ನಡುಕದ ನೆಲೆಯಲ್ಲಿ ಭ್ರಷ್ಟರ ಆಟ?
ಲೋಕಾಯುಕ್ತರು ನಾಳೆ (ಆ.6) ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ ಸುವರ್ಣ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ, ಬಳಿಕ ವಿವಿಧ ಇಲಾಖೆಗಳ ಕಚೇರಿಗಳಿಗೆ, ಅಂಗನವಾಡಿಗಳಿಗೆ, ಬಹುಶಃ ಜಿಲ್ಲಾಸ್ಪತ್ರೆಗೂ ಭೇಟಿ ನಿರೀಕ್ಷಿಸಲಾಗಿದೆ.
ಈ ಪೈಕಿ ಪಾಲಿಕೆ ಕಚೇರಿ ಭೇಟಿ ನೀಡುವರೇ ಎಂಬ ಖಚಿತತೆ ಸಿಗದಿದ್ದರೂ, ಇಲ್ಲಿ ಭ್ರಷ್ಟ ಅಧಿಕಾರಿಗಳು ತಾವು ರಕ್ಷಣೆಯಲ್ಲಿದ್ದೇವೆ ಎಂಬ ಭಾವನೆ ಹೊಂದಿರುವುದು ಆತಂಕಕಾರಿ. ಸಾಕ್ಷ್ಯ ನಾಶ ಮಾಡಲು ಪ್ರಯತ್ನ ನಡೆಯುತ್ತಿದೆ ಎಂಬ ಅಡಗಿದ ಚರ್ಚೆಗಳು ಇದೀಗ ಬಹಿರಂಗವಾಗಿವೆ.
ಮೌನದ ನ್ಯಾಯ ಪ್ರಕ್ರಿಯೆ. ಹೊಣೆ ಯಾರು?
ಈ ಪ್ರಕರಣದಲ್ಲಿ ಆರೋಪಿತ ಅಧಿಕಾರಿಗಳು ಇನ್ನೂ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ, ಅಮಾನತಿನ ಹೆಸರಲ್ಲಿ ನಿರ್ಲಿಪ್ತತೆ ಇಡೀ ವ್ಯವಸ್ಥೆಯ ನೈತಿಕತೆಯನ್ನು ಪ್ರಶ್ನೆಗೊಳಿಸುತ್ತಿದೆ. ನೋಟೀಸು ನೀಡಿದರೂ ಪ್ರತಿಕ್ರಿಯೆ ಇಲ್ಲ. ಸಾರ್ವಜನಿಕ ಹಿತಕ್ಕಾಗಿ ಪ್ರಾಮಾಣಿಕವಾಗಿ ಕೆಲಸಮಾಡುವ ಅಧಿಕಾರಿಗಳಲ್ಲದವರ ವಿರುದ್ಧ ಕ್ರಮವಿಲ್ಲದೆ, ನ್ಯಾಯಕ್ಕೆ ಪ್ರಾಮಾಣಿಕತೆ ಎಲ್ಲಿ ಉಳಿಯುತ್ತದೆ?

ಜನರ ಪ್ರಶ್ನೆ ಏನೆಂದರೆ…
7 ಕೋಟಿ ತೆರಿಗೆ ವಂಚನೆಯ ನಂತರವೂ ಆರೋಪ ಹೊತ್ತವರು ಸೇವೆಯಲ್ಲಿರೋದು ಯಾಕೆ?
ಆಯುಕ್ತರ ಪತ್ರಕ್ಕೂ ಪ್ರತಿಕ್ರಿಯೆ ನೀಡದ ಲೋಕಾಯುಕ್ತ ಕಚೇರಿಯ ಮೌನದ ಅರ್ಥವೇನು?
ಸಾಕ್ಷ್ಯ ನಾಶದ ಹಂತ ತಲುಪಿದಾಗ ತನಿಖೆಗೆ ವಿಳಂಬ ಏಕೆ?