93 ವರ್ಷದ ಟಿಳಕವಾಡಿ ಕ್ಲಬ್ ಲೀಜ್ ರದ್ದು:


:ಆಸ್ತಿ ರಕ್ಷಣೆಯಲ್ಲಿ ಮಹಾನಗರ ಪಾಲಿಕೆಯಿಂದ ದಿಟ್ಟ ಹೆಜ್ಜೆ.

ಪಾಲಿಕೆ ಆಯುಕ್ತರಿಂದ‌ ಮಹತ್ವದ ಆದೇಶ

ಪಾಲಿಕೆ ಸಭೆಯಲ್ಲಿ ಕ್ಲಬ್‌ ಬಗ್ಗೆ ಪ್ರಶ್ನೆ ಮಾಡಿದ್ದ ಉಪಮೇಯರ್ ವಾಣಿ ಜೋಶಿ. ಅವರ ವಾದ ಸಮರ್ಥಿಸಿದ್ದ ಶಾಸಕ ಅಭಯ.

ಬೆಳಗಾವಿ:

ಬೆಳಗಾವಿ ಮಹಾನಗರ ಪಾಲಿಕೆ ಮಹತ್ವದ ಆದೇಶ ಹೊರಡಿಸಿದ್ದು, ಹಲವು ದಶಕಗಳಿಂದ ಟಿಳಕವಾಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ 93 ವರ್ಷದ “ಟಿಳಕವಾಡಿ ರಿಕ್ರಿಯೇಷನ್ ಕ್ಲಬ್” ನ ಗುತ್ತಿಗೆ (ಲೀಜ್) ರದ್ದುಗೊಂಡಿದೆ.

ಪಾಲಿಕೆಯ ಆಯುಕ್ತೆ ಶುಭಾ ಬಿ ಅವರು ನಡೆಸಿದ ನ್ಯಾಯಾಲಯದ ವಿಚಾರಣೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ನಿಯಮ ಉಲ್ಲಂಘನೆಯ ಗಂಭೀರ ಆರೋಪ

1931ರಲ್ಲಿ ಕೇವಲ ₹1 ವಾರ್ಷಿಕ ಬಾಡಿಗೆಯುಳ್ಳ ಗುತ್ತಿಗೆ ಒಪ್ಪಂದದಡಿ ಕ್ಲಬ್‌ಗೆ ಈ ಆಸ್ತಿಯನ್ನು ನೀಡಲಾಗಿತ್ತು. ಒಪ್ಪಂದದ ಷರತ್ತುಗಳಂತೆ ಪ್ರತಿ 30 ವರ್ಷಕ್ಕೊಮ್ಮೆ ಬಾಡಿಗೆಯನ್ನು ಪರಿಷ್ಕರಿಸಬೇಕು, ಎಲ್ಲಾ ತೆರಿಗೆಗಳು, ಶುಲ್ಕಗಳನ್ನು ಪಾವತಿಸಬೇಕು ಹಾಗೂ ಆಸ್ತಿಯನ್ನು ಯಾವುದೇ ವ್ಯಾಪಾರಿಕ ಉದ್ದೇಶಕ್ಕೆ ಬಳಸಬಾರದು ಎಂಬ ಗಟ್ಟಿ ನಿಯಮಗಳು ಇದ್ದವು.

ಆದರೆ, ಕಳೆದ ಹಲವು ವರ್ಷಗಳಿಂದ ಬಾಡಿಗೆ ಪರಿಷ್ಕರಣೆ ನಡೆಯದೆ ಇರುವುದಲ್ಲದೆ, ₹1.21 ಕೋಟಿ ತೆರಿಗೆ ಮತ್ತು ದಂಡ ಬಾಕಿಯಾಗಿರುವುದರಿಂದ 2022ರಲ್ಲೇ ಪಾಲಿಕೆ ನೋಟಿಸ್ ನೀಡಿತ್ತು. ಈ ಸಂಬಂಧ ಕ್ಲಬ್ ಧಾರವಾಡ ಹೈಕೋರ್ಟ್‌ನ ಶರಣಾಗಿತ್ತು. ಆದರೆ, ಬಾಡಿಗೆ ಪರಿಷ್ಕರಣೆಯ ವಿಷಯ ಹೈಕೋರ್ಟ್‌ನಲ್ಲೇ ಉಳಿದಿದ್ದರೂ, ಇತರ ನಿಯಮ ಉಲ್ಲಂಘನೆ ವಿಚಾರವನ್ನು ಪಾಲಿಕೆ ತನಿಖೆಗೆ ಒಳಪಡಿಸಿತು.

ಬಾರ್ ಮತ್ತು ರೆಸ್ಟೋರೆಂಟ್ ಚಾಲನೆ ವಿವಾದದ ಕೇಂದ್ರದಲ್ಲಿ

ಪಾಲಿಕೆ ಸದಸ್ಯರು ಮತ್ತು ಸ್ಥಳೀಯ ಪ್ರತಿನಿಧಿಗಳ ವಿರೋಧದ ಮಧ್ಯೆ, ಕ್ಲಬ್ ಆವರಣದಲ್ಲಿ ಮದ್ಯ ಪೂರೈಕೆಯ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದವು. ಉಪಮೇಯರ್ ವಾಣಿ ಜೋಶಿ ಅವರು ಈ ವಿಷಯವನ್ನು ಪಾಲಿಕೆ ಸಭೆಯಲ್ಲಿ ಪ್ರಸ್ತಾಪಿಸಿದರು. ಶಾಸಕ ಅಭಯ ಪಾಟೀಲ ಸಹ ಈ ವಿಚಾರದಲ್ಲಿ ಕ್ರಮಕ್ಕೆ ಒತ್ತಾಯಿಸಿದರು.

ವಿಚಾರಣೆಯ ನಂತರ, ಕ್ಲಬ್ ಪ್ರತಿನಿಧಿಗಳು ಮದ್ಯ ಮಾರಾಟಕ್ಕೆ ಅನುಮತಿ ಹೊಂದಿದ್ದ ದಾಖಲೆಗಳನ್ನು ಸಲ್ಲಿಸಲು ವಿಫಲರಾದರು. ಇದನ್ನು ಗಮನದಲ್ಲಿ ತೆಗೆದುಕೊಂಡ ಆಯುಕ್ತರು, ಕ್ಲಬ್ ತನ್ನ ಮೂಲ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿದೆ ಎಂಬ ತೀರ್ಪು ನೀಡಿ ಲೀಜ್‌ ರದ್ದತಿ ಆದೇಶ ಹೊರಡಿಸಿದರು.

.

Leave a Reply

Your email address will not be published. Required fields are marked *

error: Content is protected !!