ಹುಕ್ಕೇರಿಯಲ್ಲಿ ಬದಲಾವಣೆ ಗಾಳಿ ಬೀಸತೊಡಗಿದೆ

  • ನಿರಂತರ ವಿದ್ಯುತ್ ಸರಬರಾಜು ಉದ್ಘಾಟಿಸಿ ಸಚಿವ ಜಾರಕಿಹೊಳಿ ಹೇಳಿಕೆ ಹುಕ್ಕೇರಿ : ಸಹಕಾರಿ ತತ್ವದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಲ್ಲಿ ಮಹತ್ವದ ಬೆಳವಣಿಗೆಗಳು ನಡೆದು ಹುಕ್ಕೇರಿ ಕ್ಷೇತ್ರದ ಸಹಕಾರ ಮತ್ತು ರಾಜಕೀಯದಲ್ಲಿ ಬದಲಾವಣೆ ಗಾಳಿ ಬೀಸತೊಡಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ತಾಲೂಕಿನ ಎಲಿಮುನ್ನೋಳಿ ಗ್ರಾಮದ ತೋಟಪಟ್ಟಿ ಮನೆಗಳ ಐಪಿ ಪೀಡರ್ ಮೇಲೆ ಬರುವ ನಿರಂತರ ವಿದ್ಯುತ್ ಪೂರೈಸುವ ಕಾಮಗಾರಿಯನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಜೀವನಾಡಿ ಎನಿಸಿರುವ ಈ ಎರಡು ಸಂಸ್ಥೆಗಳ ನಿರ್ದೇಶಕರು ಇದೀಗ ಜೇಡರ ಬಲೆಯಿಂದ ಹೊರಬಂದಿದ್ದು ಪರಿವರ್ತನೆ ಗಾಳಿಗೆ ಮುಖವೊಡ್ಡಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

ತೋಟದ ಮನೆಗಳಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕೆನ್ನುವ ಬಹುದಿನಗಳ ಕನಸನ್ನು ಕೇವಲ ಮೂರು ತಿಂಗಳಲ್ಲಿ ಈಡೇರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆ, ಗ್ರಾಹಕರ ದಿನಬಳಕೆಗೆ ಅನುಕೂಲವಾಗಿದೆ. ವಿದ್ಯುತ್ ಸಂಘದಿಂದ ಉತ್ತಮ ಆಡಳಿತ ನೀಡುವ ಉದ್ದೇಶ ಹೊಂದಲಾಗಿದೆ. ಹಾಗಾಗಿ ಬರುವ ಚುನಾವಣೆಯಲ್ಲಿ ತಮ್ಮ ಗುಂಪಿಗೆ ಮತ ನೀಡುವ ಮೂಲಕ ಸಹಕಾರಿ ಸಂಸ್ಥೆಯನ್ನು ಉಳಿಸಿ ಬೆಳೆಸಲು ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು.

ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಹಿರಣ್ಯಕೇಶಿ ಮತ್ತು ವಿದ್ಯುತ್ ಸಂಘದ ನಿರ್ದೇಶಕರಿಗೆ ತಡವಾಗಿ ಜ್ಞಾನೋದಯವಾದಂತಾಗಿದೆ. ಅನೇಕ ದಶಕಗಳ ದಬ್ಬಾಳಿಕೆ, ದೌರ್ಜನ್ಯದಿಂದ ಇದೀಗ ಹೊರಬಂದಿರುವ ನಿರ್ದೇಶಕರು ಇದೀಗ ಎಚ್ಚರಿಕೆ ಹೆಜ್ಜೆ ಇಡಬೇಕು. ತಾಲೂಕಿನ ಜನರಲ್ಲಿ ಅರಿವು ಮೂಡಿಸಿ ಜನವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಮಾಜಿ ಸಚಿವ ಶಶಿಕಾಂತ ನಾಯಿಕ, ಪುರಸಭೆ ಅಧ್ಯಕ್ಷ ಇಮ್ರಾನ್ ಮೊಮೀನ್, ಸಂಗಮ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಹಿರಣ್ಯಕೇಶಿ ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ವಿದ್ಯುತ್ ಸಂಸ್ಥೆಯ ಅಧ್ಯಕ್ಷ ಜಯಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೇಕರ, ನಿರ್ದೇಶಕರಾದ ರವೀಂದ್ರ ಹಿಡಕಲ್, ಶಶಿರಾಜ ಪಾಟೀಲ, ಬಸಗೌಡ ಮಗೆನ್ನವರ, ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ, ಸ್ಥಾನಿಕ ಅಭಿಯಂತರ ನೇಮಿನಾಥ ಖೆಮಲಾಪುರೆ, ವ್ಯವಸ್ಥಾಪಕ ದುರದುಂಡಿ ನಾಯಿಕ, ಮುಖಂಡರಾದ ರಿಷಭ್ ಪಾಟೀಲ, ಪವನ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯುತ್ ಸಂಘದ ಸ್ಟೋರ್ ಬಲ್ಡಿಂಗ್ ಉದ್ಘಾಟಿಸಲಾಯಿತು.

Leave a Reply

Your email address will not be published. Required fields are marked *

error: Content is protected !!