ಬೆಳಗಾವಿ:
ಬೆಳಗಾವಿ ನಗರದ ಹೃದಯ ಭಾಗದಲ್ಲಿರುವ ರಿ.ಸ. ನಂ. ೬೭೭, ೬೭೮, ೬೭೯/೧, ೬೮೦/೧, ೬೮೬/೧, ೬೮೬/೨, ೬೯೬, ೬೯೭/೨, ೬೯೮/೧ ಮತ್ತು ೬೯೮/೨ ಸೇರಿ ಒಟ್ಟು ೧೦ ಎಕರೆ ೨೦ ಗುಂಟೆ ಜಮೀನುಗಳನ್ನು ಕೃಷಿ ವಲಯದಿಂದ ವಾಣಿಜ್ಯ (ತರಕಾರಿ ಸಗಟು ಮಾರುಕಟ್ಟೆ) ವಲಯಕ್ಕೆ ಪರಿವರ್ತನೆ ಮಾಡಿದ ಸರ್ಕಾರದ ೨೦೧೪ರ ಡಿಸೆಂಬರ್ ೧೧ರ ಆದೇಶವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ ಮಾಹಿತಿಯಂತೆ, ಈ ಭೂ ಉಪಯೋಗ ಬದಲಾವಣೆ ಪ್ರಕ್ರಿಯೆಯಲ್ಲಿ ಸುಳ್ಳು ದಾಖಲೆಗಳು ಹಾಗೂ ಸತ್ಯ ಮರೆಮಾಚಿದ ಮಾಹಿತಿಗಳು ಬಳಕೆಯಾದವು ಎಂಬುದು ಸಾಬೀತಾಗಿದೆ. ದಿವಂಗತ ಬಸಲಿಂಗಪ್ಪ ಸಿದ್ದನಾಯಕ್ಕಪ್ಪ ಭಾವಿ ಅವರ ಹೆಸರಿನ ಭೂಮಿಯನ್ನು ಅವರು ಮೃತಪಟ್ಟ ನಂತರವೂ ಅರ್ಜಿದಾರರು ತಮಗೆ ಸೇರಿದಂತೆಯೇ ತೋರಿಸಿ ಅರ್ಜಿ ಸಲ್ಲಿಸಿದ್ದರೆಂಬ ಗಂಭೀರ ಅಂಶ ಬೆಳಕಿಗೆ ಬಂದಿದೆ.

ಹಿನ್ನೆಲೆ:
೨೦೧೩ರಲ್ಲಿ ಕೆಲವರು ಅರ್ಜಿ ಸಲ್ಲಿಸಿದ ನಂತರ, ಪ್ರಾಧಿಕಾರದ ಸಭೆಯಲ್ಲಿ ಈ
ಜಮೀನುಗಳನ್ನು ತರಕಾರಿ ಮಾರುಕಟ್ಟೆಗೆ ಪರಿವರ್ತಿಸಲು ಪ್ರಸ್ತಾವನೆ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿತ್ತು. ಅದರ ಆಧಾರದ ಮೇಲೆ ರಾಜ್ಯ ಸರ್ಕಾರ ೨೦೧೪ರಲ್ಲಿ ಶರತ್ತುಬದ್ಧ ಅನುಮೋದನೆ ನೀಡಿತ್ತು. ಆದರೆ, ರೈತ ಸಂಘಟನೆಗಳು ಮತ್ತು ಸ್ಥಳೀಯರು ಸಲ್ಲಿಸಿದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮರುಪರಿಶೀಲಿಸಲಾಯಿತು.
ಸರ್ಕಾರದ ಆದೇಶದಲ್ಲಿ ಸ್ಪಷ್ಟವಾಗಿ ಯಾವುದೇ ಸುಳ್ಳು ದಾಖಲೆ ಅಥವಾ ತಪ್ಪು ಮಾಹಿತಿ ಸಲ್ಲಿಸಿದರೆ ಭೂ ಉಪಯೋಗ ಬದಲಾವಣೆ ಸ್ವಯಂಚಾಲಿತವಾಗಿ ರದ್ದಾಗುತ್ತದೆ ಎಂದು ಉಲ್ಲೇಖಿಸಲಾಗಿತ್ತು. ಈ ಷರತ್ತಿನ ಉಲ್ಲಂಘನೆ ಸಾಬೀತಾದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದಿಂದ ಬಂದ ನಿರ್ದೇಶನದ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರ ಇದೀಗ ಆದೇಶವನ್ನು ರದ್ದುಗೊಳಿಸಿದೆ. ಈ ನಿರ್ಧಾರದಿಂದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವಿಶ್ವಾಸಾರ್ಹತೆ ಕಾಪಾಡಿಕೊಂಡಂತಾಗಿದ್ದು, ಸುಳ್ಳು ದಾಖಲೆಗಳ ಆಧಾರದ ಮೇಲೆ ನಗರ ಯೋಜನೆಯಲ್ಲಿ ಬದಲಾವಣೆ ಮಾಡುವವರಿಗೆ ಇದು ಎಚ್ಚರಿಕೆಯ ಸಂದೇಶವಾಗಿದೆ.