ನೇಕಾರ ಬದುಕಿಗೆ ಬೆಳಕು ತರಬೇಕು – ಕಾಗದದಲ್ಲಿ ಉಳಿಯದ ನೀತಿ ರೂಪಿಸಿ”

ಜವಳಿ ಸಚಿವರ ಸಭೆಯಲ್ಲಿ ಸಾಸಕ ಅಭಯ ಪಾಟೀಲ ಹೇಳಿಕೆ.

ಬೆಂಗಳೂರಿನಲ್ಲಿ‌ ಶುಕ್ರವಾರ ನಡೆದ ಸಭೆ..

ಆತ್ಮಹತ್ಯೆ ತಡೆ ಕ್ರಮ: ಬೆಳಗಾವಿ ದಕ್ಷಿಣದಲ್ಲಿ 22 ಕ್ಕೂ ಹೆಚ್ಚು ನೇಕಾರರು ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ಪುನರ್ವಸತಿ ಯೋಜನೆ ರೂಪಿಸಬೇಕು.

ಬೆಳಗಾವಿ, ಸೆ.12 –
“ಹೊಸ ಜವಳಿ ನೀತಿ ಬರೀ ಕಾಗದದಲ್ಲಿ ಉಳಿಯಬಾರದು. ಅದು ನೇಕಾರರ ಬದುಕನ್ನು ಬೆಳಗಿಸುವ ನವೋದ್ಯಮದ ದಾರಿ ಆಗಬೇಕು” ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬೆಂಗಳೂರಲ್ಲಿ ಜವಳಿ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಶಾಸಕ ಪಾಟೀಲರು ಸಮಗ್ರ ಮನವಿ ಪತ್ರವನ್ನು ಸಲ್ಲಿಸಿ, ನೇಕಾರರ ಕಷ್ಟ–ನೋವು ಮತ್ತು ನಿರೀಕ್ಷೆಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದ್ದಾರೆ. “ಬೆಳಗಾವಿ ತಾಲ್ಲೂಕಿನಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯುತ್ ಮಗ್ಗಗಳಿದ್ದು, ಅದರಲ್ಲಿ 8,732 ನನ್ನ ಕ್ಷೇತ್ರದಲ್ಲಿವೆ. ಅವರ ಸಂಕಷ್ಟ ನನಗೆ ನೇರವಾಗಿ ಗೊತ್ತಿದೆ” ಎಂದು ಅವರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

*ಮನವಿಯ ಮುಖ್ಯ ಅಂಶಗಳು*

*ನೇಕಾರ ಮಂಡಳಿ ರಚನೆ: ಜವಳಿ ಸಚಿವರ ಅಧ್ಯಕ್ಷತೆಯಲ್ಲಿ ನೇಕಾರರ ಪ್ರದೇಶದ ಶಾಸಕರನ್ನೂ ಸೇರಿಸಿ ಮಂಡಳಿ; ಎಲ್ಲಾ ಘಟಕಗಳಿಂದ ಸೆಸ್ ಸಂಗ್ರಹಿಸಿ ಶಿಕ್ಷಣ, ಆರೋಗ್ಯ, ಅಪಘಾತ ವಿಮೆ, ಸಾಮಾಜಿಕ ಸುರಕ್ಷತೆ ಒದಗಿಸಬೇಕು.*

*ಪರವಾನಿಗೆ ಸಡಿಲಿಕೆ: ಮಗ್ಗಗಳಲ್ಲಿ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಅಕೋಸ್ಟಿಕ್ ತಂತ್ರಜ್ಞಾನ ಅಳವಡಿಸಿದರೆ ಪರಿಸರ ಇಲಾಖೆಯ ನಿರಾಕ್ಷೇಪಣೆಯ ಅಗತ್ಯವಿಲ್ಲ; ಗಾರ್ಮೆಂಟ್ ಉದ್ಯಮಕ್ಕೂ ಇದೇ ವಿನಾಯಿತಿ ಅನ್ವಯಿಸಬೇಕು.*

*ಸಹಾಯಧನ* :

*ಸೋಲಾರ್ ಘಟಕಗಳಿಗೆ ಶೇ.75 ಸಹಾಯಧನ.*

*25 ಲಕ್ಷ ವೆಚ್ಚದ ರೇಪಿಯರ್–ಜಕಾರ್ಡ್ ಮಗ್ಗಗಳಿಗೆ ಶೇ.50 ನೆರವು.*

*ಕಟ್ಟಡವಿದ್ದರೂ ಕೇವಲ ಯಂತ್ರೋಪಕರಣ ಖರೀದಿಸುವ ನೇಕಾರರಿಗೂ ಶೇ.75 ಸಹಾಯಧನ.*

ಜಮೀನು ನಿಯಮ ಪರಿಷ್ಕರಣೆ: ಜವಳಿ ಪಾರ್ಕ್‌ಗಳಿಗೆ 15 ಎಕರೆ ಬದಲು ಕೇವಲ 5 ಎಕರೆ ಸಾಕು; ಗ್ರಾಮ–ನಗರ ಬೇಧವಿಲ್ಲದೆ ಚಿಕ್ಕ ಘಟಕಗಳಿಗೂ ಅವಕಾಶ.

*ಕೇಂದ್ರ–ರಾಜ್ಯ ಯೋಜನೆ ಸಂಯೋಜನೆ:* ಪಿಎಂಇಜಿಪಿ ಸೇರಿದಂತೆ ಕೇಂದ್ರ ಸರ್ಕಾರದ ಸೌಲಭ್ಯ ಪಡೆದವರಿಗೆ ರಾಜ್ಯ ಸಹಾಯಧನವೂ ಒದಗಿಸಬೇಕು.

ಆತ್ಮಹತ್ಯೆ ತಡೆ ಕ್ರಮ: ಬೆಳಗಾವಿ ದಕ್ಷಿಣದಲ್ಲಿ 22 ಕ್ಕೂ ಹೆಚ್ಚು ನೇಕಾರರು ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ಪುನರ್ವಸತಿ ಯೋಜನೆ ರೂಪಿಸಬೇಕು.

*ನಿವೇಶನ ಸಕ್ರಮಗೊಳಿಸುವಿಕೆ:* ಬಾಂಡಗಳ ಮೇಲೆ ಖರೀದಿಸಿದ ಕಾಗದದ ನಿವೇಶನಗಳನ್ನು ಕಾನೂನೀಕರಿಸಿ ನೇಕಾರ ಕುಟುಂಬಗಳಿಗೆ ಸರ್ಕಾರದ ಸೌಲಭ್ಯ ತಲುಪುವಂತೆ ನೋಡಿಕೊಳ್ಳಬೇಕು.

“ *ಸಬಲೀಕರಣದ ನವೋದ್ಯಮವೇ ಗುರಿ”*

ಸಭೆಯಲ್ಲಿ ಮಾತನಾಡಿದ ಪಾಟೀಲರು,
“ಜವಳಿ ನೀತಿ ಕೇವಲ ಉದ್ಯಮ ವಿಸ್ತರಣೆಯ ದಸ್ತಾವೇಜಾಗಿರಬಾರದು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ನೇಕಾರರನ್ನು ಸಬಲೀಕರಿಸುವ ನವೋದ್ಯಮದ ಮಾರ್ಗದರ್ಶಿಯಾಗಬೇಕು. ನೇಕಾರರ ಬದುಕಿಗೆ ಬೆಳಕು ತರುವ ನೀತಿಯೇ ಸಾರ್ಥಕತೆ” ಎಂದು ಅಭಿಪ್ರಾಯಪಟ್ಟರು.
ಈ ಸಭೆಯಲ್ಲಿ ಬೆಳಗಾವಿ ನೇಕಾರ ಮುಖಂಡ, ಸಂತೋಷ ಟೋಪಗಿ, ಬಸವರಾಜ ಕಾಮಕರ, ವಿನಾಯಕ ಕಾಮಕರ, ಗಜಾನನ ಗುಂಜೇರಿ ಸೇರಿದಂತೆ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!