ಗಣತಿ ಗೊಂದಲ: ಸತ್ತವರಿಗೂ ಆದೇಶ ಕೊಟ್ಟ ತಹಶೀಲ್ದಾರ..!
ಬೆಳಗಾವಿ ತಹಶೀಲ್ದಾರರನ್ನು ಕೇಳೊರೆ ಇಲ್ಲ. ಅವರು ಆಡಿದ್ದೇ ಆಟ..!
ಕ್ರಮಕ್ಕೆ ಡಿಸಿ ಸಹ ಹಿಂದೇಟು.
ಬೆಳಗಾವಿಯಲ್ಲಿ ಗಣತಿ ಬಂದ್ ಗೆ ಶಿಕ್ಷಕರ ನಿರ್ಧಾರ
ಬೆಳಗಾವಿ
ಹಿಂದುಳಿದ ವರ್ಗಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಗಣತಿ ಕಾರ್ಯಕ್ಕೆ ರಾಜ್ಯದಾದ್ಯಂತ ಚುರುಕು ಮೂಡಿದ್ದರೆ, ಬೆಳಗಾವಿಯಲ್ಲಿ ಮಾತ್ರ ಗೊಂದಲದ ಕತ್ತಲೆಯೇ ಆವರಿಸಿದೆ.
ಇದರ ಹಿಂದಿರುವ ಮೂಲ ಕಾರಣವೆಂದರೆ ಬೆಳಗಾವಿ ತಹಶೀಲ್ದಾರರ ಅವೈಜ್ಞಾನಿಕ, ನಿರ್ಲಕ್ಷ್ಯಪೂರ್ಣ ಆದೇಶ.

ಸತ್ತವರಿಗೂ ಆದೇಶ –
ತಹಶೀಲ್ದಾರರ ಕಚೇರಿಯಿಂದ ಹೊರಬಂದ ಆದೇಶಗಳ ಯಡವಟ್ಟನ್ನು ನೋಡಿ ಶಿಕ್ಷಕರು ಬೆಚ್ಚಿಬಿದ್ದಿದ್ದಾರೆ.
ಸತ್ತವರನ್ನೇ ಗಣತಿ ಕರ್ತವ್ಯಕ್ಕೆ ನೇಮಕ ಮಾಡಿರುವುದು, ನಿವೃತ್ತರ ಹೆಸರನ್ನು ಆ ಪಟ್ಟಿಯಲ್ಲಿ ಸೇರಿಸಿರುವುದು , ಅಲ್ಲದೇ ಅನಾರೋಗ್ಯದಿಂದ ಬಳಲುವವರು, ಗರ್ಭಿಣಿಯರು ಕೂಡ ಕರ್ತವ್ಯ ಪಟ್ಟಿಯಲ್ಲಿ ಸೇರಿದ್ದಾರೆ.ಆಡಳಿತದ ಕಾರ್ಯಪದ್ಧತಿಗೆ ನಾಚಿಕೆ ತರುವ ಸಂಗತಿ ಎಂದು ಶಿಕ್ಷಕರು ಕಿಡಿಕಾರಿದ್ದಾರೆ.
ಶಿಕ್ಷಕರ ಆಕ್ರೋಶ.
“ನಾವು ಸ್ವತಃ ಸರಿಯಾದ ಪಟ್ಟಿಯನ್ನು ತಯಾರಿಸಿ ಕೊಟ್ಟಿದ್ದರೂ, ತಹಶೀಲ್ದಾರರು ತಮ್ಮ ಮನಸ್ಸಿಗೆ ಬಂದಂತೆ ಬೇಕಾಬಿಟ್ಟಿ ಆದೇಶ ಹೊರಡಿಸಿದ್ದಾರೆ ಬೋಧನೆ ಬಿಟ್ಟು ದೂರದ ಹಳ್ಳಿಗಳಿಗೆ ಹೋಗಬೇಕೆಂಬ ಅನ್ಯಾಯ ನಮಗೆ ಮಾಡಲಾಗಿದೆ” ಎಂದು ಶಿಕ್ಷಕರ ಸಂಘದವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲೇರಿದ ಶಿಕ್ಷಕರು

ತಮಗಾದ ಅನ್ಯಾಯ ಸರಿಪಡಿಸಬೇಕೆಂದು ಶಿಕ್ಷಕರು ಜಿಲ್ಲಾಧಿಕಾರಿಗಳ ಕಚೇರಿ ಬಾಗಿಲು ತಟ್ಟಿದರು. ಅಪರ ಜಿಲ್ಲಾಧಿಕಾರಿಗಳು “ಗಣತಿ ಕಾರ್ಯಕ್ಕೆ ಅಡ್ಡಿ ತರುವಂತಿಲ್ಲ, ಸಹಕರಿಸಬೇಕು” ಎಂದು ಮನವಿ ಮಾಡಿದರೂ ಶಿಕ್ಷಕರ ಅಸಮಾಧಾನ ತಣಿಯಲಿಲ್ಲ. ತಹಶೀಲ್ದಾರರನ್ನು ಸಂಪರ್ಕಿಸುವ ಪ್ರಯತ್ನವೂ ವಿಫಲವಾದುದು ಶಿಕ್ಷಕರ ಅಸಹನೆಗೆ ಮತ್ತಷ್ಟು ಕಾರಣವಾಯಿತು.
ವಿಶ್ವಾಸಾರ್ಹತೆ ಪ್ರಶ್ನೆಗೆ ಒಳಗಾದ ಗಣತಿ
ಸತ್ತವರಿಗೂ ಆದೇಶ ಹೊರಡುವ ಮಟ್ಟದ ನಿರ್ಲಕ್ಷ್ಯದಲ್ಲಿ ಸಿದ್ಧವಾಗುವ ಗಣತಿ ಅಂಕಿಅಂಶಗಳು ಹೇಗೆ ವಿಶ್ವಾಸಾರ್ಹವಾಗಿರುತ್ತವೆ ಎಂಬ ಪ್ರಶ್ನೆ ಎದ್ದಿದೆ.

“ಜನಗಣತಿ ಎಂಬ ಗಂಭೀರ ಕಾರ್ಯವನ್ನೇ ತಹಶೀಲ್ದಾರರು ತಮಾಷೆಯನ್ನಾಗಿಸಿದ್ದಾರೆ” ಎಂಬ ಮಾತು ಶಿಕ್ಷಕರ ನಡುವೆ ಕೇಳಿ ಬರುತ್ತಿದೆ.
ಇಂಥ ಗಂಭೀರ ಕಾರ್ಯದಲ್ಲಿ ತಹಶೀಲ್ದಾರರ ನಿರ್ಲಕ್ಷ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷಕರು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿರುವುದು ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ.
ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ, ತಪ್ಪಾದ ಆದೇಶಗಳನ್ನು ಹಿಂಪಡೆಯದೇ ಹೋದರೆ, ಗಣತಿ ಕಾರ್ಯವೇ ನಂಬಿಕೆ ಕಳೆದುಕೊಳ್ಳುವ ಅಪಾಯ ಎದುರಾಗಿದೆ.