ಕಿತ್ತೂರು ಉತ್ಸವದಲ್ಲಿ ಕನ್ನಡ ಕಲಾವಿದರಿಗೆ ಅವಮಾನ..!

ಎಸ್ಪಿ ಭೀಮಾಶಂಕರ ಗುಳೇದ್ ವರ್ತನೆಗೆ ತೀವ್ರ ವಿರೋಧದ ಧ್ವನಿ

ಎಸ್ಪಿಯವರ ವರ್ತನೆ ವಿವಾದದ ಕೇಂದ್ರ*

ಕನ್ನಡ ಕಲಾವಿದರ ಸಮಯ ಕಡಿತ, ಹಿಂದಿ ಕಲಾವಿದರಿಗೆ ಆದ್ಯತೆ*

ಕಿತ್ತೂರು (ಬೆಳಗಾವಿ):
ರಾಣಿ ಚನ್ನಮ್ಮನ ಧೈರ್ಯ, ಕನ್ನಡ ಸಂಸ್ಕೃತಿ ಮತ್ತು ಸ್ವಾಭಿಮಾನದ ಸಂಕೇತವಾದ ಕಿತ್ತೂರು ಉತ್ಸವ ಈ ಬಾರಿ ಸಂಭ್ರಮಕ್ಕಿಂತ ವಿವಾದದಿಂದಲೇ ಹೆಚ್ಚು ಚರ್ಚೆಗೆ ಕಾರಣವಾಗಿದೆ.
ಸ್ಥಳೀಯ ಕನ್ನಡ ಕಲಾವಿದರನ್ನು ಕಡೆಗಣಿಸಿ, ಮುಂಬೈ ಮೂಲದ ಹಿಂದಿ ಗಾಯಕಿ ನೀತಿ ಮೋಹನ್ ಅವರಿಗೆ ಆದ್ಯತೆ ನೀಡಿರುವುದು ಉತ್ಸವದ ಗೌರವಕ್ಕೂ ಕಿತ್ತೂರಿನ ಆತ್ಮಸ್ಪೂರ್ತಿಗೂ ಧಕ್ಕೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

*ಎಸ್ಪಿಯವರ ವರ್ತನೆ ವಿವಾದದ ಕೇಂದ್ರ*

ಉತ್ಸವದ ಅಂತಿಮ ದಿನ ವೇದಿಕೆ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಭೀಮಾಶಂಕರ ಗುಳೇದ್ ಅವರು ಹಿಂದಿ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೊಂದಿಗೆ ಏಕವಚನದಲ್ಲಿ ವಾಗ್ವಾದ ನಡೆಸಿದರೆಂಬ ಮಾಹಿತಿ ಈಗ ಹೊರಬಂದಿದೆ.

ಅವರ ಮಾತಿನ ಶೈಲಿ ಮತ್ತು ವರ್ತನೆ “ಸಾಂಸ್ಕೃತಿಕ ವೇದಿಕೆಯ ಶಿಷ್ಟತೆಗೆ ಧಕ್ಕೆ ತಂದಿದೆ” ಎಂಬ ಟೀಕೆಗಳು ಸ್ಥಳೀಯ ವಲಯಗಳಿಂದ ಕೇಳಿಬರುತ್ತಿವೆ.

*ಕನ್ನಡ ಕಲಾವಿದರ ಸಮಯ ಕಡಿತ, ಹಿಂದಿ ಕಲಾವಿದರಿಗೆ ಆದ್ಯತೆ*

ಉತ್ಸವದ ಮೂರನೇ ದಿನ ಬೆಳಿಗ್ಗೆ ಹಿಂದಿ ಕಲಾವಿದರ ತಂಡದ ಸೌಂಡ್ ಸಿಸ್ಟಮ್ ವ್ಯವಸ್ಥೆ ವಿಳಂಬಗೊಂಡ ಕಾರಣದಿಂದಾಗಿ, ನಿಗದಿತ ವೇಳೆಗೆ ಪ್ರಾರಂಭವಾಗಬೇಕಿದ್ದ ವಿಚಾರಗೋಷ್ಟಿ ಎರಡು ಗಂಟೆ ತಡವಾಯಿತು.
ಇದರಿಂದಾಗಿ ಸುಗಮ ಸಂಗೀತ, ಭಾವಗೀತೆ, ಹಾಸ್ಯ ಪ್ರದರ್ಶನ ಸೇರಿದಂತೆ ಕನ್ನಡ ಕಲಾವಿದರ ಕಾರ್ಯಕ್ರಮಗಳನ್ನು ತುರ್ತುವಾಗಿ ಮುಗಿಸಬೇಕಾದ ಪರಿಸ್ಥಿತಿ ಉಂಟಾಯಿತು.


ಸಂಜೆ ವೇಳೆಗೆ, ಪ್ರಸಿದ್ಧ ಕಲಾವಿದರಾದ ಹನುಮಂತ ಲಮಾಣಿ ಮತ್ತು ಬಾಳು ಬೆಳಗುಂದಿ ಅವರನ್ನು ಮುಖ್ಯ ದ್ವಾರದಲ್ಲೇ ಪೊಲೀಸರು ನಿಲ್ಲಿಸಿ ಒಳಗೆ ಬಿಡದ ಘಟನೆ ಉತ್ಸವದ ಗೌರವಕ್ಕೆ ಕಲೆತುಂಬಿತು.
“ನಾವು ಕಲಾವಿದರು, ಹಾಡು ಹೇಳಲು ಬಂದಿದ್ದೇವೆ” ಎಂದರೂ ಅವರ ಮನವಿ ಕೇಳಿಸಲಿಲ್ಲ. ಕೊನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಮಧ್ಯಪ್ರವೇಶ ಮಾಡಿದ ನಂತರವೇ ಅವರಿಗೆ ವೇದಿಕೆಗೆ ಪ್ರವೇಶ ಸಿಕ್ಕಿತು.
——
*ವೇದಿಕೆಯ ವೇಳಾಪಟ್ಟಿ ಅಸ್ತವ್ಯಸ್ತ*

ಎಂ.ಡಿ. ಪಲ್ಲವಿ ಅವರ ಗಾಯನ ಮುಗಿದ ತಕ್ಷಣ ಹನುಮಂತ ಲಮಾಣಿ ಗಣೇಶ ಸ್ತುತಿ ಹಾಡು ಪ್ರಾರಂಭಿಸಿದಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಗಮನವಾಯಿತು. ತಕ್ಷಣವೇ ಕಾರ್ಯಕ್ರಮ ಸ್ಥಗಿತಗೊಂಡು, ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ನಡೆಯಿತು.
ನಂತರ ಬಾಳು ಬೆಳಗುಂದಿಗೆ ಹಾಡುವ ಅವಕಾಶ ನೀಡಲಾಗಿದೆಯಾದರೂ, ವೇದಿಕೆಯ ಶಿಸ್ತು ಮತ್ತು ಗೌರವ ಅಸ್ತವ್ಯಸ್ತಗೊಂಡ ದೃಶ್ಯ ಎಲ್ಲರ ಕಣ್ಣಿಗೆ ಬಿತ್ತು.

*ಎಸ್ಪಿಯವರ ವರ್ತನೆಗೆ ಆಕ್ರೋಶ*

ನೀತಿ ಮೋಹನ್ ಅವರ ಪ್ರದರ್ಶನಕ್ಕೆ ಸಮಯ ತಡವಾದ ಹಿನ್ನೆಲೆಯಲ್ಲಿ, ಎಸ್ಪಿ ಭೀಮಾಶಂಕರ ಗುಳೇದ್ ಅವರು ವೇದಿಕೆಯ ಕೆಳಗೇ ಅಧಿಕಾರಿಯೊಂದಿಗೆ ತೀವ್ರ ಧಾಟಿಯಲ್ಲಿ ವಾಗ್ವಾದ ನಡೆಸಿದರೆಂಬ ಮಾಹಿತಿ ಈ ಎಲ್ಲಕ್ಕೂ ಕಾರಣವಾಗಿದೆ
“ಈ ಧಾಟಿಯು ಕಿತ್ತೂರಿನ ಸಂಸ್ಕೃತಿಯ ವೇದಿಕೆಯ ಗೌರವಕ್ಕೂ ಹಾನಿಯಾಗಿದೆ” ಎಂದು ಸಾಂಸ್ಕೃತಿಕ ವಲಯಗಳು ಕಿಡಿಕಾರಿವೆ.

*ಕನ್ನಡಪರ ಸಂಘಟನೆಗಳ ತೀವ್ರ ಆಕ್ರೋಶ*

“ರಾಣಿ ಚನ್ನಮ್ಮನ ಹೆಸರಿನ ಉತ್ಸವದಲ್ಲಿ ಕನ್ನಡ ಕಲಾವಿದರನ್ನು ತಳ್ಳಿಹಾಕಿ ಹಿಂದಿ ಕಲಾವಿದರಿಗೆ ಮಣೆ ಹಾಕೋದು ಕನ್ನಡಿಗರ ಆತ್ಮಗೌರವಕ್ಕೆ ಅವಮಾನ!” ಎಂದು ಕನ್ನಡಪರ ಸಂಘಟನೆಗಳು ಕಿಡಿಕಾರಿವೆ.
“ಉತ್ಸವಗಳು ಕನ್ನಡ ಸಂಸ್ಕೃತಿಯ ವೇದಿಕೆಗಳಾಗಬೇಕು; ಅಧಿಕಾರಿಗಳ ಹಸ್ತಕ್ಷೇಪದಿಂದ ಅದು ನಾಟಕದ ವೇದಿಕೆಯಾಗಬಾರದು” ಎಂದು ಅವರು ಎಚ್ಚರಿಸಿದ್ದಾರೆ.

*ವಿವಾದ ರಾಜ್ಯಮಟ್ಟದ ಮಟ್ಟಕ್ಕೆ*

ಈ ಘಟನೆಯ ನಂತರ ರಾಜ್ಯ ಮಟ್ಟದಲ್ಲಿಯೂ ಇದರ ಬಗ್ಗೆ ಚರ್ಚೆ ಆರಂಭವಾಗಿದೆ.
ಕನ್ನಡ ಕಲಾವಿದರಿಗೇ ವೇದಿಕೆಯ ಮೊದಲ ಆದ್ಯತೆ ನೀಡಬೇಕು ಎಂಬ ಬೇಡಿಕೆ ಮತ್ತೆ ಗಟ್ಟಿಯಾಗಿ ಮೊಳಗುತ್ತಿದೆ.
ಕಿತ್ತೂರಿನಲ್ಲಿ ನಡೆದ ಈ ಘಟನೆ ಕನ್ನಡದ ಸ್ವಾಭಿಮಾನಕ್ಕೆ ಹೊಕ್ಕ ಬೆಂಕಿಯಂತಾಗಿದೆ — ಅದನ್ನು ನಂದಿಸುವ ಕೆಲಸ ಸರ್ಕಾರವೇ ಮಾಡಬೇಕಿದೆ ಎಂಬ ಒತ್ತಾಯ ಸಾಂಸ್ಕೃತಿಕ ವಲಯಗಳಿಂದ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!