ಘಟಪ್ರಭಾ ದಲ್ಲಿ ನಡೆದ ಅಮಾನವೀಯ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನಾವೇನು ಪಾಪಿಸ್ತಾನದಲ್ಲಿ ಇದ್ದೇವಾ ಎನ್ನುವ ಆತಂಕಕಾರಿ ಮಾತುಗಳು ಬಾರದೇ ಇರವು.
ವೀರ ಕಿತ್ತೂರು ಚನ್ನಮ್ಮ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಬೀಡು ಎಂದು ಕರೆಯಿಸಿಕೊಳ್ಳುವ ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಗೆ ರಕ್ಷಣೆ ಇಲ್ಲ ಎಂದರೆ ಆಡಳಿತ ಅದರಲ್ಲೂ ಪೊಲೀಸ್ ವ್ಯವಸ್ಥೆ ಯಾವ ಮಟ್ಟಕ್ಕೆ ಕುಸಿದು ಹೋಗಿರಬಹುದು ಎನ್ನುವ ಊಹೆ ತಮಗೆ ಬಿಟ್ಟಿದ್ದು.
ಇಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಅವಳನ್ನು ಬೆತ್ತಲೆ ಮಾಡಿ ವಿಡಿಯೋ ಮಾಡಿ ನಂತರ ಚಪ್ಪಲಿ ಹಾರ ಹಾಕಿ ರಸ್ತೆ ತುಂಬ ಮೆರವಣಿಗೆ ಮಾಡ್ತಾರೆ ಅಂದರೆ ನಾವು ಯಾವ ನಾಡಿನಲ್ಲಿ ಬದುಕುತ್ತಿದ್ದೇವೆ ಎನ್ನುವ ಪ್ರಶ್ನೆ ಬಾರದೇ ಇರದು. ಇಂತಹ ಅಮಾನವೀಯ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ನಡೆದಿದ್ದು ಘಟಪ್ರಭಾ ದಲ್ಲಿ.
ಕಳೆದ ರಾತ್ರಿ ಹೊತ್ತು ರಾಜಾರೋಷವಾಗಿ ಕೆಲವರು ಮಹಿಳೆಗೆ ಚಪ್ಪಲಿ ಹಾರ ಹಾಕಿ ಹಲ್ಲೆ ಮಾಡುತ್ತ ಘೋಷಣೆ ಕೂಗುತ್ತ ಹೊರಟರೂ ಕೂಡ ಅಲ್ಲಿನ ಪೊಲೀಸರು ಏನ್ ಮಾಡುತ್ತಿದ್ದರು ಎನ್ನುವ ಪ್ರಶ್ನೆ ಆ ಇಲಾಖೆಯ ವ್ಯವಸ್ಥೆ ದಾರಿ ತಪ್ಪಿದೆ ಎನ್ನುವುದಕ್ಕೆ ಸಾಕ್ಷಿ.
ಮೆರವಣಿಗೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಸಂಬಂಧಿಸಿದವರನ್ನು ಹೆಡಮುರಿ ಕಟ್ಟುವ ಕೆಲಸವನ್ನು ಘಟಪ್ರಭಾ ಪೊಲೀಸರು ಮಾಡಿದ್ದರೆ ಭೇಷ್ ಎನ್ನಬಹುದಿತ್ತು. ಆದರೆ ಇಷ್ಟೆಲ್ಲ ಅವಾಂತರ ನಡೆಯುವಾಗ ಅತ್ತ ಹತ್ತಿರಕ್ಕೂ ಸುಳಿಯದ ಪೊಲೀಸ್ ವ್ಯವಸ್ಥೆ ಗೆ ಏನು ಅಂತ ಕರೆಯಬೇಕು ಎನ್ನುವುದು ತಮಗೆ ಬಿಟ್ಡಿದ್ದು.
ಕೊನೆಗೆ ಮಹಿಳೆ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಮೇಲೆ ಅವಳ ಹೇಳಿಕೆ ತೆಗೆದುಕೊಳ್ಳುವ ಘನಂದಾರಿ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಇಲ್ಲಿ ಎಸ್ಪಿ ಅವರು ಮೊದಲು ಘಟಪ್ರಭಾ ಪೊಲೀಸ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿದೆ.
ಪ್ರತಿಕ್ತಿಯೆಗೆ ಸಿಗದವರು..! ಇಂತಹುದೊಂದು ಅಮಾನವೀಯ ಘಟನೆ ನಡೆದ ಸಂದರ್ಭದಲ್ಲಿ ಹಿರಿಯ ಪೊಲೀಸರು ಅಲರ್ಟ್ ಆಗಿರಬೇಕು. ಅಷ್ಟೇ ಅಲ್ಲ ತುರ್ತು ಕ್ರಮಕ್ಕೆ ಮುಂದಾಗಬೇಕು. ಆದರೆ ಇಲ್ಲಿ ಏನಾಗಿದೆ ಅಂದರೆ, ಘಟನೆ ಬಗ್ಗೆ ಮಾಧ್ಯಮದವರು ಬೆಳಗಾವಿ ಎಸ್ಪಿ ಅವರ ಕಚೇರಿ ಮೊಬೈಲ ನಂಬರಿಗೆ ಕಾಲ್ ಮಾಡಿದರೆ ಅವರು ಅದನ್ನು ಫಾರ್ವರ್ಡ ಮಾಡಿದ್ದರು.
ಹೀಗಾಗಿ ಆ ಕರೆ ನೇರವಾಗಿ ಕಂಟ್ರೋಲ್ ರೂಮಗೆ ಹೋಗುತ್ತಿತ್ತು. ಅವರು ಇನ್ನೂ ಠಾಣೆಯಿಂದ ಮಾಹಿತಿ ಬಂದಿಲ್ಲ ಎಂದು ಕಥೆ ಹೇಳುತ್ತ ಕುಳುತುಬಿಟ್ಟರು. ಅಂದರೆ ಇಂತಹ ಗಂಭೀರ ಸ್ವರೂಪದ ಘಟನೆಗಳನ್ನು ಹಿರಿಯ ಅಧಿಕಾರಿಗಳು ಎಷ್ಟು ಹಗುರವಾಗಿ ತೆಗೆದುಕೊಳ್ಳುತ್ತಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಇಲ್ಲಿ ಒಂದು ಮಾತು ಸ್ಪಷ್ಟವಾಗಿ ಹೇಳುವುದು ಏನೆಂದರೆ. ಸಂಜೀವ ಪಾಟೀಲರು ಎಸ್ಪಿ ಆಗಿದ್ದ ಸಂದರ್ಭದಲ್ಲಿ ಯಾವುದೇ ಘಟನೆ ನಡೆದರೆ ಮುಚ್ಚು ಮರೆಯಿಲ್ಲದೇ ಹಂಚಿಕೊಳ್ಳುತ್ತಿದ್ದರು.. ಮೇಲಾಗಿ ಫೋನ್ ಇನ್ ಕಾರ್ಯಕ್ರಮ ಕ್ಕೆ ಅವರು ಹೆಸರಾಗಿದ್ದವರು. ಆದರೆ ಈಗಿನ ಎಸ್ಪಿ ಅವರು ಪೋನ್ ಗೂ ಸಿಗಲ್ಲ. ವ್ಯತ್ಯಾಸ ಇಷ್ಟೆ.