ಡಿಸೆಂಬರ 4 ರಿಂದ 15 ರವರೆಗೆ ಅಧಿವೇಶನ. ಒಲ್ಲದ ಮನಸ್ಸಿನಿಂದ ಅಧಿವೇಶನಕ್ಕೆ ರೆಡಿಯಾದ ಸರ್ಕಾರ.
ಅಧಿವೇಶನಕ್ಕೆ 20 ಕೋಟಿ ವೆಚ್ಚ. ಹೈರಾಣಾಗುತ್ತಿರುವ ಬೆಳಗಾವಿ ಅಧಿಕಾರಿಗಳು.
ಬೆಳಗಾವಿ.
ಗಡಿನಾಡ ಬೆಳಗಾವಿ ಮತ್ತೇ ಬರೊಬ್ಬರಿ ಹತ್ತು ದಿನಗಳ ಸರ್ಕಾರಿ ಜಾತ್ರೆಗೆ ಸಜ್ಜಾಗುತ್ತಿದೆ.
ಈ ಜಾತ್ರೆಗೆ ಬರುವ ಭಕ್ತರಿಗೆ ವಸತಿ, ಊಟೋಪಚಾರದ ವ್ಯವಸ್ಥೆಯ ಬಗ್ಗೆ ಅರ್ಚಕರು ತಲೆಬಿಸಿ ಮಾಡಿಕೊಂಡಿದ್ದಾರೆ. ಇಲ್ಲಿ ಏನಾದರೂ ಹೆಚ್ಚುಕಡಿಮೆ ಆಗಿ ದೊಡ್ಡ ಮತ್ತು ಸಣ್ಣ ಸಣ್ಣ’ದೇವರು’ ಮುನಿಸಿಕೊಂಡರೆ ಅರ್ಚಕರ ನೌಕರಿ ಖತಂ.
ಅಂದ ಹಾಗೆ ಈ ಹತ್ತು ದಿನಗಳ ಜಾತ್ರೆಗೆ ಖರ್ಚಾಗುವುದು ಬರೊಬ್ಬರಿ 20 ಕೋಟಿ ಹಣ. ಇದನ್ನು ಹೊರಗಿನ ದೇವರುಗಳ ಕೊಡುತ್ತಿಲ್ಲ. ಭಕ್ತರು ವಿವಿಧ ರೂಪಗಳಿಂದ ಹುಂಡಿಗೆ ಹಾಕಿದ ಹಣವನ್ನು ಇಲ್ಲಿ ವ್ಯಯ ಮಾಡಲಾಗುತ್ತಿದೆ.
ಇಷ್ಟೆಲ್ಲ ಹೇಳಿದ ಇದು ಯಾವ ಜಾತ್ರೆ ಅಂತ ತಿಳಿದಿರಲೂ ಬಹುದು. ಆದರೂ ಹೇಳುವೆ ಕೇಳಿ.

ಅಂದ ಹಾಗೆ ಅರ್ಚಕರು ಅಂದರೆ ಬೆಳಗಾವಿಯ ಅಧಿಕಾರಿಗಳು. ಭಕ್ತರು ಅಂದರೆ ಜನ. ದೇವರು ಅಂದರೆ ಬೆಂಗಳೂರಿನಿಂದ ಬರುವ ಮಂತ್ರಿಗಳು, ಅಧಿಕಾರಿಗಳು
ಇದೇ ಬರುವ ಡಿಸೆಂಬರ 4 ರಿಂದ 15 ರವರೆಗೆ 450 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ಸುವರ್ಣ ವಿಧಸನಸೌಧದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಚಳಿಗಾಲ ಅಧಿವೇಶನ ನಡೆಸಲಿದೆ. ಇಲ್ಲಿ ಅಧಿವೇಶನ ನಡೆಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಅಧಿಕಾರಿಶಾಹಿಗಳಿಗೆ ಮನಸ್ಸೇ ಇರಲಿಲ್ಲವಂತೆ. ಆದರೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಒತ್ತಡದ ಹಿನ್ನೆಲೆಯಲ್ಲಿ ಈ ಅಧಿವೇಶನ ನಡೆಸಲು ಒಪ್ಪಿ ಕೊಂಡಿದೆ. ಅದು ಬೇರೆ ಮಾತು ಬಿಡಿ.

ಇಲ್ಲಿ ಅಧಿವೇಶನಕ್ಕೆ ಬಂದವರಿಗೆ ಊಟ, ವಸತಿ, ಓಡಾಡೊದಕ್ಕೆ ಕಾರು ‘ಬಾರಿ’ಗೆ ಸರ್ಕಾರವೇ ಬರೊಬ್ಬರಿ ಕನಿಷ್ಟ 20 ಕೋಟಿ ರೂ ವೆಚ್ಚ ಮಾಡುತ್ತದೆ . ಈ ಹಿಂದೆ 17. ಕೋಟಿ ವೆಚ್ಚ ಮಾಡಿತ್ತು.
ಹೋಗಲಿ..ಇಷ್ಟೆಲ್ಲ ವೆಚ್ಚ ಮಾಡಿದರೆ ಕರ್ನಾಟಕ ಕ್ಕೆ ಅಲ್ಲ ಉತ್ತರ ಕರ್ನಾಟಕಕ್ಕೆ ಏನಾದರೂ ಅನುಕೂಲ ಆಗಿದೆಯಾ? ಉತ್ತರ ಕರ್ನಾಟಕ ಬಿಡ್ರಿ. ಸೌಧ ನಿರ್ಮಿಸಿದ ಬೆಳಗಾವಿ ಗ್ರಾಮೀಣ ಕ್ಷೇತ್ರ ಕ್ಕೆ ಅನುಕೂಲ ಆಗಿದೆಯಾ? ಊಹುಂ.

ಹೀಗಾಗಿ ಕಳೆದ ಪಾಲಿಕೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಸತೀಶ್ ಜಾರಕಿಹೊಳಿ ಹೇಳಿದಂತೆ ಇಲ್ಲಿಯೂ ಹತ್ತು ದಿನಗಳ ಕಾಲ ತೌಡು ಕುಟ್ಟುವ ಕೆಲಸವೇ ಆಗಬಹುದೇನೋ?!
ಅದೆಲ್ಲಾ ಬಿಡಿ. ಸೌಧ ಕಟ್ಟಿದ ನಂತರದಿಂದ ಇಲ್ಲಿಯವರೆಗೆ ಬೆಂಗಳೂರಿನಲ್ಲಿರುವ ದೊಡ್ಡ ದೊಡ್ಡ ಕಚೇರಿಗಳು ಬೆಳಗಾವಿಗೆ ಸ್ಥಳಾಂತರವಾಗಬೇಕು ಎನ್ನುವ ಬೇಡಿಕೆ ಇದೆ. ಪ್ರತಿಯೊಂದು ಸಲ ಅಧಿಕಾರದಲ್ಲಿದ್ದವರು ಈ ನಿಟ್ಟಿನಲ್ಲಿ ಭರವಸೆ ನೀಡಿದ್ದೇ ನೀಡಿದ್ದು. ಆದರೆ ಅದೂ ಆಗಲಿಲ್ಲ. ಇನ್ನು ಅಭಿವೃದ್ಧಿ ಬಗ್ಗೆ ಮಾತೇ ಮಾತು. ಅವೂ ಚಾಲ್ತಿಯಲ್ಲಿ ಬರಲಿಲ್ಲ.ಅಂದರೆ ಹತ್ತು ದಿನಗಳ ಕಾಲ ಒಂದು ರೀತಿಯ ಶೋ ನಡೆಯುತ್ತದೆ ಅಷ್ಟೆ.!
ಬೆಳಗಾವಿಗರ ಕೆಲಸ ಏನು?
ಸಹಜವಾಗಿ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಬೆಳಗಾವಿಗರ ಕೆಲಸವೇ ಹೆಚ್ಚು ಅಧಿಕಾರಿಗಳ ಪಾಡಂತೂ ದೇವರಿಗೆ ಪ್ರೀತಿ.

ತಮ್ಮ ಇಲಾಖೆ ಸಚಿವರು, ಅಧಿಕಾರಿಗಳೂ ಸೇರಿದಂತೆ ಅವರಿಗೆ ಬೇಕಾದವರ ಬೇಕು, ಬೇಡವನ್ನು ಸಮರ್ಪಕವಾಗಿ ಒದಗಿಸುವಲ್ಲಿ ಬೆಳಗಾವಿಗರು ಹೈರಾಣಾಗುತ್ತಾರೆ. ಈ ಬಾರಿಯಾದರೂ ಹತ್ತು ದಿನಗಳ ಅಧಿವೇಶನದಿಂದ ಬೆಳಗಾವಿಗಾದರೂ ಅನುಕೂಲ ಆಗಲಿ ಎಂಬುದೇ ನಮ್ಮಆಶಯ