PRO ಮಂತ್ರಿಯಾದರೆ..?

ಸಚಿವರು ಮತ್ತು ಪತ್ರಕರ್ತರ ನಡುವೆ ಹುಳಿ ಹಿಂಡಿದವರು ಯಾರು? .

ಪತ್ರಕರ್ತರು ಅಸಮಾಧಾನ ಹೊರಹಾಕಲು ಸಿಕ್ಕಿತು ಆ ಒಂದು ನೆಪ.

ಪತ್ರಿಕಾ ದಿನದಂದೇ ಅಸಮಾಧಾನ ಹೊರಹಾಕಿದ ಪತ್ರಕರ್ತರು.

ಅವರುಉದ್ದೇಶಪೂರ್ವಕವಾಗಿ ಸಚಿವರಿಂದ ಬೆಳಗಾವಿ ಪತ್ರಕರ್ತರನ್ನು ದೂರ ಮಾಡಿದರಾ?.

ಸಚಿವರಿಗೆ ಇರಿಸು ಮುರಿಸು ತಂದವರಿಗೆ ಬುದ್ದಿ ಹೇಳೊರು ಯಾರು?

ಬೆಳಗಾವಿ.

ಅವರವರ ಜವಾಬ್ದಾರಿಗಳನ್ನು ಅವರೇ ಸರಿಯಾಗಿ ನಿಭಾಯಿಸಿದರೆ ನಿಜವಾಗಿಯೂ ಯಾರಿಗೂ ಯಾವುದೇ ಸಮಸ್ಯೆ ಬರುವುದೇ ಇಲ್ಲ.

ಆದರೆ ಅದನ್ನು ಮೀರಿ ಅಧಿಕಾರ ಚಲಾಯಿಸಲು ಮುಂದಾದರೆ ಯಡವಟ್ಟುಗಳು ಗ್ಯಾರಂಟಿ .!

ಇಲ್ಲಿ ಯಾರೊ ಮಾಡಿದ ತಪ್ಪುಗಳು ದೊಡ್ಡವರಿಗೆ ಇರಿಸು ಮುರಿಸು ತರುವುದು ಖಚಿತ.

ಬೆಳಗಾವಿ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಪತ್ರಕರ್ತರಿಗೆ ಇಂತಹ ಕಹಿ ಅನುಭವಗಳು ಆದ ಉದಾಹರಣೆ ಇಲ್ಲ. ಮೇಲಾಗಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಎಷ್ಟೇ ಖಾರವಾಗಿ ಪ್ರಶ್ನೆ ಮಾಡಿದರೂ ಜಿಲ್ಲೆಯ ರಾಜಕಾರಣಿಗಳು ಮುನಿಸಿಕೊಂಡ ಉದಾಹರಣೆ ಕೂಡ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬೆಳಗಾವಿ ಪತ್ರಿಕಾರಂಗದ ಇತಿಹಾಸದಲ್ಲಿ ಪತ್ರಕರ್ತರು ಒಗ್ಗಟ್ಟಾಗಿ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ್ದೂ ಕೂಡ ಇದೇ ಮೊದಲ ಸಲ ಎನ್ನಬಹುದು. ಅದಕ್ಕೆ ಯಾರು ಕಾರಣರು ಎನ್ನುವುದನ್ನು ಇಲ್ಲಿ ಹೇಳುವ ಅವಶ್ಯಕತೆಯಿಲ್ಲ. ಗೊತ್ತಿದ್ದ ಸಂಗತಿಯೇ.!

ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಪತ್ರಕರ್ತರ ಸಭೆ.

ಆ ಮಾತು ಏಕೆ ಬಂತು?

ಬೆಳಗಾವಿ ಜಿಲ್ಲೆಯವರಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಆಡಿದ ಮಾತು ಪತ್ರಕರ್ತ ಸಮೂಹವೇ ಮುನಿಸಿಕೊಳ್ಳಲು ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ

ಇಲ್ಲಿ ಸಚಿವರು ಉದ್ದೇಶ ಪೂರ್ವಕವಾಗಿ ಆ ಶಬ್ದ ಪ್ರಯೋಗ ಮಾಡಿದರೋ ಅಥವಾ ಅದೇ ರೀತಿ ಮಾತನಾಡಲು ಹಚ್ಚಿದರೋ ಎನ್ನುವುದು ಬೇರೆ ಮಾತು.

ಅಚ್ಚರಿ ಸಂಗತಿ ಎಂದರೆ, ಬೆಳಗಾವಿ ಪತ್ರಕರ್ತರ ಜೊತೆ ಸಚಿವೆ ಹೆಬ್ಬಾಳಕರ ಆಗಲಿ, ಸಹೋದರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಸಚಿವರ ಪುತ್ರ ಮೃನಾಲ್ ಹೆಬ್ಬಾಳಕರ ಅವರು ಸಂಬಂಧ ಚನ್ನಾಗಿಯೇ ಇತ್ತು.. ಎಲ್ಲರನ್ನೂ ಬ್ರದರ್ ಅಂತ ಕರೆದು ಅವರು ಮಾತನಾಡಿಸುತ್ತಿದ್ದರು.ಆದರೆ ಈಗ ಏಕಾಏಕಿ ಈ ರೀತಿ ಹೀಗೇಕೆ ಬದಲಾದರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಸಚಿವರ ಹೇಳಿಕೆ ಮುಂದಿಟ್ಟುಕೊಂಡು ಪತ್ರಕರ್ತರು ಖಂಡನಾ ಸಭೆ ನಡೆಸಿದ ಅರ್ಧ ತಾಸಿನಲ್ಕಿಯೇ ನೋವಾಗಿದ್ದರೆ ವಿಷಾದ ಸಚಿವರ ಹೇಳಿಕೆ ಆಪ್ತ ಸಹಾಯಕರ ಮೂಲಕ ವಾಟ್ಸಪ್ ಗಳಿಗೆ ಬಂತು. ಅದು ಬೇರೆ ಮಾತು.

ಸಂಪರ್ಕ ಸೇತುವೆ ಆಗಬೇಕಾದವರು…!

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಮಂತ್ರಿಗಳ‌ ಮತ್ತು ಪತ್ರಕರ್ತರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕಾದವರು ಅವರ ಆಪ್ತ ಸಹಾಯಕರು.! ಅಂದರೆ PRO ಗಳು.! ಅದು ಅವರ ಜವಾಬ್ದಾರಿ ಕೂಡ ಹೌದು.

ಆದರೆ ಇಲ್ಲಿ ಏನಾಗಿದೆ ಅಂದರೆ, PRO ಗಳೇ ಮಂತ್ರಿಗಳ ತರಹ ವರ್ತನೆ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಪತ್ರಕರ್ತರ ಸಭೆಯಲ್ಲಿ ವ್ಯಕ್ತವಾದವು. ಇದರಿಂದ ಸಹಜವಾಗಿ ಇನ್ನುಳಿದ ಪತ್ರಕರ್ತರು ಸಚಿವರಿಂದ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬರುವಂತಾಯಿತು. ಇದು ಸಚಿವರಿಗೂ ಮುಜುಗುರವೇ. ಅಚ್ಚರಿ ಸಂಗತಿ ಎಂದರೆ ಸಚಿವರ ಎಲ್ಲಿದ್ದಾರೆ ಅಂತ ಯಾರಾದರೂ ಪ್ರಶ್ನೆ ಮಾಡಿದರೆ, ಅವರು ನನ್ನ ಫೋನ್ ಸಹ ತಗೊತಿಲ್ಲ ಎನ್ನುವ ಉತ್ತರ ಸಂಬಂಧಿಸಿದವರಿಂದ ಬಂದರೆ ಸುದ್ದಿ ಬರೆಯುವ ಪತ್ರಕರ್ತರು ಏನು ಭಾವಿಸಬೇಕು?

ಸಚಿವೆ ಹೆಬ್ಬಾಳಕರ ನಿವಾಸಕ್ಕೆ ಮಾಧ್ಯಮದವರು ಹೋದ ಸಂದರ್ಭದಲ್ಲಿ ಅವರು ಬ್ಯುಜಿ ಇದ್ದರೆ ಕನಿಷ್ಟ ಗೌರವ ಕೊಟ್ಟು ಸಚಿವರನ್ನು ಭೆಟ್ಟಿ ಮಾಡಿಸಿ ಕಳಿಸಬೇಕಾದ ಜವಾಬ್ದಾರಿ ಆಪ್ತ ಸಹಾಯಕರದ್ದು. !ಆದರೆ ಅದೂ ಕೂಡ ಇಲ್ಲಿ ಆಗುತ್ತಿಲ್ಲವಂತೆ. ಒಂದು ರೀತಿಯಲ್ಲಿ ಕರೆಯದೇ ಬಂದ ಅತಿಥಿಗಳ ತರಹ‌ ಟ್ರೀಟ್ ಮಾಡಲಾಗುತ್ತಿದೆ ಎನ್ನುವ ಕಹಿ ಅನುಭವದ ಮಾತುಗಳು ಸ್ವಾಭಿಮಾನಿ ಪತ್ರಕರ್ತರ ಮನಸ್ಸಿಗೆ ಘಾಸಿಯುಂಟು ಮಾಡಿವೆ ಎಂದರೆ ತಪ್ಪಾಗಲಾರದು.

ಇನ್ನೂ ಗಮನಿಸಬೇಕಾದ ಸಂಗತಿ ಎಂದರೆ, ಸಚಿವರ ಗನ್ ಮ್ಯಾನಗಳೂ ಸಹ ಪತ್ರಕರ್ತರು ಸಚಿವರ ಬಳಿ ಸುದ್ದಿಗಾಗಿ ಹೋದರೆ ,ಕಾಗೆ ಓಡಿಸಿದಂತೆ ಹಚ್ಯಾ ಹಚ್ಯಾ ತರಹ ಮಾಡುತ್ತಾರೆ ಎನ್ನುವ ಸಂಗತಿಯನ್ನು ಹಿರಿಯ ಪತ್ರಕರ್ತರು ಹೇಳಿದ ಮೇಲೆ ಉಳಿದವರ ಪರಿಸ್ಥಿತಿ ಹೇಗಿರಬಹುದು ಎನ್ನುವುದನ್ನು ನೀವೇ ಊಹಿಸಿ

ಒಂದು ಮಾತು ಹೇಳಲೇಬೇಕು.‌ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಜನಪ್ರೀಯತೆ ಹೆಚ್ಚಾಗುವಲ್ಲಿ ಬೆಳಗಾವಿ ಜಿಲ್ಲೆಯ ಪತ್ರಕರ್ತರ ಪಾತ್ರ ಬಹಳಷ್ಟಿದೆ. ಆದರೆ ಈಗ ಅವರು ಯಾವ ಕಾರಣದಿಂದ ಅದೇ ಬೆಳಗಾವಿ ಪತ್ರಕರ್ತರನ್ನು ದೂರ ಇಡುವ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಹೇಳಬೇಕು. ಅಥವಾ PRO ಕಳಿಸಿದ ಸುದ್ದಿಗಳು ಪ್ರಕಟವಾಗುತ್ತಿರಬೇಕಾದರೆ ಪತ್ರಕರ್ತರ ಅವಶ್ಯಕತೆ ಏಕೆ ಬೇಕು ಎನ್ನುವುದನ್ಬು ಅವರ ಕಿವಿಗೆ ತುಂಬಲಾಯಿತಾ? ಅಥವಾ ಬೆಳಗಾವಿ ಪತ್ರಕರ್ತರ ನಡುವೆ ಹುಳಿ ಹಿಂಡುವ ಹಿತ ಶತ್ರುಗಳು ಮಾಡಿದರಾ?

ಅದೇನೇ ಇರಲಿ ಈಗಲಾದರೂ ಇಂತಹ ತಪ್ಪುಗಳು ಮರುಕಳಿಸದಂತೆ ಮಾಡುವ ಕೆಲಸವನ್ನು ಖುದ್ದು ಸಚಿವರು ಮಾಡಬೇಕಾಗಿದೆ. ಕಾದು ನೋಡೊಣ.

Leave a Reply

Your email address will not be published. Required fields are marked *

error: Content is protected !!