ಬೆಳಗಾವಿ: ಇಂದುನಿಂದ ಹತ್ತು ದಿನಗಳ ಕಾಲ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಪ್ರತಿಭಟನೆಗಳ ಕಾವು ಜೋರಾಗಿದೆ.
ಬಿಜೆಪಿ ಪ್ರತಿಪಕ್ಷದ ನಾಯಕ ಆರ್.ಅಶೋಕ, ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರ್ಕಾರವನ್ನು ಇಕ್ಜಟ್ಟಿಗೆ ಸಿಲುಕಿಸಲು ಎಲ್ಲ ರೀತಿಯಲ್ಲಿ ಸಜ್ಜಾಗಿದ್ದಾರೆ.

ಒಂದಲ್ಲ ಹತ್ತಾರು ಸರ್ಕಾರಿ ಲೋಪಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹಣಿಯಲು ಸ್ಕೆಚ್ ಕೂಡ ಹಾಕಿದ್ದಾರೆ.
ಛತ್ತೀಸಗಡ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯ ಗಳ ವಿಧಾನಸಭೆ ಚುನಾವಣೆ ಗೆಲುವು ಬಿಜೆಪಿಗೆ ಒಂದು ರೀತಿಯ ಬೂಸ್ಟ್ ಸಿಕ್ಕಂತಾಗಿದೆ.

ಸಿದ್ದರಾಮಯ್ಯ ಸರ್ಕಾರದ ಆರು ತಿಂಗಳ ಅವಧಿ ಮುಕ್ತಾಯದ ಹೊತ್ತಿನಲ್ಲಿ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಇಂದು ಆರಂಭವಾಗುತ್ತಿದೆ.
ಬರಗಾಲ, ವರ್ಗಾವಣೆ ದಂಧೆ, ಗ್ಯಾರಂಟಿ ಮೋಸ, ವಿದ್ಯುತ್ ಬವಣೆ, ಪರೀಕ್ಷಾ ಅಕ್ರಮ, ಕಮಿಷನ್ ಕಿರುಕುಳ, ಡಿಸಿಎಂ ವಿರುದ್ಧ ಸಿಬಿಐ ತನಿಖೆ ವಾಪಸ್ ಪಡೆದ ನಿರ್ಣಯ… ಹೀಗೆ ಹತ್ತು ಹಲವು ವಿಷಯಗಳನ್ನು ಶಾಸನ ಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ಕಿವಿಹಿಂಡಲು ಪ್ರತಿಪಕ್ಷ ಬಿಜೆಪಿ ತಯಾರಾಗಿದೆ. ಮೈತ್ರಿ ಪಕ್ಷ ಜೆಡಿಎಸ್ ಜತೆಗೂಡಿಯೇ ಸರ್ಕಾರದ ವಿರುದ್ಧ ತೊಡೆತಟ್ಟಲಿದೆ.


ಉ.ಕ ಚರ್ಚೆಗೆ ಮಹತ್ವ
ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚಿಸಲು ಎರಡು ದಿನ ಮೀಸಲಿಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ವಿಧಾನ ಸಭೆಯಲ್ಲಿ ಯಾವ ವಿಷಯ ಕೈಗೆತ್ತಿ ಕೊಳ್ಳಬೇಕೆಂಬ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ವನಿಸಲಾಗುತ್ತದೆ. ಆದರೆ ಇಂತಹ ಚರ್ಚೆಯಲ್ಲಿ ಉ ಕ. ಶಾಸಕರು ಎಷ್ಟು ಭಾಗವಹಿಸುತ್ತಾರೆ ಎನ್ನಯವುದು ಮುಖ್ಯ.

ಸ್ಪೀಕರ್ ಪ್ಯಾನಲ್ ರೆಡಿ
ಸಭಾಧ್ಯಕ್ಷರ ಅನುಪಸ್ಥಿತಿಯಲ್ಲಿ ಕಲಾಪ ನಡೆಸಲು ಆರು ಸದಸ್ಯರ ಒಂದು ಪ್ಯಾನಲ್ ರಚಿಸಲಾಗಿದೆ. ಸಿ.ಎಸ್. ನಾಡಗೌಡ, ಶಿವಾನಂದ ಕೌಜಲಗಿ, ಕೆ.ಎಂ. ಶಿವಲಿಂಗೇಗೌಡ, ಎಚ್.ಡಿ. ರಂಗನಾಥ್, ಅರವಿಂದ ಬೆಲ್ಲದ ಹಾಗೂ ಶಾರದಾ ಪೂರ್ಯಾ ನಾಯ್್ಕ ಪಟ್ಟಿಯಲ್ಲಿದ್ದಾರೆ.
ವಿಧೇಯಕ ಮಂಡನೆ
ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ ರದ್ದು, ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ತಿದ್ದುಪಡಿ ಸೇರಿದಂತೆ ಪ್ರಮುಖ ವಿಧೇಯಕಗಳು ಈ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಮೂರು ವಿಧೇಯಕಗಳು ಈಗಾಗಲೇ ಸುಗ್ರೀವಾಜ್ಞೆ ರೂಪದಲ್ಲಿ ಜಾರಿಯಲ್ಲಿದ್ದು, ಶಾಸನ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುತ್ತಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ಸೆಲೆಕ್ಟ್ ಕಮಿಟಿ ಅಂಗಳ ದಲ್ಲಿದ್ದು ಈ ಅಧಿವೇಶನದಲ್ಲಿ ಅದು ಮತ್ತೆ ಪರಿಷತ್ನಲ್ಲಿ ಪರಾಮರ್ಶೆಗೆ ಒಳಗಾಗಲಿದೆ.
ಡಿ.6ರಂದು ಸಿಎಲ್ಪಿ

ಅಧಿವೇಶನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಡಿ.6ರಂದು ಬೆಳಗಾವಿ-ಕೊಲ್ಲಾಪುರ ಹೆದ್ದಾರಿ ಪಕ್ಕದಲ್ಲಿರುವ ಹೋಟೆಲ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಅಧಿವೇಶನದಲ್ಲಿ ಶಾಸಕರ ಒಗ್ಗಟ್ಟು ಪ್ರದರ್ಶನ, ಪ್ರತಿಪಕ್ಷದ ವೇಗ ತಗ್ಗಿಸುವುದು, ವಿಧೇಯಕಗಳ ವೇಳೆ ಕಡ್ಡಾಯ ಹಾಜರಿ, ಲೋಕಸಭೆ ಚುನಾವಣೆ ಸೇರಿ ವಿವಿಧ ವಿಚಾರಗಳು ಈ ವೇಳೆ ಚರ್ಚೆಗೆ ಬರಲಿದೆ.
.