ಶ್ರೀರಾಮ ಬಗ್ಗೆ ಅಪಾರ ನಂಬಿಕೆ ಇದ್ದ ರಾಮಭಕ್ತ ಗಾಂಧಿಯನ್ನು ಕೊಂದಿದ್ದು ಗೋಡ್ಸೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ರಘುಪತಿ ರಾಘವ ರಾಜಾರಾಮ್ ಗಾಂಧಿ ಅವರಿಗೆ ಪ್ರಿಯವಾಗಿತ್ತು. ಇದು ಕಾಂಗ್ರೆಸ್ಸಿಗರಿಗೆಲ್ಲಾ ಇಷ್ಟವಾದ ಭಜನೆ: ಸಿ.ಎಂ.ಸಿದ್ದರಾಮಯ್ಯ
ಬೆಂಗಳೂರು,
ಎಲ್ಲ ಜಾತಿಧರ್ಮದವರು ಸೌಹಾರ್ದತೆಯಿಂದ ಬಾಳಬೇಕೆಂಬ ಕನಸನ್ನು ಕಂಡಿದ್ದ ಮಹಾತ್ಮಾ ಗಾಂಧೀಜಿಯವರು ಎಲ್ಲರನ್ನೂ ಸಮಾನವಾಗಿ ಕಾಣುವ, ಎಲ್ಲರಿಗೂ ನ್ಯಾಯವನ್ನು ಒದಗಿಸುವುದೇ ಅವರ ರಾಮರಾಜ್ಯದ ಪರಿಕಲ್ಪನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಹಾತ್ಮಾಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಇಂದು ಮಹಾತ್ಮಾ ಗಾಂಧೀಜಿಯವರು1948ರ ಜನವರಿ 30 ರಂದು ಗೋಡ್ಸೆ ಯವರ ಗುಂಡಿಗೆ ಬಲಿಯಾಗಿ ಹುತಾತ್ಮರಾದ ದಿನ. ಗಾಂಧೀಜಿಯವರು ವಲ್ಲಭಾ ಬಾಯಿ ಪಟೇಲರೊಂದಿಗೆ ಸಂವಾದಿಸಿದ ನಂತರ ಭಜನೆಗೆ ತೆರಳಲು ಸ್ವಲ್ಪ ವಿಳಂಬವಾಗಿದ್ದ ಸಂದರ್ಭದಲ್ಲಿ ಹಂತಕ ಗೋಡ್ಸೆ, ಗಾಂಧೀಜಿಯವರ ಕಾಲಿಗೆ ನಮಸ್ಕರಿಸುವ ನೆಪದಲ್ಲಿ ಅವರನ್ನು ಹತ್ಯೆಗೈದರು. ಈ ದೇಶಕ್ಕೆ ಅವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಲಭಿಸಿತು. ಕಾಂಗ್ರೆಸ್ ನ ಬಹಳಷ್ಟು ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ ಎಂದರು.
ಶ್ರೀರಾಮನ ಮೇಲೆ ಗಾಂಧಿಯವರಿಗೆ ಅಪಾರ ಭಕ್ತಿ:
ಅವರು ತಮ್ಮ ಕೊನೆಯುಸಿರೆಳೆದಾಗಲೂ ‘ಹೇ ರಾಮ್’ ಎಂದು ಉಚ್ಛರಿಸಿದ್ದರು. ಶ್ರೀ ರಾಮನ ಬಗ್ಗೆ ಅಪಾರ ಭಕ್ತಿ, ನಂಬಿಕೆಯನ್ನು ಹೊಂದಿದ್ದರು. ಆದ್ದರಿಂದಲೇ ‘ರಘುಪತಿ ರಾಘವ ರಾಜಾರಾಮ್ ’ ಎಂಬುದು ಅವರ ನೆಚ್ಚಿನ ಭಜನೆಯಾಗಿತ್ತು. ಶ್ರೀರಾಮ ಪಿತೃವಾಕ್ಯ ಪರಿಪಾಲಕನಾಗಿದ್ದು, ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ತೆರಳಿದ್ದರು. ಆದರ್ಶಮಯ ಆಡಳಿತವನ್ನು ನೀಡಿದ ಶ್ರೀರಾಮಚಂದ್ರನನ್ನು ಪೂಜಿಸುವ ಮಹಾತ್ಮಾ ಗಾಂಧಿಯವರನ್ನು ಮತಾಂಧನಾಗಿದ್ದ ಗೋಡ್ಸೆ ಹತ್ಯೆಗೈಯುತ್ತಾರೆ. ಅವರ ಆದರ್ಶದಲ್ಲಿ ನಡೆದು ನಾವೆಲ್ಲರೂ ಎಲ್ಲ ಧರ್ಮದವರನ್ನೂ ಸಮಾನವಾಗಿ ಕಾಣಬೇಕು. ಸತ್ಯ ಅಹಿಂಸೆಯ ಹಾದಿಯನ್ನು ತೋರಿದ ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಅಂತಹ ಮಹಾನ್ ವ್ಯಕ್ತಿಯ ಹತ್ಯೆಗೈದ ಗೋಡ್ಸೆಯನ್ನು ಪೂಜಿಸುವವರು ನಮ್ಮ ನಡುವೆ ಇದ್ದಾರೆ. ರಾಜ್ಯದ ಜನತೆ ಹಾಗೂ ಸರ್ಕಾರದ ಪರವಾಗಿ ಮಹಾತ್ಮಾ ಗಾಂಧೀಜಿಯವರಿಗೆ ನಮ್ಮ ನಮನಗಳನ್ನು ಸಲ್ಲಿಸುತ್ತೇನೆ ಎಂದರು.