ಯುವಶಕ್ತಿಯ ಬೃಹತ್ ಬೈಕ್ ರ್ಯಾಲಿ ಮೂಲಕ ಮೃಣಾಲ್ ಪ್ರಚಾರ ಆರಂಭ
ಬೆಳಗಾವಿ: ವಿಘ್ನ ವಿನಾಶಕ ಗಣಪತಿಯ ಪೂಜೆ ಮಾಡಿ, ಯುವ ಶಕ್ತಿಯೊಂದಿಗೆ ಬೃಹತ್ ಬೈಕ್ ರ್ಯಾಲಿ ಮೂಲಕ ಮಹಾತ್ಮರ ಪುತ್ಥಳಿಗಳಿಗೆ ಗೌರವ ಮಾಲಾರ್ಪಣೆ ಮಾಡುವ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಭಾನುವಾರ ತಮ್ಮ ಚುನಾವಣಾ ಪ್ರಚಾರಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಸಹಸ್ರಾರು ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಭಾನುವಾರ ಬೆಳಗ್ಗೆ ಹಿಂಡಲಗಾದ ಗಣಪತಿ ಮಂದಿರಕ್ಕೆ ತೆರಳಿದ ಮೃಣಾಲ ಹೆಬ್ಬಾಳಕರ್ ವಿಘ್ನ ವಿನಾಶಕನಿಗೆ ಪೂಜೆ ಸಲ್ಲಿಸಿದರು.
ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬದ ಸಂಪ್ರದಾಯದಂತೆ ಯಾವುದೇ ಕೆಲಸ ಮಾಡುವ ಮುನ್ನ ಗಣೇಶನಿಗೆ ಪೂಜೆ ಸಲ್ಲಿಸುತ್ತೇವೆ. ಅದೇ ರೀತಿ ಪೂಜೆ ಮಾಡಿ, ಎಲ್ಲ ಗುರುಹಿರಿಯರ ಆಶಿರ್ವಾದದೊಂದಿಗೆ ಇಂದು ರ್ಯಾಲಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಯುವಶಕ್ತಿಗೆ ಶಕ್ತಿ ಕೊಡಲು ಪಕ್ಷ ಯುವಕರಿಗೆ ಆದ್ಯತೆ ನೀಡಿದೆ. ಬೆಳಗಾವಿಯ ಮೂರೂ ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ. ಮುಖ್ಯಮಂತ್ರಿಗಳು ಹೇಳಿದಂತೆ ಆಂತರಿಕ ಸರ್ವೆಯಲ್ಲಿ ಶೇ.75ರಷ್ಟು ಕುಟುಂಬದ ಯಜಮಾನಿಯರು ನಮ್ಮ ಯೋಜನೆಗಳನ್ನು ಮೆಚ್ಚಿ ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತದೆ ಎಂದರು.

ಚನ್ನಮ್ಮ ವೃತ್ತದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿಗೆ, ರಾಯಣ್ಣ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ, ಬೋಗಾರ್ ವೇಸ್ ನಲ್ಲಿ ಸಂಭಾಜಿ ಮಹಾರಾಜರ ಪುತ್ಥಳಿಗೆ, ಶಿವಾಜಿ ಗಾರ್ಡನ್ ನಲ್ಲಿ ಛತ್ರಪತಿ ಶಿವಾಜಿ ಪುತ್ಥಳಿಗೆ, ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಾಜಹಂಸಗಡಕ್ಕೆ ತೆರಳಿ ಚತ್ರಪತಿ ಶಿವಾಜಿ ಮಹಾರಾಜರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.