ಬೆಳಗಾವಿ:
ಬೀದಿ ನಾಯಿಗಳ ಹಾವಳಿಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಬೆಳಗಾವಿ ನ್ಯೂ ಗಾಂಧಿ ನಗರದಲ್ಲಿ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಘಟನೆಯಲ್ಲಿ ಒಂದು ಮಗುವಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯಾವುದೇ ಕ್ರಮಕೈಗೊಳ್ಳದ ಮಹಾನಗರ ಪಾಲಿಕೆ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿ ನ್ಯೂ ಗಾಂಧಿನಗರ ಹಾಗೂ ಉಜ್ವಲ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಒಂದೂವರೆ ತಿಂಗಳ ಹಿಂದೆ 10ಕ್ಕಿಂತ ಹೆಚ್ಚು ಜನರ ಮೇಲೆ ನಾಯಿಗಳು ಕಚ್ಚಿದ್ದವು. ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಓಡಾಡುತ್ತಿರುವ ಬೀದಿ ನಾಯಿಗಳು ಮಕ್ಕಳನ್ನು ಕಂಡರೆ ದಾಳಿ ಮಾಡಿ ಕಚ್ಚುತ್ತಿವೆ.

ಬೀದಿ ನಾಯಿಗಳನ್ನು ಹಿಡಿಯುವಂತೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಬೀದಿ ನಾಯಿಗಳ ಕಾಟಕ್ಕೆ ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇದ್ದರೆ ಬೀದಿ ನಾಯಿಗಳನ್ನು ನಾವೇ ಹಿಡಿದು ಪಾಲಿಕೆ ಆವರಣದಲ್ಲಿ ಬಿಡುತ್ತೇವೆ ಎಂದು ಎಚ್ಚರಿಕೆಯನ್ನು ಸಾರ್ವಜನಿಕರು ನೀಡಿದ್ದಾರೆ.