ನಿಪ್ಪಾಣಿ ಕ್ಷೇತ್ರದ ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ
ನಿಪ್ಪಾಣಿ
: ಭಾರೀ ಮಳೆ ಹಾಗೂ ಮಹಾರಾಷ್ಟ್ರದಿಂದ ದೂದಗಂಗಾ ಮತ್ತು ವೇದಗಂಗಾ ನದಿಗೆ ಅಪಾರ ಪ್ರಮಾಣದ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ನಿಪ್ಪಾಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಂಕಾ ಜಾರಕಿಹೊಳಿ ವೀಕ್ಷಿಸಿದರು.
ನಿಪ್ಪಾಣಿ ತಾಲೂಕಿನ ಜತ್ರಾಟ, ಯಮಗರ್ಣಿ ಬ್ಯಾರೇಜ್, ಹುನ್ನರಗಿ, ಶಿದ್ನಾಳ ಗ್ರಾಮಗಳಿಗೆ ತೆರಳಿ ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಿ, ನಂತರ ನದಿ ತೀರದ ಜನರ ಸಮಸ್ಯೆಗಳನ್ನು ಆಲಿಸಿದರು.

ನಿಪ್ಪಾಣಿ ತಾಲೂಕಿನ ವಿವಿಧ ಗ್ರಾಮಗಳಲಿ ಜಿಲ್ಲಾಡಳಿತ ಆರಂಭಿಸಿದ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸಶಕ್ತವಾಗಿದೆ. ಯಾರೂ ಭಯಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ. ಈಗಾಗಲೇ ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ಜಿಲ್ಲಾಡಳಿತ ಕಾಳಜಿ ಕೇಂದ್ರಗಳನ್ನು ಆರಂಭಿಸಿದೆ. ಗುಣಮಟ್ಟದ ಆಹಾರ, ಹಾಸಿಗೆಗಳನ್ನು ನೀಡುತ್ತಿದ್ದು, ಸಂತ್ರಸ್ತರು ಜಿಲ್ಲಾಡಳಿತ ಒದಗಿಸುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಶಾಶ್ವತ ಪರಿಹಾರಕ್ಕೆ ಮನವಿ: ಪ್ರವಾಹ ಪರಿಸ್ಥಿತಿ ವೀಕ್ಷಿಸಲು ನಿಪ್ಪಾಣಿಗೆ ಆಗಮಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ತಾಲೂಕಿನ ಜತ್ರಾಟ, ಹುನ್ನರಗಿ, ಶಿದ್ನಾಳ ಗ್ರಾಮದ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರು ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು. ಸಂತ್ರಸ್ತರ ಮನವಿ ಸ್ವೀಕರಿಸಿ ಮಾತನಾಡಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ, ಶಾಶ್ವತ ಪರಿಹಾರ ಒದಗಿಸುವಂತೆ ಸರ್ಕಾರದ ಗಮನಕ್ಕೆ ತರುತ್ತೇನೆಂದು ಭರವಸೆ ನೀಡಿದರು. ಇನ್ನು ಪ್ರವಾಹದಿಂದ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಾಗಿ ಇದೇ ವೇಳೆ ತಿಳಿಸಿದರು.

ತಿರುಪತಿ ವಾಟ್ಕರ್ ಕುಟುಂಬಸ್ಥರಿಗೆ ಸಾಂತ್ವನ: ನಿಪ್ಪಾಣಿ ನಗರದಲ್ಲಿ ಗೋಡೆ ಬಿದ್ದು ಸಾವನ್ನಪ್ಪಿದ ತಿರುಪತಿ ರಾಜಾರಾಮ ವಾಟ್ಕರ್ ಅವರ ಮನೆಗೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗೋಡೆ ಬಿದ್ದು ಸಾವನ್ನಪ್ಪಿದ ತಿರುಪತಿ ವಾಟ್ಕರ್ ಕುಟುಂಬಸ್ಥರಿಗೆ ಸರ್ಕಾರದಿಂದ 5 ಲಕ್ಷ ಪರಿಹಾರ ನೀಡಲಾಗಿದೆ. ನಾನು ಕೂಡ ಸಂಸದರ ಅನುದಾನದಲ್ಲಿ ತಿರುಪತಿ ವಾಟ್ಕರ್ ಕುಟುಂಬಸ್ಥರಿಗೆ ಮನೆ ನಿರ್ಮಾಣ ಮಾಡಿಕೊಡುತ್ತೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಮಾಜಿ ಸಚಿವ ವೀರಕುಮಾರ ಪಾಟೀಲ್, ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ್, ಬೆಳಗಾವಿ ಬೂಡಾ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಎಡಿ.ಎಚ್.ಓ. ಎಸ್.ವಿ. ಮುನ್ಯಾಳ್, ಸಿಪಿಐ ಶಿವಶರಣ ಅವಜಿ, ಮುಖಂಡಾರದ ಪಂಕಜ ಪಾಟೀಲ್, ರಾಜೇಶ್ ಕದಂ, ಮಹಾಂತೇಶ್ ಮಗದುಮ್, ಸಂಜು ಗಂಗೊಳ್ಳಿ, ಸಿದ್ದಿಕ ಅಂಕಲಗಿ, ಕಿರಣಸಿಂಗ್ ರಜಪೂತ ಉಪಸ್ಥಿತರಿದ್ದರು.