ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿವೃತ್ತ ನೌಕರರ ಪ್ರತಿಭಟನೆ
ಬೆಳಗಾವಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದಡಿ ನಿವೃತ್ತಿ ಆರ್ಥಿಕ ಸೌಲಭ್ಯವೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ನಿವೃತ್ತ ನೌಕರರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಧರಣಿ ನಡೆಸಿದರಲ್ಲದೇ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ನೌಕರರು, 2022ರ ಜುಲೈ 1ರಿಂದ 2024ರ ಜುಲೈ 31ರವರೆಗಿನ ಅವಧಿಯಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಡಿ.ಸಿ.ಆರ್ಿ.ಜಿ, ಕಮ್ಯೂಟೇಶನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೇ ವೇತನ ಆಯೋಗದ ಲೆಕ್ಕಚಾರದಲ್ಲಿ ನೀಡಬೇಕೆಂದು ಒತ್ತಾಯಿಸಿದರು.
ನಾವೇನು ಸಾಲ ಕೇಳುತ್ತಿಲ್ಲ. ದುಡಿದಿರುವುದಕ್ಕೆ ನ್ಯಾಯ ಕೇಳುತ್ತಿದ್ದೇವೆ. ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ನಮ್ಮ ನಿವೃತ್ತಿ ಜೀವನ ಸುರಳಿತವಾಗಿ ಸಾಗಲು ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಬೆಳಗಾವಿ ಜಿಲ್ಲೆಯ 14 ತಾಲೂಕುಗಳ ನೂರಾರು ನಿವೃತ್ತ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.