ಪಾಲಿಕೆ ಜಂಗೀ ಕುಸ್ತಿಗೆ ಅಭಯ- ಸತೀಶ್ ರೆಡಿ?

ಮತ್ತೇ ಸಚಿವ- ಶಾಸಕರ ಜಂಗಿಕುಸ್ತಿ ಶುರು

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಮತ್ತೊಂದು ರೀತಿಯ ಜಂಗೀ ಕುಸ್ತಿಗೆ ಅಖಾಡಾ ಸಜ್ಜಾಗುತ್ತಿದೆ.

ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಕಿಂಗ್ ಮೇಕರ‌ ಎನಿಸಿಕೊಂಡ ಶಾಸಕ ಅಭಯ ಪಾಟೀಲರು ಬರೀ ಜಂಗೀ ಕುಸ್ತಿ ಹಿಡಿಯುವುದರಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿದೆ.

ಪಾಲಿಕೆಯಲ್ಲಿ ಅಧಿಕಾರಿಗಳ ನಡುವೆ ಕುಸ್ತಿ ನಡುವೆ ರಾಜಕಾರಣಿಗಳ ಈ‌ ಕುಸ್ತಿ ಅಖಾಡಾವನ್ನು ಮತ್ತಷ್ಟು ಕಾವೇರುವಂತೆ ಮಾಡಿದೆ.

138 ಪಿಕೆಗಳ ವಿಷಯ, ಆಸ್ತಿ ತೆರಿಗೆ ಹೆಚ್ಚಳ ವಿಷಯದಲ್ಲಿ ಸರ್ಕಾರ ನೀಡಿದ ಸೂಪರ್ ಸೀಡ್ ನೋಟೀಸ್, ಶಹಾಪುರ ಡಬಲ್ ರೋಡ್ ವಿಷಯದಲ್ಲೂ ಶಾಸಕ ಅಭಯ ದೊಡ್ಡ ಮಟ್ಟದ ಕುಸ್ತಿ ಹಿಡಿದಿದ್ದರು.

ಆದರೆ ಎಲ್ಲವೂ ಒಂದು ಹಂತಕ್ಕೆ ಸರಿ ಹೋಯಿತು ಎನ್ನುವಾಗಲೇ ಈಗ ಇಬ್ಬರು ನಗರಸೇವಕರ ಸದಸ್ಯತ್ವ ರದ್ದತಿ ಪ್ರಕರಣ ಮತ್ತೊಂದು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಗಳಿವೆ

ಸಧ್ಯ ಹೇಗಾಗುತ್ತಿದೆ ಅಂದರೆ ಮಹಾನಗರ ಪಾಲಿಕೆಯಲ್ಲಿ ಯಾರೋ ಮಾಡಿದ ತಪ್ಪಿಗೆ ಶಾಸಕರು ಹೈರಾಣಾಗುತ್ತಿದ್ದಾರೆ ಎನ್ನುವ ಮಾತುಗಳಿವೆ.

ಮೇಯರ್ ಚುನಾವಣೆ ಹೊತ್ತಲ್ಲೇ…!
ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ನೂತನ ಮೇಯರ್, ಉಪಮೇಯರ ಚುನಾವಣೆ ಸನ್ನಿಹಿತವಾಗುತ್ತಿದ್ದ ಸಂದರ್ಭದಲ್ಲಿಯೇ ಇಬ್ಬರ ಸದಸ್ಯತ ರದ್ದತಿ ಆದೇಶ ಹೊರಬಿದ್ದಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಅಷ್ಟೇ ಅಲ್ಲ ಇದೇ ರೀತಿಯ ಪ್ರಕರಣದಲ್ಲಿ ಇನ್ನೂ ಮೂವರ ವಿರುದ್ಧ ಮತ್ತೇ ದೂರು ದಾಖಲಿಸುವ ಪ್ರಯತ್ನ ಕೂಡ ತೆರೆಮರೆಯಲ್ಲಿ ಮತ್ತೇ ನಡೆದಿದೆ ಎಂದು ಮೂಲಗಳು ತಿಳಿಸುವೆ.

ಆದರೆ ಇದೆಲ್ಲವನ್ನು ಬಿಜೆಪಿ ರಾಜಕೀಯ ಮತ್ತು ಕಾನೂನು ಬದ್ಧವಾಗಿ ಎದುರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಏನಿದು ಸಂಘರ್ಷ?
ಬೆಳಗಾವಿ ಗೋವಾವೇಸ್ ಬಳಿ ಇರುವ ತಿನಿಸು ಕಟ್ಟೆ ನಿರ್ಮಾಣವು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಕನಸಿನ‌ ಕೂಸು ಅದರಲ್ಲಿ ಎರಡು ಮಾತಿಲ್ಲ.
ಇಲ್ಲಿನ ನಿಯಮಾನುಸಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಇಬ್ಬರು ನಗರಸೇವಕರ ಸಂಬಂಧಿಗಳು ಭಾಗವಹಿಸಿ ಎರಡು ಮಳಿಗೆಗಳನ್ನು ಪಡೆದುಕೊಂಡಿದ್ದರು. ಅದರ ಬಗ್ಗೆ ಯಾರೂ ಆಕ್ಷೇಪಣೆ ವ್ಯಕ್ತಪಡಿಸಿರಲಿಲ್ಲ.
ಆದರೆ ಸತೀಶ್ ಜಾರಕಿಹೊಳಿ ಅವರು ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ನಂತರ ಈ ತಿನಿಸು ಕಟ್ಟೆಗೆ ಭೆಟ್ಟಿ ನೀಡಿದ್ದರು.


ಅಷ್ಟೇ ಅಲ್ಲ ಪಾಲಿಕೆ ಸಭಾಂಗಣದಲ್ಲಿ ಕುಂದುಕೊರತೆ ಸಭೆ ನಡೆಸಿದ ಸಂದರ್ಭದಲ್ಲಿ ಸುಜೀತ್ ಮುಳಗುಂದ ಸೇರಿದಂತೆ ಕೆಲವರು ತಿನಿಸುಕಟ್ಟೆಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಮಳಿಗೆಗಳನ್ನು ಈ ಇಬ್ಬರು ನಗರ ಸೇವಕರು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಜಾರಕಿಹೊಳಿ ಅವರು ಬೆಂಗಳೂರಿನಿಂದ ತಮ್ಮ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ತನಿಖೆ ನಡೆಸಿದ್ದರು.

ಕಳೆದ ಒಂದು ವರ್ಷದಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಇಂದು ಅದರ ಆದೇಶ ಹೊರಬಿದ್ದಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಈ ಪ್ರಕರಣದಲ್ಲಿ ಸರಕಾರಕ್ಕೆ ಕ್ರಮ ತೆಗೆದುಕೊಳ್ಳಲು ಪತ್ರ ಬರೆಯಲಾಗಿತ್ತು. ಆದರೆ ಸರ್ಕಾರವು ಇದರ ಅಧಿಕಾರ ಪ್ರಾದೇಶಿಕ ಆಯುಕ್ತರಿಗೆ ಇದೆ. ಅಲ್ಲಿಯೇ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ವಾಪಸ್ಸು ಕಳಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಕ್ರಮ ಜರುಗಿಸಿದ್ದಾರೆ.

ಈ ಇಬ್ಬರೂ ಹೆಸರಿಗೆ ಮಾತ್ರ…!
ಹಾಗೆ ನೋಡಿದರೆ ಇಲ್ಲಿ ಸದಸ್ಯತ್ವ ಕಳೆದುಕೊಂಡ ಇಬ್ಬರು ನಗರಸೇವಕರು ಹೆಸರಿಗೆ ಮಾತ್ರ., ಅಸಲಿಗೆ ಇದು ಸತೀಶ್ ಜಾರಕಿಹೊಳಿ ವರ್ಸಿಸ್ ಅಭಯ ಪಾಟೀಲರ ನಡುವಿನ ಸಂಘರ್ಷ ಎಂದು ಹೇಳಬಹುದು.


ಕಳೆದ ಹಲವು ವರ್ಷಗಳಿಂದ ಇವರಿಬ್ಬರ ನಡುವೆ ರಾಜಕೀಯ ಸಂಘರ್ಷ ನಡೆದೇ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಭಯ ಪಾಟೀಲರನ್ನು ಸತೀಶ್ ಜಾರಕಿಹೊಳಿ ಸ್ವಕ್ಷೇತ್ರ ಯಮಕನಮರಡಿಗೆ ಉಸ್ತುವಾರಿಯನ್ನಾಗಿ ಪಕ್ಷ ನೇಮಿಸಿತ್ತು.

ಆ ಸಂದರ್ಭದಲ್ಲಿ ರಾಜಕೀಯವಾಗಿ ಒಂದಿಷ್ಟು ಮಾತುಕತೆಗಳು ದೀರ್ಘಕ್ಕೆ ಹೋಗಿದ್ದವು.
ಅಷ್ಟೇ ಅಲ್ಲ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕೂಡ ಸತೀಶ ಜಾರಕಿಹೊಳಿ ಅವರು ಅಭಯ ಪಾಟೀಲರನ್ನು ಸೋಲಿಸಲೇಬೇಕೆಂದು ಜಿದ್ದಿಗೆ ಬಿದ್ದಂತೆ ಪ್ರಯತ್ನ ನಡೆಸಿದ್ದರು. ಎಂಇಎಸ್ ಅಭ್ಯರ್ಥಿ ರಮಾಕಾಂತ ಕೊಂಡುಸ್ಕರ ಅವರನ್ನು ಪರೋಕ್ಷವಾಗಿ ಬೆಂಬಲಿಸಿದ್ದರು. ಆದರೂ ಅಭಯ ಪಾಟೀಲರು ಎಲ್ಲವನ್ನು ಮೆಟ್ಟಿ ನಿಂತು ಗೆದ್ದು ಬಂದರು,

ಈಗ ಏನಾಗಿದೆ ಎಂದರೆ, ಮೊಸರಿನಲ್ಲಿ ಕಲ್ಲು ಹುಡುಕಿದಂತೆ ಸರ್ಕಾರವು ದಕ್ಷಿಣ ಕ್ಷೇತ್ರದಲ್ಲಿ ಆದ ಲೋಪಗಳನ್ನು ಪತ್ತೆ ಮಾಡುವಲ್ಲಿ ಎಲ್ಲರೂ ನಿರತವಾಗಿದೆ ಆದರೆ ಅಲ್ಲಿ ಹೇಳಿಕೊಳ್ಳುವಂತಹ ಲೋಪಗಳು ಕಾಣಸಿಗುತ್ತಿಲ್ಲ. ಆದರೂ ಇವರಿಬ್ಬರ ನಡುವಿನ ಸಂಘರ್ಷ ನಿಂತಿಲ್ಲ.

ಈಗ ಮತ್ತೇ ಶುರುವಾಗಿಸೆ..ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *

error: Content is protected !!