ಪಾಲಿಕೆ ತೆರಿಗೆಗೆ ದೋಖಾ ಮಾಡಿದವರ ಮೇಲೆ ಕ್ರಮಕ್ಕೆ ಹಿಂಜರಿಕೆ ಏಕೆ?
ಬೆಳಗಾವಿ ಪಾಲಿಕೆಯಲ್ಲಿ ಹೆಸರಿಗೆ ಮಾತ್ರ ಪಿಕೆಗಳು
ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತ ಅವ್ಯವಸ್ಥೆಗೆ ಸಮಗ್ರ ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ.
ಈ ಪಾಲಿಕೆಗೆ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಆದೇಶ ಲೆಕ್ಕಿಕ್ಕಿಲ್ಲ. ಒಂದು ರೀತಿಯಲ್ಲಿ ಕಾಲು ಕಸ. ಇನ್ನು ಪಾಲಿಕೆಯ ಖರ್ಚು ಮಾಡಿದ ಹಣಕ್ಕೆ ಲೆಕ್ಕವಿಲ್ಲ ದಾಖಲೆನೂ ಇಲ್ಲ.
ಇನ್ನು ಎಲ್ಲಕ್ಕಿಂತ ಮುಖ್ಯವಾಗಿ ಪಾಲಿಕೆಯ ಆಸ್ತಿ ರಕ್ಷಕರೇ ಇಲ್ಲದಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾಗಿದ್ದ ಪಾಲಿಕೆ ಅಧಿಕಾರಿಗಳು ತಮ್ಮ ತಮ್ಮಲ್ಲಿಯೇ ಕಚ್ಚಾಟ ನಡೆಸಿ ಬೀದಿ ರಂಪಾಟ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ತಪ್ಪುಗಳನ್ನು ಸಭೆಯಲ್ಲಿ ಪ್ರಶ್ನೆ ಮಾಡಿ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕಾದ ನಗರ ಸೇವಕರಲ್ಲಿಯೇ ಒಗ್ಗಟ್ಟು ಚಿಂದಿ ಚಿತ್ರಾನ್ನವಾಗಿದೆ.
ಗಮನಿಸಬೇಕಾದ ಸಂಗತಿ ಎಂದರೆ, ಪಾಲಿಕೆಯ ಕಾರ್ಯವೈಖರಿಯಿಂದ ಬೇಸತ್ತ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಅದರತ್ತ ತಿರುಗಿ ಸಹ ನೋಡದೇ ಇರುವುದು ಈ ಪರಿಸ್ಥಿತಿ ಗೆ ಮತ್ತೊಂದು ಕಾರಣ
250 ಕೋಟಿ ಆಸ್ತಿ ಪರಭಾರೆ?
ಬೆಳಗಾವಿ ಮಹಾನಗರ ಪಾಲಿಕೆಯ ಸುಮಾರು 250 ಕೋಟಿ ರೂ ಆಸ್ತಿಯನ್ನು ಪರಭಾರೆ ಮಾಡಿದ್ದಾರೆ ಎನ್ನುವ ಆಘಾತಕಾರಿ ಸಂಗತಿ ಕೂಡ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ಗೊತ್ತಾಗಿದೆ.
ಇಲ್ಲಿ ಅವಧಿ ಮುಗಿದಿದ್ದರೂ ಕೂಡ ಪಾಲಿಕೆಯವರು ಆ ಜಾಗೆಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಹೆಡಮುರಿ ಕಟ್ಟುವ ತಾಕತ್ತು ಯಾರಿಗಿದೆ?
88 ಲಕ್ಷ ಬಾಕಿಗೆಲ್ಲಿದೆ ದಾಖಲೆ? ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 88 ಲಕ್ಷ ರೂ ಮೊತ್ತದ ಹಣಕ್ಕೆ ಬಿಲ್ಲುಗಳು ಇದುವರೆಗೂ ಸಂದಾಯವಾಗಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ ಪಕ್ಷವಾರು ಚುನಾವಣೆ ನಡೆಯುವ ಮುನ್ನ ಇರುವ ಆಡಳಿತ ಮಂಡಳಿಯವರು ಮುಂಗಡವಾಗಿ ತೆಗೆದುಕೊಂಡ ಹಣಕ್ಕೆ ಸಮಂಜಸವಾದ ಬಿಲ್ಲುಗಳು ಸಿಗುತ್ತಿಲ್ಲ ಎಂದು ಹೇಳಲಾಗಿದೆ.
ಸಾಂದರ್ಭಿಕ ಚಿತ್ರ..
ಈ ಹಿನ್ನೆಲೆಯಲ್ಲಿ ಪಾಲಿಕೆಯ ಲೆಕ್ಕಾಧಿಕಾರಿಗಳು ಬಿಲ್ಲಿನ ಖರ್ಚು ವೆಚ್ಚದ ಮಾಹಿತಿ ಕೇಳಿದಾಗ ಯಾರೂ ಸ್ಪಂದನೆ ಮಾಡಲಿಲ್ಲ. ಈ ಬಗ್ಗೆ ಲೆಕ್ಕಾಧಿಕಾರಿ ರುದ್ರಣ್ಣ ಚಂದರಗಿ ಅವರು ಹಿಂದಿನ ಆಯುಕ್ತರಿಗೆ ಪತ್ರ ಬರೆದು ಆ ಹಣವನ್ನು ಸಂಬಂಧಿಸಿದವರಿಂದ ವಸೂಲಿ ಮಾಡಬೇಕು ಎಂದು ಪತ್ರ ಬರೆದಿದ್ದರು ಎಂದು ಹೇಳಲಾಗಿದೆ,
ಈ ಹಿನ್ನೆಲೆಯಲ್ಲಿ ಕೆಲವರು ಸಿಟ್ಟಾಗಿ ಅವರು ವರ್ಗವಾಗಿ ಹೋಗುವಂತ ವಾತಾವರಣ ಸೃಷ್ಟಿ ಮಾಡಿದರು ಎನ್ನುವ ಮಾತು ಕೇಳಿ ಬರುತ್ತಿದೆ.
ಕ್ರಮ ಇಲ್ಲವೇ?
ತಪ್ಪು ಮಾಡಿದವರಿಗೆ ಶಿಕ್ಷೆ ಎನ್ನುವುದು ಇರಬೇಕು. ಅಷ್ಟೇ ಅಲ್ಲ ಹಿರಿಯ ಅಧಿಕಾರಿಗಳು ತಪ್ಪಿತಸ್ಥರಿಗೆ ಕೊಟ್ಟ ನೋಟೀಸ್ ಗೆ ಕಿಮ್ಮತ್ತು ಎನ್ನುವುದು ಬರಬೇಕು ಎನ್ನುವುದಾದರೆ ಕಾನೂನು ಪ್ರಕಾರ ದಂಡಂ ದಶಗುಣಂ ಎನ್ನುವುದು ಆಗಬೇಕು. ಇಲ್ಲದಿದ್ದರೆ ಆಡಳಿತ ನಡೆಸುವವರು ಹೆಸರಿಗೆ ಮಾತ್ರ ಎನ್ನುವಂತಾಗುತ್ತಾರೆ. ಒಂಥರ ಬೆದರು ಗೊಂಬೆಯಾಗುತ್ತಾರೆ.
ನೇರವಾಗಿ ಹೇಳಬೇಕೆಂದರೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಯುಕ್ತರು ಕೊಟ್ಟ ನೋಟೀಸ್ ಗೆ ಅಧೀನ ಸಿಬ್ಬಂದಿಗಳು ಡೋಂಟಕೇರ್ ಎನ್ನುವ ರೀತಿಯಲ್ಲಿದ್ದಾರೆ. ನಗರದ ಖಾಸಗಿ ಕಂಪನಿ ಪಾಲಿಕೆಗೆ ಬಹುಕೋಟಿ ರೂ ತೆರಿಗೆ ಯನ್ನು ಪಾವತಿ ಮಾಡಬೇಕಿತ್ತು. ಆದರೆ ವಸೂಲಿಗೆ ಹೋದವರು ತಮ್ಮ ತೆರಿಗೆ ಹೊಂದಾಣಿಕೆ ಮಾಡಿಕೊಂಡು ಪಾಲಿಕೆ ತೆರಿಗೆಗೆ ಕಡಿತ ಹಾಕಿದ್ದರು. ಈ ಬಗ್ಗೆ ಮಾಧ್ಯಮದಲ್ಲಿ ವರದಿಗಳು ಪ್ರಕಟವಾದಾಗ ಎಚ್ಚೆತ್ತ ಆಯುಕ್ತರು ನೋಟೀಸ್ ಕೊಟ್ಟರು. ಸಿಬ್ಬಂದಿಗಳು ಮಾಡಿದ್ದು ತಪ್ಪು ಎಂದು ಕಂಡುಬಂದಾಗ ನೋಟೀಸ್ ಕೊಟ್ಟು ಮತ್ತೇ ತಂಡವನ್ನು ರಚಿಸಿದರು. ಕೊನೆಗೆ ಮೂಲಗಳ ಪ್ರಕಾರ ಒಟ್ಟು ಸುಮಾರು 4 ಕೋಟಿ ರೂ ಪಾವತಿ ಮಾಡಬೇಕೆಂದು ಸೂಚನೆ ಕೊಟ್ಟು ಬಂದರು.ಆದರೆ ಇಲ್ಲಿ ಇದುವರೆಗೆ ತಪ್ಪಿತಸ್ಥರ ಮೇಲೆ ಕ್ರಮ ಆಗಿಲ್ಲ. ಆಯುಕ್ತರು ಕೊಟ್ಟ ನೋಟೀಸ್ ಗೆ ಆ ಶಾಖೆ ಡೋಂಟಕೇರ್ ಮಾಡಿದ್ದಾರೆ ಎನ್ನುವುದು ಸ್ಪಷ್ಟ.
ಇದೊಂದೇ ಅಲ್ಲ ಖಾಸಗಿ ಶಿಕ್ಷಣ ಸಂಸ್ಥೆಗೆ ಚಲನ್ ನೀಡಲು ಇದೇ ಕಂದಾಯ ಶಾಖೆಯವರು ಬರೊಬ್ಬರಿ 50 ಸಾವಿರ ಲಂಚ ಪಡೆದುಕೊಂಡಿದ್ದರು. ಜಿಲ್ಲಾಧಿಕಾರಿಗಳು, ಆಯುಕ್ತರು ಹೇಳಿದ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಲಂಚ ಪಡೆದುಕೊಂಡೇ ಚಲನ್ ನೀಡಿದ್ದರು. ಇದೂ ಸಹ ವರ್ಇ ಬಂದಾಗ ಆಯುಕ್ತರು ಕಂದಾಯ ಶಾಖೆಯ ನಾಲ್ವರಿಗೆ ನೋಟೀಸ್ ಕೊಟ್ಟಿದ್ದಲ್ಲದೇ ಎರಡೂ ಕಡೆಗೆ ವಿಚಾರಣೆ ನಡೆಸಿ ಲಂಚದ ಹಣ ವಾಪಸ್ಸು ಕೊಡಿಸಿದರು.ಅಂಸರೆ ಇಲ್ಲಿಕೂಡ ಸಿಬ್ಬಂದಿಗಳು ಮಾಡಿದ್ದು ತಪ್ಪು ಎನ್ನುವುದು ಸ್ಪಷ್ಟವಾಯಿತು.
ಇಲ್ಲಿ ಇದೊಂದು ಗಂಭೀರ ಸ್ವರೂಪದ ಅಪರಾಧ. ಆದರೆ ಇಲ್ಲಿ ಕೂಡ ಕ್ರಮ ಎನ್ನುವುದು ಇಲ್ಲವೇ ಇಲ್ಲ. ಸಧ್ಯ ಹೇಗಾಗಿದೆ ಎಂದರೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎನ್ನುವ ಹಾಗಾಗಿದೆ..
ಇದೆಲ್ಲದರ ನಡುವೆ ಬೆಳಗಾವಿಯಲ್ಲಿ ಬಹುತೇಕ ಕಡೆಗೆ ನಾಮಕಾವಾಸ್ಥೆ ಎನ್ನುವಂತೆ ಪೌರ ಕಾರ್ಮಿಕರು ಇದ್ದಾರೆ. ಅವರು ಎಂದಿಗೂ ಉಳಿದವರಂತೆ ಸ್ವಚ್ಚತೆಯಲ್ಲಿ ತೊಡಗಿಲ್ಲ ಇನ್ನುಳಿದ ಬಡಪಾಯಿ ಪೌರ ಕಾರ್ಮಿಕರು ತಮ್ಮಆರೋಗ್ಯವನ್ನು ಕಡೆಗಣಿಸಿ ಸ್ವಚ್ಚತೆಯಲ್ಲಿ ತೊಡಗಿದ್ದಾರೆ.
ಆದ್ದರಿಂದ ಪಾಲಿಕೆ ಆಯುಕ್ತರು ಇಂತಹ ನಕಲಿ ಪಿಕೆಗಳ ಬಗ್ಗೆ ತನಿಖೆ ನಡೆಸಬೇಕಾಗಿದೆ. ಕಾದು ನೋಡೋಣ.