ಗಾಡಿವಡ್ಡರ ಕೊಲೆ ಇಬ್ಬರ ಬಂಧನ.
ಪ್ರಕರಣ ಬೇಧಿಸಿದ ಅಧಿಕಾರಿಗಳಿಗೆ ಬಹುಮಾನ
ಬೆಳಗಾವಿ:
ಅಡ್ಡದಾರಿ ಹಿಡಿದ ಯುವಕನೊಬ್ಬನಿಗೆ ಹೊಡೆದು ಬುದ್ಧಿಮಾತು ಹೇಳಿದ್ದೇ ಶಿವಬಸವನಗರದಲ್ಲಿ ಎರಡು ದಿನಗಳ ಹಿಂದೆ ನಾಗರಾಜ ಗಾಡಿವಡ್ಡರ ಕೊಲೆಗೆ ಕಾರಣವಾಯಿತು ಎಂಬ ಅಚ್ಚರಿಯ ಅಂಶವೊಂದು ತನಿಖೆಯ ವೇಳೆ ಬಯಲಾಗಿದೆ.
ಈ ಪ್ರಕರಣದ ಪ್ರಧಾನ ರೂವಾರಿ ಮೂರನೇ ಆರೋಪಿ ನಿಪ್ಪಾಣಿಯ ಯುವಕ ರಾಮನಗರದಲ್ಲಿನ ವಿವಾಹಿತ ಮಹಿಳೆಯೊಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದ್ದು, ಆಕೆಯನ್ನು ಸೇರಲು ವಾರಕ್ಕೊಮ್ಮೆ ನಿಪ್ಪಾಣಿಯಿಂದ ಇಲ್ಲಿಗೆ ಬರುತ್ತಿದ್ದ ಎಂದು ಹೇಳಲಾಗುತ್ತಿದೆ.

ಈ ಯುವಕನ ಚಲನವಲನಗಳನ್ನು ಗಮನಿಸಿದ ನಾಗರಾಜ ಆತನಿಗೆ ಬುದ್ಧಿಮಾತು ಹೇಳಿ ಇನ್ನು ಮುಂದೆ ತಮ್ಮ ಏರಿಯಾದಲ್ಲಿ ಕಾಣಿಸಿಕೊಳ್ಳದಂತೆ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದ. ಇದೇ ಕೋಪದಲ್ಲಿದ್ದ ಆತ ರಕ್ಷಾಬಂಧನದ ದಿನ ತನ್ನ ಸಹೋದರಿಗೆ ರಾಖಿ ಕಟ್ಟಲು ಕೊಲ್ಹಾಪುರದಿಂದ ನಿಪ್ಪಾಣಿಗೆ ಬಂದ ಕೂಲಿಕಾರ್ಮಿಕ ರಾಗಿರುವ ತನ್ನ ಗೆಳೆಯರ ಜತೆ ನೇರ ಬೆಳಗಾವಿಯ ಮಹಿಳೆಯ ಮನೆಗೆ ಬಂದಿದ್ದಾನೆ.

ಈ ವೇಳೆ ತನಗೆ ರಾಮನಗರದಲ್ಲಿ ಒಬ್ಬ ಯುವಕ ಧಮಕಿ ಹಾಕಿದ ಬಗ್ಗೆಯೂ ಸ್ನೇಹಿತರಿಗೆ ಹೇಳಿ ಆತನ ಕೊಲೆ ಮಾಡಿದರೆ ಒಂದೂವರೆ ಲಕ್ಷ ಕೊಡುವ ಆಸೆ ಹಚ್ಚಿದ್ದಾನೆ. ಆರೋಪಿಗಳು ಮೂವರೂ ಕುಡಿದ ಮತ್ತಿನಲ್ಲಿ ಬೈಕಿನಲ್ಲಿ ರಾಮನಗರದತ್ತ ಬರುತ್ತಿದ್ದಾಗಲೇ ಕಾಕತಾಳೀಯವಾಗಿ ನಾಗರಾಜ ಗಾಡಿವಡ್ಡರ ರಸ್ತೆಯಲ್ಲಿ ನಡೆದು ಬರುವುದನ್ನು ಕಂಡಿದ್ದಾರೆ. ರಸ್ತೆ ಬದಿ ಗಾಡಿ ನಿಲ್ಲಿಸಿ ಆತ ಪಕ್ಕ ಬರುತ್ತಿದ್ದಂತೆಯೇ ಕಲ್ಲಿನಿಂದ ಜಜ್ಜಿ ಕಲ್ಲು ಎತ್ತಿಹಾಕಿ ಆತನ ಕೊಲೆ ಮಾಡಿದ್ದಾರೆಂದು ಹೇಳಲಾಗಿದೆ. ನಂತರ ಮೂವರೂ ಆರೋಪಿಗಳು ಬೈಕ್ ಏರಿ ಪರಾರಿಯಾಗಿದ್ದಾರೆ.
ಈ ಕೊಲೆಯ ದೃಶ್ಯಾವಳಿಗಳು ಈ ಭಾಗದ ಅಂಗಡಿಯೊಂದರ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳನ್ನು ಆಧರಿಸಿ ಮಾಳಮಾರುತಿ ಠಾಣೆಯವರು ತನಿಖೆ ಆರಂಭಿಸಿ ಆರೋಪಿಗಳ ಜಾಡು ಪತ್ತೆ ಹಚ್ಚಿದ್ದರು.
ಪ್ರಕರಣವನ್ನು ಬೇಧಿಸಲು ಡಿಸಿಪಿ ಶೇಖರ ಹೆಚ್.ಟಿ ಅವರ ಮಾರ್ಗದರ್ಶನದಲ್ಲಿ ಎನ್.ವಿ. ಭರಮನಿ, ಎಸಿಪಿ ಮಾರ್ಕೆಟ್ ಉಪ ವಿಭಾಗ ಮತ್ತು ಜೆ.ಎಂ. ಕಾಲಿಮಿರ್ಚಿ, ಪಿ.ಐ. ಮಾಳಮಾರುತಿ ಪೊಲೀಸ್ ಠಾಣೆ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.ಆರೋಪಿಗಳು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಅಲ್ಲಿಗೆ ತೆರಳಿದ ತಂಡ ಅಲ್ಲಿ ಅವಿತಿದ್ದ ಇಬ್ಬರು ಆರೋಪಿಗಳಾದ ಪ್ರಥಮೇಶ ಧರ್ಮೇಂದ್ರ ಕಸಬೇಕರ ( 20 ವರ್ಷ ಸಾ.ರಾಜಾರಾಮಪುರಿ ಬಾಯಚಾಪ ಚಾಳ ಗಲ್ಲಿ ಕೊಲ್ಲಾಪುರ) ಹಾಗೂ ಆಕಾಶ ಕಾಡಪ್ಪಾ ಪವಾರ ( 21 ವರ್ಷ ಸಾ:ರಾಜಾರಾಮ ಚೌಕ ಎ-ವಾರ್ಡ ಕೊಲ್ಲಾಪೂರ ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಇನ್ನೋರ್ವ ಪ್ರಧಾನ ಆರೋಪಿ ನಿಪ್ಪಾಣಿಯ ನಿವಾಸಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಭೇಷ್ ಅಬಕಾರಿ

https://ebelagavi.com/index.php/2023/09/02/hi-33/
ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದರಿಂದ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳಾದ ಎಸಿಪಿ ನಾರಾಯಣ ಬರಮನಿ, ಪೊಲೀಸ್ ಇಸ್ಪೆಕ್ಟರ್ ಕಾಲಿಮಿರ್ಚಿ, ಪಿಎಸ್ಐಗಳಾದ ಹೊನ್ನಪ್ಪ ತಳವಾರ, ಶ್ರೀಶೈಲ ಹಾಗೂ ಸಿಬ್ಬಂದಿಗಳಾದ ಕುಂಡದ, ಚಿನ್ನಪ್ಪಗೋಳ, ಬಸ್ತವಾಡ, ಗೌರಾಣಿ, ಹೊಸಮನಿ ಮತ್ತು ಮುಜಾವರ ರವರ ಕಾರ್ಯಕ್ಷಮತೆಯನ್ಬು ಮೆಚ್ಚಿ ಬಹುಮಾನ ಘೋಷಿಸಲಾಗಿದೆ.