ಶಾಸಕರ ಸೌಲಭ್ಯ- PIL ದಾಖಲಿಸಲು ಸಿದ್ಧತೆ.!

Oplus_131072

ಶಾಸಕರ ಸೌಲಭ್ಯಗಳ ಕುರಿತಂತೆ ಸಾರ್ವಜನಿಕ ಅಸಮಾಧಾನ – ಹಿತಾಸಕ್ತಿ ಅರ್ಜಿಗೆ ತಯಾರಿ

ಬೆಳಗಾವಿ.

: ಅಧಿವೇಶನ ನಡೆಯುವ ಸಂದರ್ಭದಲ್ಲಿ ಶಾಸಕರಿಗೆ ಉಚಿತ ಊಟ-ಉಪಹಾರ ಮತ್ತು ವಿಶ್ರಾಂತಿಗಾಗಿ ರಿಕ್ಲೈನರ್ ಚೇರ್ ವ್ಯವಸ್ಥೆ ಮಾಡಿರುವ ಸರ್ಕಾರದ ಕ್ರಮವನ್ನ ಪ್ರಶ್ನಿಸಿ, ರಾಜ್ಯದ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿರುವುದು ಪ್ರಸ್ತುತ ಚರ್ಚೆಯ ವಿಷಯವಾಗಿದೆ. ಇದು ಸಾರ್ವಜನಿಕರ ತೆರಿಗೆ ಹಣದ ಅಸಮಂಜಸ ಬಳಕೆಯೆಂದು ಹಲವರು ಆರೋಪಿಸುತ್ತಿದ್ದು, ಈ ಕುರಿತು ಶೀಘ್ರದಲ್ಲೇ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಭೀಮಪ್ಪ ಗಡಾದ್ ತಿಳಿಸಿದ್ದಾರೆ.

, ಶಾಸಕರಿಗೆ ಸರ್ಕಾರದಿಂದ ಮಾಸಿಕ ₹2,05,000 ವೇತನ ಹಾಗೂ ವಿವಿಧ ಭತ್ಯೆಗಳು ನೀಡಲಾಗುತ್ತವೆ. ಆದರೆ, ಕೆಲ ಶಾಸಕರು ಸದನದ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸದೆ, ತನ್ನ ಅನುಕೂಲಕ್ಕೆ ತಕ್ಕಂತೆ ವೇತನ ಮತ್ತು ಭತ್ಯೆಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದನ್ನು ಪ್ರಶ್ನಿಸುವ ಹಿನ್ನೆಲೆಯಲ್ಲಿ, ಈ ಕುರಿತು ಕಠಿಣ ನಿಯಮಗಳನ್ನು ಜಾರಿಗೆ ತರಬೇಕೆಂದು ರಾಜ್ಯಪಾಲರು, ವಿಧಾನಸಭಾಧ್ಯಕ್ಷರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಉಚಿತ ಊಟ-ಉಪಹಾರಕ್ಕೆ ವಿರೋಧ:
ಹಾಜರಾತಿ ಪ್ರಮಾಣ ಹೆಚ್ಚಿಸಲು ಉಚಿತ ಊಟ ಮತ್ತು ವಿಶ್ರಾಂತಿ ಸೌಲಭ್ಯ ನೀಡುತ್ತಿರುವ ಕ್ರಮವನ್ನು ಸಾರ್ವಜನಿಕರು ತೀವ್ರವಾಗಿ ವಿರೋಧಿಸಿದ್ದಾರೆ. ಶಾಸಕರು ತಮ್ಮ ಕರ್ತವ್ಯವನ್ನು ಪೂರೈಸಲು ಈ ರೀತಿಯ ಆಮಿಷ ನೀಡಬೇಕಾದ ಪರಿಸ್ಥಿತಿ ಏಕೆ ಎದುರಾಗುತ್ತಿದೆ? ಜನರ ತೆರಿಗೆ ಹಣವನ್ನು ಈ ರೀತಿಯಾಗಿ ವ್ಯಯಿಸುವುದು ಎಷ್ಟು ಸಮಂಜಸ? ಎಂಬ ಪ್ರಶ್ನೆಗಳು ಸಹಜವಾಗಿ ಮೂಡಿವೆ. ಪ್ರಜಾಪ್ರಭುತ್ವದ ಗಂಭೀರತೆಯನ್ನು ಕಡಿಮೆ ಮಾಡುವ ಈ ಕ್ರಮವನ್ನು ತಕ್ಷಣವೇ ಹಿಂಪಡೆಯಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

ಶಾಸಕರ ವೇತನ ಮತ್ತು ಭತ್ಯೆಗಳ ಅಸಮಾನತೆ:
ವಿಧಾನ ಮಂಡಲದ “ವೇತನ, ಪಿಂಚಣಿ ಮತ್ತು ಭತ್ಯೆಗಳ ಕಾಯ್ದೆ 1956” ಅನ್ನು ಶಾಸಕರೇ ತಾವು ಬಯಸಿದಂತೆ ತಿದ್ದುಪಡಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಉಲ್ಬಣಗೊಂಡಿದೆ. ಪ್ರಸ್ತುತ, ಶಾಸಕರ ಪ್ರಯಾಣ ಭತ್ಯೆ ಪ್ರತಿ ಕಿ.ಮೀಗೆ ₹35 ನಿಗದಿಯಾಗಿದ್ದರೆ, ಸಾಮಾನ್ಯ ಸರ್ಕಾರಿ ನೌಕರರಿಗೆ ಈ ಮೊತ್ತ ಬಹಳ ಕಡಿಮೆ. ಇದಲ್ಲದೆ, ನಿವೃತ್ತಿ ಬಳಿಕವೂ ಪಿಂಚಣಿ ಪಡೆಯುವ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳು ಅವರ ಪಾಲಿಗೆ ಲಭ್ಯವಿದೆ. ಆದರೆ, ಬಡಜನರಿಗೆ ನೀಡಲಾಗುವ ಮಾಶಾಸನ ಮೊತ್ತವನ್ನು ಮಾತ್ರ ಹೆಚ್ಚಿಸುವ ಬಗ್ಗೆ ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂಬುದನ್ನು ಸಾರ್ವಜನಿಕರು ಟೀಕಿಸಿದ್ದಾರೆ.

ನ್ಯಾಯಾಲಯದ ಮೆಟ್ಟಿಲೇರಲಿರುವ ಹೋರಾಟ:
ಈ ಎಲ್ಲಾ ಅಸಮಾನತೆಗಳ ವಿರುದ್ಧ ನ್ಯಾಯಾಂಗದ ಮೊರೆ ಹೋಗಲು ನಿರ್ಧಾರ ಕೈಗೊಳ್ಳಲಾಗಿದೆ. “ಯಾವ ಶಾಸಕರು ಸದನದಲ್ಲಿ ಪೂರ್ಣ ಸಮಯ ಹಾಜರಾಗುವುದಿಲ್ಲವೋ, ಅವರ ವೇತನ ಮತ್ತು ಭತ್ಯೆ ಕಡಿತಗೊಳಿಸಬೇಕು” ಎಂಬ ನಿಬಂಧನೆ ಜಾರಿಗೊಳಿಸುವ ಕುರಿತು ಸರ್ಕಾರ ಚಿಂತನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.. ಸರಿಯಾದ ಕ್ರಮ ಕೈಗೊಳ್ಳದೇ ಇದ್ದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮೂಲಕ ಸರ್ಕಾರದ ವಿರುದ್ಧ ಕಾನೂನು ಹೋರಾಟ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ..

Leave a Reply

Your email address will not be published. Required fields are marked *

error: Content is protected !!