Headlines

ಅಂತಾರಾಷ್ಟೀಯ ಮಟ್ಟದಲ್ಲಿ ಬ್ರಾಹ್ಮಣರಿಗೆ ಗೌರವ

ಬಾಗಲಕೋಟೆ.

ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ನೂತನ ಶಿಕ್ಷಣ ನೀತಿಯನ್ನು ಕೈಬಿಡದಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ತಿಳಿಸಿದ್ದಾರೆ.ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘದ ಶ್ರೀರಾಯರ ಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಕೌಶಲಕ್ಕೆ ಒತ್ತು ನೀಡಲಾಗಿದ್ದು, ವಿದ್ಯಾರ್ಥಿಗಳ ಸರ್ವತೋನ್ಮುಖ ಅಭಿವೃದ್ಧಿಗೆ ಆದ್ಯತೆ ಇದೆ. ಅದರಿಂದಾಗಿ ವ್ಯಕ್ತಿತ್ವ ವಿಕಸನಗೊಳ್ಳಲಿದೆ. ರಾಜ್ಯ ಸರ್ಕಾರ ಅಂಥ ನೀತಿಯನ್ನು ಕೈಬಿಡಬಾರದು. ಅದರಲ್ಲಿನ ಯಾವುದಾದರೂ ಅಂಶಗಳ ಬಗ್ಗೆ ಒಪ್ಪಿಗೆ ಇಲ್ಲವಾದರೆ ಅದನ್ನು ಚರ್ಚಿಸಲಿ ಅದರ ಹೊರತಾಗಿ ಇಡೀ ಶಿಕ್ಷಣ ನೀತಿಯನ್ನೇ ತಿರಸ್ಕರಿಸುವುದಾಗಿ ಹೇಳಿದರೆ ಅದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಿದಂತ್ತಾಗುತ್ತದೆ. ಆ ಕೆಲಸವಾಗಬಾರದು ಅದಕ್ಕಾಗಿ ಸರ್ಕಾರಕ್ಕೆ ಕೂಡಲೇ ಪತ್ರ ಬರೆಯುವುದಾಗಿ ತಿಳಿಸಿದರು.ಬ್ರಾಹ್ಮಣರಿಗೆ ಪೂರಕವಾಗದ ಅನೇಕ ಕಾನೂನುಗಳನ್ನು ಆಳುವ ಸರ್ಕಾರಗಳು ತಂದಾಗಲೂ ವಿರೋಧಿಸದೆ ಅವುಗಳನ್ನು ಒಪ್ಪಿಕೊಂಡಿದ್ದೇವೆ. ಎಲ್ಲರನ್ನು ಒಳಗೊಳ್ಳುವ ಸ್ವಭಾವ ನಮ್ಮದಾದರೂ ಬ್ರಾಹ್ಮಣರು ಎಂಬ ಕಾರಣಕ್ಕೆ ವಿರೋಧಕ್ಕೆ ಒಳಗಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಅಮೇರಿಕ ಅಧ್ಯಕ್ಷ ಸ್ಥಾನಕ್ಕೆ ವಿವೇಕ ರಾಮಸ್ವಾಮಿ ಅವರ ಹೆಸರು ಕೇಳಿ ಬಂದಿದೆ. ಇಲ್ಲಿ ನಮ್ಮ ಬಗ್ಗೆ ಅಪಸ್ವರ, ಅಗೌರವದಿಂದ ಮಾತನಾಡಿದರೂ ಅಂತಾರಾಷ್ಟೀಯ ಮಟ್ಟದಲ್ಲಿ ಬ್ರಾಹ್ಮಣರಿಗೆ ಗೌರವ ಸಿಗುತ್ತಿದೆ. ಪರದೇಶದಲ್ಲಿ ಬ್ರಾಹ್ಮಣರು ವಾಸಿಸುತ್ತಿದ್ದರೂ ಇಲ್ಲಿಯ ಆಚಾರಗಳನ್ನು ಬಿಡದಿರುವುದು ತೃಪ್ತಿಕರ ಎಂದು ಹೇಳಿದರು.ಆಚಾರ್ಯತ್ರಯರು ಧರ್ಮ ಬೋಧಿಸಿದ್ದಾರೆ ಆದರೆ ಅವರ ಹೆಸರಿನಲ್ಲಿ ನಾವು ಬೇರೆಯಾಗಬಾರದು. ಸಮಾಜವನ್ನು ನಿಂದಿಸುವವರು ಬ್ರಾಹ್ಮಣರೆಂದೇ ಟೀಕಿಸುತ್ತಾರೆ ವಿನಾ ಒಳಪಂಗಡ, ವಿಚಾರ ನೋಡಿ ಟೀಕಿಸುವುದಿಲ್ಲ ಹೀಗಾಗಿ ಎಲ್ಲರೂ ಒಂದಾಗಬೇಕೆAದು ಸಲಹೆ ಮಾಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಕಡುಬಡವ ಹಿರಿಯ ನಾಗರಿಕರು, ಅಂಗವಿಕಲರಿಗೆ ಗೌರವಧನ ಒದಗಿಸಲಾಗುತ್ತಿದೆ. ಮಹಾಸಭೆಗಾಗಿ ಹಾವೇರಿಯಲ್ಲಿ ಜಾಗೆಯನ್ನು ಪಡೆಯಲಾಗಿದೆ ಎಂದು ವಿವರಿಸಿದರು. ಶಿಕ್ಷಣ ಒಂದರಿಂದಲೇ ಜೀವನ ರೂಪ ಗೊಳ್ಳುವುದಿಲ್ಲ. ಕೂಡು ಕುಟುಂಬದೊಂದಿಗೆ ಹೊಂದಿಕೊಳ್ಳುವ ಗುಣ, ತಂದೆ-ತಾಯಿ, ಅತ್ತೆ-ಮಾವಂದಿರನ್ನು ಚೆನ್ನಾಗಿ ನೋಡಿ ಕೊಳ್ಳುವುದು ಸೇರಿದಂತೆ ಜೀವನ ಕಲೆಯೂ ಮುಖ್ಯವಾಗಿರುತ್ತದೆ. ಜೀವನದಲ್ಲಿ ಸಾಮಾನ್ಯ ಜ್ಞಾನ ಅತೀ ಮುಖ್ಯವಾಗಿರುತ್ತದೆ ಹೀಗಾಗಿ ಅಂಕಗಳಿಸುವುದು ಒಂದೇ ಬದುಕಾಗಬಾರದು ಎಂದು ಸಲಹೆ ಮಾಡಿದರು. ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರವೂ ದೊಡ್ಡದಾಗಿದ್ದು, ಸಮಾಜದ ಮಹಿಳಾ ಸಾಧಕಿಯರನ್ನು ಗುರುತಿಸಿ ಸಮಾವೇಶವನ್ನು ಹಮ್ಮಿಕೊಳ್ಳುವ ಯೋಚನೆಯಿದೆ ಎಂದರು.ವಿಜಯಪುರ ಅಕ್ಕಮಹಾದೇವಿ ವಿವಿ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ ಅವರು ಮಾತನಾಡಿ, ಶಿಕ್ಷಣದಲ್ಲಿ ಇಂದು ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು. ಕೇಂದ್ರ ಸರ್ಕಾರ ರೂಪಿಸಿದ್ದ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಸರ್ವತೋನ್ಮುಖ ಅಭಿವೃದ್ಧಿ ಎಂಬ ಶಬ್ದವಿದೆ. ಅದರ ಅರ್ಥ ಆಧ್ಯಾತ್ಮಿಕ, ಕೌಶಲವೂ ಒಳಗೊಂಡಿರುತ್ತದೆ. ಇಂಥ ನೀತಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಲು ಹೊರಟಿರುವುದರ ಬಗ್ಗೆ ಇತ್ತಿಚೆಗೆ ನಡೆದ ವಿಶ್ರಾಂತ ಕುಲಪತಿಗಳ ಸಭೆಯಲ್ಲಿ ಜನಾಂದೋಲನ ರೂಪಿಸಲು ತೀರ್ಮಾನಿಸಲಾಗಿದೆ ಎಂದರು.ಮಹಾಸಭೆ ಉಪಾಧ್ಯಕ್ಷ ಎಚ್.ಎನ್.ಹಿರಿಯಣಸ್ವಾಮಿ ಮಾತನಾಡಿ, ಬೆಂಗಳೂರಿನಲ್ಲಿ ಮಹಾಸಭೆಯಿಂದ ಮಹಿಳೆಯರಿಗಾಗಿ ವಸತಿ ನಿಲಯವನ್ನು ನಿರ್ಮಿಸಲಾಗಿದ್ದು, ಈ ಭಾಗದ ಮಹಿಳೆಯರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಹಣಕಾಸಿನ ಕೊರತೆಯಿಂದ ವಿದ್ಯಾಭ್ಯಾಸ ನಿಲ್ಲಬಾರದು ಎಂಬ ಕಾರಣಕ್ಕೆ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. ಕಡುಬಡವರಿಗೆ ೫೦೦ ರೂ.ಗಳ ವೃದ್ಧಾಪ್ಯ, ಅಂಗವಿಕಲ ಮಾಸಾಶನ ನೀಡಲಾಗುತ್ತಿದ್ದು, ಅದನ್ನು ೧ ಸಾವಿರ ರೂ.ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಅಶೋಕ ಹಾರನಹಳ್ಳಿ ಅವರು ಮಹಾಸಭೆ ಅಧ್ಯಕ್ಷರಾದ ನಂತರ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದ್ದು, ಮುಂದೆಯೂ ಹಲವು ಯೋಜನೆಗಳನ್ನು ರೂಪಿಸುವ ಗುರಿಯಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕಾ ಘಟಕದ ಅಧ್ಯಕ್ಷ ನಾರಾಯಣ ದೇಸಾಯಿ, ಬ್ರಾಹ್ಮಣರು ಎಂದು ಹೇಳಿದಾಕ್ಷಣ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಮನಸ್ಸಿನಲ್ಲಿ ಕೀಳರಿಮೆಯನ್ನು ನಾವು ತೊಡೆದು ಹಾಕಿ ಶ್ರೇಷ್ಠತೆಯನ್ನು ಮರಳಿ ಸ್ಥಾಪಿಸಿಕೊಳ್ಳಬೇಕು. ಮೊದಲು ರ‍್ಯಾಂಕ್‌ಗಳು ಬಂದಾಗ ಬ್ರಾಹ್ಮಣ ಹೆಸರುಗಳೇ ಇರುತ್ತಿದ್ದವು. ಇಂದು ಸ್ಥಿತಿ ಬದಲಾಗಿದೆ. ಅದಕ್ಕೆ ಕಾರಣ ಏನೆಂಬುದನ್ನು ಬ್ರಾಹ್ಮಣ ಸಮುದಾಯದ ಪಾಲಕರು ಚಿಂತಿಸಬೇಕು. ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಬೇಕೆಂದರು. ಪಂ. ಶ್ರೀಬಿಂದುಮಾಧವಾಚಾರ್ಯ ನಾಗಸಂಪಿಗೆ ಅವರು ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಬ್ರಾಹ್ಮಣರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಶಾಸಕ ಎಚ್.ವೈ.ಮೇಟಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಮಹಾಸಭೆ ಕಾರ್ಯದರ್ಶಿ ಸುಧಾಕರ ಬಾಬು, ಸಂಘಟನಾ ಕಾರ್ಯದರ್ಶಿಗಳಾದ ಕಾರ್ತಿಕ ಬಾಪಟ, ಅರುಣ ಹಿರಿಯಣ್ಣ, ಸಹಕಾರ್ಯದರ್ಶಿ ವಿನಯ ನಾಡಜೋಶಿ, ವಿಪ್ರ ರಾಯರ ಮಠದ ಅಧ್ಯಕ್ಷ ಶ್ರೀಹರಿ ಪಾಟೀಲ, ಸಮಾಜದ ಮುಖಂಡರಾದ ನರಸಿಂಹ ಆಲೂರ, ಮಹಾಸಭೆ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಸೂರಕರ, ಜಿಲ್ಲಾಧ್ಯಕ್ಷ ಕೆ.ಎಸ್.ದೇಶಪಾಂಡೆ, ಜಿಲ್ಲಾ ಕಾರ್ಯದರ್ಶಿ ಎಸ್.ಕೆ.ಕುಲಕರ್ಣಿ, ತಾಲೂಕಾ ಘಟಕಗಳ ಅಧ್ಯಕ್ಷರಾದ ಸತೀಶ ಕುಲಕರ್ಣಿ, ಅಡಿವೇಂದ್ರ ಇನಾಂದಾರ, ವೆಂಕಟೇಶ ದೇಶಪಾಂಡೆ, ಕೇಶವ ಕುಲಕರ್ಣಿ, ಶ್ರೀನಿವಾಸ ಪುರೋಹಿತ, ಯುವ ಘಟಕದ ಸಹ ಸಂಚಾಲಕ ಮಾಧವ ದೇಶಪಾಂಡೆ, ವಿನಾಯಕ ತಾಳಿಕೋಟಿ, ನವೀನ ಕಟ್ಟಿ, ರಾಘವೇಂದ್ರ ಕುಲಕರ್ಣಿ, ಗಿರೀಶ ಆಶ್ರಿತ, ವಿನಾಯಕ ಬೋಕರೆ, ಸಮೀರ ತಾಳಿಕೋಟಿ, ನವೀನ ಕಟ್ಟಿ, ರಾಘವೇಂದ್ರ ಗುಮಾಸ್ತೆ ಮತ್ತಿತರರು ಇದ್ದರು. ಕೆ.ವಿಜಯಕುಮಾರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!