ಬೆಳಗಾವಿ . ಅಧಿಕಾರಿಗಳು ಸ್ವಲ್ಪ ಮಟ್ಟಿಗೆ ಬುದ್ದಿ ಉಪಯೋಗಿಸಿದರೆ ಎಂತೆಂತಹ ಪ್ರಕರಣಗಳನ್ನು ಪತ್ತೆ ಮಾಡಬಹುದು ಎನ್ನುವುದಕ್ಕೆ ಬೆಳಗಾವಿ ಅಬಕಾರಿ ಇಲಾಖೆನೇ ಉತ್ತಮ ಉದಾಹರಣೆ.
ಗೋವಾದಿಂದ ಕರ್ನಾಟಕಕ್ಕೆ ಅಕ್ರಮ ಮದ್ಯ ಸಾಗಾಟ ಹೊಸದೇನಲ್ಲ ಎಷ್ಟೇ ಚೆಕ್ ಪೋಸ್ಟ ಹಾಕಿದರೂ ಗೋವಾ ಮದ್ಯ ಕರ್ನಾಟಕದ ಗಡಿ ದಾಟಿ ಬರುತ್ತಲೇ ಇದೆ.

ಸಹಜವಾಗಿ ಅಬಕಾರಿ ಇಲಾಖೆ ಹದ್ದಿನ ಕಣ್ಣುತಪ್ಪಿಸಿ ಸಾರಾಯಿ ಸಾಗಾಟ ಮಾಡುವುದು ಕಷ್ಟ ಸಾಧ್ಯವೇ ಸರಿ. ಆದರೂ ಕೆಲವರು ವಾಹನದಲ್ಲಿ ಯಾರಿಗೂ ಗೊತ್ತಾಗದಂತೆ ಮದ್ಯವನ್ನು ತರುತ್ತಾರೆ ಎನ್ನುವುದು ಹೊಸದೇನಲ್ಲ.


ಸಧ್ಯ ಬೆಳಗಾವಿ ಅಬಕಾರಿ ಇಲಾಖೆಯವರು ಪತ್ತೆ ಮಾಡಿದ ರೀತಿಯನ್ನು ಗಮನಿಸಿದರೆ ಭೇಷ್ ಎನ್ನಲೇ ಬೇಕು. ಏಕೆಂದರೆ ಆ ವಾಹನವನ್ನು ಹೇಗೆ ತಪಾಸಣೆ ಮಾಡಿದರೂ ಅದರಲ್ಲಿ ಲಕ್ಷಾಂತರ ರೂ ಮೊತ್ತದ ಸಾರಾಯಿ ಇದೆ ಎನ್ನುವದನ್ನು ಪತ್ತೆ ಮಾಡಲು ಆಗಲ್ಲ.

ಗಮನಿಸಬೇಕಾದರೆ ಮತ್ತೊಂದು ಸಂಗತಿ ಎಂದರೆ, ರಾತ್ರಿ ಹೊತ್ತು ಹೆದ್ದಾರಿಯಲ್ಲಿ ಸಾಗುತ್ತಿರುವ ವಾಹನಗಳಲ್ಲಿ ಅಕ್ರಮ ಮದ್ಯ ಪತ್ತೆ ಮಾಡುವುದು ಇದೆಯಲ್ಲಾ ಅದು ದೊಡ್ಡ ಸಾಹಸವೇ ಸರಿ.

ಸಹಜವಾಗಿ ಗೋವಾದಿಂದ ಬೆಳಗಾವಿ ಕಡೆಗೆ ಬರುವ ವಾಹನಗಳನ್ನು ಚೆಕ್ ಪೋಸ್ಟ್ ನಲ್ಲಿ ಹಿಡಿದರೂ ಕೆಲವೊಮ್ಮೆ ಮದ್ಯವನ್ನು ಪತ್ತೆ ಮಾಡಲು ಆಗಲ್ಲ. ಅಂತಹುದರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವ ಇಂತಹುದೇ ವಾಹನದಲ್ಲಿ ಸಾರಾಯಿ ಪತ್ತೆ ಮಾಡುವುದು ಇನ್ನೂ ಕಷ್ಟವೇ ಸರಿ.

ಕಳೆದ ದಿನ ಅಬಕಾರಿ ಇಲಾಖೆಯ ಅಧಿಕಾರಿ ವಿಜಯಕುಮಾರ ಹಿರೇಮಠರಿಗೆ ಲಾರಿಯಲ್ಲಿ ಮದ್ಯ ಬರುತ್ತದೆ ಎನ್ನುವ ಮಾಹಿತಿಯೊಂದು ಬಂದಿತ್ತು. ಆ ಸುದ್ದಿ ಬಂದ ತಕ್ಷಣ ತಡಮಾಡದೇ ಅವರು ಅದನ್ನು ತಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿ ಆ ಲಾರಿ ಪತ್ತೆಗೆ ಕಾರ್ಯ ಪ್ರವೃತ್ತರಾದರು.

ಸುವರ್ಣಸೌಧದ ಬಳಿ ತಮ್ಮ ಸಿಬ್ಬಂದಿಗಳೊಂದಿಗೆ ಗಸ್ತು ನಿಂತು ಕೊಂಡ ಹಿರೇಮಠರು ಅನೇಕ ಲಾರಿಗಳನ್ನು ತಪಾಸಣೆ ಮಾಡಿದರು.ಆದರೆ ಅದರಲ್ಲಿ ಮದ್ಯ ಮಾತ್ರ ಸಿಗಲೇ ಇಲ್ಲ.

ಕೊನೆಗೆ ಮತ್ತೊಂದು ಲಾರಿಯನ್ನು ಸೂಕ್ಷ್ಮವಾಗಿ ನೋಡಲು ಆರಂಭಿಸಿದರು. ಆರಂಭದಲ್ಲಿ ಅದರಲ್ಲಿ ಎಲ್ಲಿ ಹೇಗೆ ನೋಡಿದರೂ ಪ್ಲೈವುಡಗಳೇ ಕಂಡು ಬಂದವು. ಆದರೆ ಚಾಣಾಕ್ಷ ಅಧಿಕಾರಿ ಎನಿಸಿಕೊಂಡ ಹಿರೇಮಠರು ಆ ಪ್ಲೈವುಡಗಳ ಸ್ಥಿತಿಯನ್ಬು ಗಮನಿಸಿ ಇದರಲ್ಲಿ ಏನೋ ಗೋಲ್ ಮಾಲ್ ಇದೆ ಎಂದು ಊಹಿಸಿದರು.
ನಂತರ ಈ ಬಗ್ಗೆ ಲಾರಿ ಚಾಲಕನನ್ನು ವಿಚಾರಣೆ ಮಾಡಿದಾಗ ಏನೂ ಬಾಯಿ ಬಿಡಲೇ ಇಲ್ಲ. ಕೊನೆಗೆ ತಮ್ನದೇ ಶೈಲಿಯಲ್ಲಿ ವಿಚಾರಣೆಗಿಳಿದಾಗ ಚಾಲಕ ಇದರಲ್ಲಿ ೧೨೫ ಬಾಕ್ಸ್ ಬೆಲೆಬಾಳುವ ಮದ್ಯವಿದೆ ಎಂದು ಒಪ್ಪಿಕೊಂಡನು.

ನಂತರ ಆ ವಾಹನವನ್ನು ಇಂದು ಅಂದರೆ ಶನಿವಾರ ಮಾಧ್ಯಮದವರ ಮುಂದೆಯೇ ತಪಾಸಣೆ ಮಾಡಲು ಅಬಕಾರಿ ಅಧಿಕಾರಿಗಳು ನಿರ್ಧಾರ ಮಾಡಿದರು.
ಆರಂಭದಲ್ಲಿ ಹತ್ತಾರು ಜನ ಕಾರ್ಮಿಕರನ್ನು ಹಚ್ವಿ ಆ ವಾಹನದಲ್ಲಿದ್ದ ಪ್ಲೈವುಡಗಳನ್ನು ತೆಗೆಸತೊಡಗಿದರು. ಸುಮಾರು ಒಂದು ತಾಸು ಕಳೆದರೂ ಕೂಡ ಅದರಲ್ಲಿ ಪ್ಲೈವುಡ್ ಗಳೇ ಹೊರ ಬಂದವು ಹೊರತು ಮದ್ಯದ ಬಾಟಲಿಗಳು ಕಾಣಿಸಲಿಲ್ಲ. ಆಗ ಕೆಲವರು ಅಬಕಾರಿ ಇಲಾಖೆಯವರನ್ನು ದಂಧೆಕೋರರು ಹುಚ್ಚರಲ್ಲಿ ತೆಗೆದಿ ರಬಹುದು ಅಂತ ಅಂದುಕೊಂಡರು.

ಆದರೂ ಛಲದಂಕಮಲ್ಲನಂತೆ ಅಬಕಾರಿ ಇಲಾಖೆಯ ಜಂಟೀ ಆಯುಕ್ತ ಮಂಜುನಾಥ, ವಿಜಯಕುಮಾರ ಹಿರೇಮಠ, ಎನ್ .ಸಿ ಪಾಟೀಲ ಸೇರಿದಂತೆ ಇತರರು ಖುದ್ದು ಲಾರಿ ಹತ್ತಿ ಮದ್ಯದ ಬಾಕ್ಸ್ ಶೋಧ ನಡೆಸಿದರು..
ಮದ್ಯದ ಬಾವಿ..!

ಗಮನಿಸಬೇಕಾದ ಸಂಗತಿ ಎಂದರೆ ಲಾರಿಯಲ್ಲಿದ್ದ ಪ್ಲೈವುಡ್ ಗಳನ್ನು ಒಂದೊಂದಾಗಿ ಹೊರ ತೆಗೆದ ನಂತರ ಅದರೊಳಗೆ ಒಂದು ದೊಡ್ಡ ಬಾವಿಯ ಹಾಗೆ ಕಂಡು ಬಂದಿತು.
ಅಂದರೆ ಪ್ಲೈವುಡ್ ಗಳನ್ನು ಮದ್ಯದಲ್ಲಿ ಅಷ್ಟೇ ಕತ್ತರಿಸಲಾಗಿತ್ತು. ಅಂದರೆ ಹೊರಗಿನಿಂದ ನೋಡಿದರೆ ಅದು ಪ್ಲೈವುಡ್ ಹಾಗೆ ಕಾಣಿಸುತ್ತಿತ್ತು. ಕೊನೆಗೆ ಒಳಹೊಕ್ಕು ನೋಡಿದರೆ ಅದರಲ್ಲಿ ಸುಮಾರು ನೂರಕ್ಕೂ ಹೆಚ್ವು ಮದ್ಯದ ಬಾಟಲಿಗಳು ಕಂಡು ಬಂದವು.
ಗೋವಾದಲ್ಲಿಯೇ ಒಂದೊಂದು ಮದ್ಯದ ಕಿಮ್ಮತ್ತು ಎರಡು ಸಾವಿರ ಇದ್ದರೆ, ಬೆಳಗಾವಿಯಲ್ಲಿ ಅದರ ಬೆಲೆ ಕನಿಷ್ಟ 6 ಸಾವಿರ ಅಂತೆ.
ಅಂದರೆ ಅಬಕಾರಿ ಇಲಾಖೆ ಶನಿವಾರ ಭರ್ಜರಿ ಬೇಟೆ ಯಾಡಿದೆ. ದಂಧೆಕೋರರಮೇಲೆ ಶನಿ ವಕ್ಕರಿಸಿದಂತೆ ಆಗಿದೆ.