ಯಶಸ್ವಿಯಾದ ಬಿಸಿಯೂಟದ ಕಾರ್ಯಾಗಾರ: ವಿವಿಧ ಗಣ್ಯರಿಂದ ಶ್ಲಾಘನೆಗೆ
ಬೆಳಗಾವಿ
ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಾಯದಿಂದ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕಾಹಾರ ದೊರೆಯುತ್ತಿರುವುದು ಅಭಿಮಾನದ ಸಂಗತಿ ಎಂದು ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮಂಗಳವಾರ ಇಲ್ಲಿನ ಕಾಲೇಜು ರಸ್ತೆಯ ಹೋಟೆಲ್ ಒಂದರಲ್ಲಿ ಜರುಗಿದ ಕರ್ನಾಟಕ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಬೆಂಗಳೂರು ಇದರ ಪ್ರಥಮ ವಾರ್ಷಿಕೋತ್ಸವದ ಸವಿ ನನೆನಪಿನಲ್ಲಿ ಪ್ರಧಾನ ಮಂತ್ರಿ ಪೋಷನ್ ಶಕ್ತಿ ನಿರ್ಮಾಣ್ ಯೋಜನೆ ಮಧ್ಯಾಹ್ನ ಉಪಹಾರ ಯೋಜನೆ ಬೆಂಗಳೂರು ಹಾಗೂ ಬೆಳಗಾವಿ ಜಿಪಂ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರದ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ರಾಜ್ಯದಲ್ಲಿ 49 ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ 36 ಸ್ವ ಸಹಾಯ ಗುಂಪು ಕಾರ್ಯವನ್ನು ನಿರ್ವಹಿಸುತ್ತಿವೆ. ಸುಮಾರು 10ಲಕ್ಷಕ್ಕೂ ಅಧಿಕ ಮಕ್ಕಳಿಗೆ ಬಿಸಿಯೂಟ, ಹಾಲು, ಚೆಕ್ಕಿ, ಬಾಳೆಹಣ್ಣು ವಿತರಿಸುವ ಜವಾಬ್ದಾರಿ ಅಚ್ಚುಕಟ್ಟಾಗಿ ನಮ್ಮ ಸಂಸ್ಥೆಗಳು ನಿರ್ವಹಿಸುತ್ತಿವೆ. ಅಧಿಕಾರಿಗಳ ಸಹಾಯ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆಯಾಗುತ್ತಿದೆ. ಸ್ವಯಂ ಸೇವಾ ಸಂಸ್ಥೆಗಳು ಅಚ್ಚುಕಟ್ಟಾಗಿ ಕಾರ್ಯವನ್ನು ನಿರ್ವಹಿಸಲಿ ಎಂದರು.

ಜಿಪಂ ಸಿಇಒ ಹರ್ಷಲ್ ಬೋಯರ್ ಮಾತನಾಡಿ, ಕರ್ನಾಟಕ ರಾಜ್ಯ ಬಿಸಿಯೂಟ ಸಂಸ್ಥೆಗಳ ಒಕ್ಕೂಟ ಹುಕ್ಕೇರಿ ಶ್ರೀಗಳ ನೇತೃತ್ವದಲ್ಲಿ ರಾಜ್ಯದಲ್ಲಿ ಅದ್ಬುತವಾದ ಕಾರ್ಯ ಮಾಡಿದೆ. ನಮ್ಮ ಜಿಲ್ಲೆಯಲ್ಲಿ ಒಂದು ದಿನದ ಕಾರ್ಯಾಗಾರ ಮಾಡುವುದರ ಮೂಲಕ ನಮ್ಮ ಇಲಾಖೆಯ ಅಧಿಕಾರಿಗಳಿಗೆ ಸ್ವಯಂ ಸೇವಾ ಸಂಸ್ಥೆಗಳಿಗೆ ಮತ್ತು ಸ್ವ ಸಹಾಯ ಗುಂಪುಗಳಿಗೆ ಸಹಾಯ ಮಾಡಿದ್ದು ಅಭಿಮಾನದ ಸಂಗತಿ ಎಂದರು.

ಪಿಎಂ ಪೋಷನ್ ಶಕ್ತಿ ನಿರ್ಮಾಣ್ ಯೋಜನೆಯ ಹಿರಿಯ ಸಹಾಯಕ ನಿರ್ದೇಶಕ ಎಸ್.ಸಿ.ಮಂಜುನಾಥ ಮಾತನಾಡಿ, ಹುಕ್ಕೇರಿ ಹಿರೇಮಠದ ಶ್ರೀಗಳ ನೇತೃತ್ವದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿವೆ. ಎಲ್ಲರನ್ನೂ ಒಂದೇ ಸೂರಿನಲ್ಲಿ ಕರೆತಂದು ಕಾರ್ಯಾಗಾರ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಬೆಳಗಾವಿ ಡಿಡಿಪಿಐ ಬಸವರಾಜ ನಾಲತವಾಡ ಮಾತನಾಡಿ, ಬಿಸಿಯೂಟ ನೀಡುವ ಜವಾಬ್ದಾರಿ ಬಹಳಷ್ಟು ಜಾಗೃತೆಯಿಂದ ಮಾಡಬೇಕು. ಈ ಕಾರ್ಯವನ್ನು ಎಲ್ಲರೂ ಕುಟುಂಬದವರಂತೆ ಮಾಡುತ್ತಿದ್ದೀರಿ. ಸರಕಾರದ ನಿಯಮಕ್ಕೆ ಅನುಸಾರವಾಗಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವುದನ್ನು ಮುಂದುವರೆಸಿಕೊಂಡು ಹೋಗಿ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನಕುಮಾರ ಹಂಜಾಕಿ ಮಾತನಾಡಿ, ನಾವೆಲ್ಲರೂ ಕೂಡ ನೀವು ಮಾಡುವ ಒಳ್ಳೆಯ ಕಾರ್ಯಕ್ಕೆ ಸದಾ ನಿಮ್ಮೊಂದಿಗೆ ಇದ್ದೇವೆ. ನೀವು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿ ಎಂದರು.
ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ತೆರದಾಳ, ಮಿಲಾನಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ನಾರಾಯಣ ಸೋಗಲಿ, ಡಾ. ಕೆ.ಭೀಮಾ, ಅಪ್ಪಾಜಿ ಗೌಡರು, ಶ್ರೀಧರ ಶೆಟ್ಟರ, ಕಲ್ಲಪ್ಪ ಬೋರಣ್ಣವರ, ಬಸವರಾಜ ಕಾಜಗಾರ, ರವೀಂದ್ರಕುಮಾರ, ಚಿಕ್ಕೋಡಿ ಹಾಗೂ ಬೆಳಗಾವಿಯ ಹದಿನೈದು ಜನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹದಿನಾಲ್ಕು ಜನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರು, ಹದಿನೈದು ಜನ ಕ್ಷೇತ್ರ ಸಮನ್ವಯಾಧಿಕಾರಿಗಳು ಮತ್ತು ಬೆಂಗಳೂರು, ಯಾದಗಿರಿ, ಬಾಗಲಕೋಟ, ಬೆಳಗಾವಿ ಜಿಲ್ಲೆಯ ಎಲ್ಲ ಸ್ವಯಂ ಸೇವಾ ಸಂಸ್ಥೆಗಳ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.