ಲೋಕ ಲೆಕ್ಕ ಶುರು. ಸತೀಶ ಜಾರಕಿಹೊಳಿ ಬಳಗಕ್ಕೆ ಒಂದು ಸ್ಥಾನ ಪಕ್ಕಾ.
ಡಿಕೆಶಿ ಸಿಎಂ ಆಸೆಗೆ ತಣ್ಣೀರು ಸುರಿತಾ ಕುರುಬರ ಸಮಾವೇಶ
ಬೆಳಗಾವಿ:
ಗಡಿನಾಡ ಬೆಳಗಾವಿಯಲ್ಲಿ ಕಳೆದ ದಿ. 3 ರಂದು ನಡೆದ ರಾಷ್ಟ್ರೀಯ ಮಟ್ಟದ ಕುರುಬರ ಸಮಾವೇಶ ಹಲವು ರಾಜಕಾರಣದ ದಿಕ್ಕು ಬದಲಾಯಿಸುವಲ್ಲಿ ಯಶಸ್ವಿಯಾಗಿದೆ.
ಅಂದರೆ ರಾಜ್ಯದಲ್ಲಿ ಸಿದ್ಧರಾಮಯ್ಯ ಅವರನ್ನು ಬಿಟ್ಟರೆ ಕಾಂಗ್ರೆಸ್ ಗೆ ಮತ್ತೊಬ್ಬ ನಾಯಕರಿಲ್ಲ ಎನ್ನುವ ಸಂದೇಶ ರವಾನಿಸುವ ಕೆಲಸವನ್ನು ಈ ಸಮಾವೇಶದ ಮೂಲಕ ಮಾಡಲಾಯಿತು.. ಅಷ್ಟೇ ಅಲ್ಲ ಮುಂದಿನ ಅವಧಿಗೂ ಸಹ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿ ಎನ್ನುವುದನ್ನು ಕುರುಬ ಸಮಾವೇಶ ಸ್ಪಷ್ಟಪಡಿಸಿತು.
ಅಂದರೆ ಮುಂದಿನ ಅವಧಿಗೆ ಸಿಎಂ ಕುರ್ಚಿ ಮೇಲೆ ಕುಳಿತುಕೊಳ್ಳಬೇಕು ಎನ್ನುವ ಕನಸು ಕಂಡಿದ್ದ ಡಿ .ಕೆ. ಶಿವಕುಮಾರ ಆಸೆಗೆ ಈ ಸಮಾವೇಶ ತಣ್ಣೀರು ಹಾಕಿತು ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಕಳೆದ ದಿನ ನಡೆದ ಒಟ್ಟಾರೆ ಸಮಾವೇಶದಲ್ಲೂ ಕೂಡ ಡಿಕೆಶಿ ಪರಮಾಪ್ತರೂ ಸಹ ಸಿದ್ದುನೇ 5 ವರ್ಷದ ಅಧಿಕಾರಾವಧಿ ಪೂರ್ಣಗೊಳಿಸುತ್ತಾರೆ ಎಂದು ಹೇಳಿದ್ದೂ ಚರ್ಚೆಗೆ ಗ್ರಾಸವಾಯಿತು.
ಈ ಸಮಾವೇಶದ ಮೂಲಕ ಕುರುಬರು ಲೋಕಸಭೆಯಲ್ಲೂ ಕಾಂಗ್ರೆಸ್ ಬೆಂಬಲಿಸುತ್ತಾರೆ ಎನ್ನುವುದರ ಜೊತೆಗೆ ಸಿದ್ದುನೇ ಮಾಸ್ ಲೀಡರ್ ಎನ್ನುವುದನ್ನು ತೋರಿಸಿಕೊಡುವ ಕೆಲಸವನ್ನೂ ಮಾಡಿದರು.
ಅದನ್ನು ಬಿಡಿ. ಬೆಳಗಾವಿಯಲ್ಲಿ ಸಮಾವೇಶದ ಸಂದರ್ಭದಲ್ಲಿ ನಡೆದ ತೆರೆಮರೆಯ ಕಸರತ್ತುಗಳು ಮುಂಬರುವ ರಾಜಕಾರಣ ಹೀಗೆ ಸಾಗುತ್ತದೆ ಎಂದು ಹೇಳುವುದು ಕಷ್ಟ ಎನ್ನುವುದನ್ಬು ತೋರಿಸಿಕೊಡುತ್ತಿತ್ತು
ನಿನ್ನೆ ಸತೀಶ ಜಾರಕಿಹೊಳಿ ಬೆಳಗಾವಿಯ ಎರಡು ಲೋಕಸಭೆಯಲ್ಲಿ ಒಂದನ್ಬು ಕುರುಬರಿಗೆ ಕೊಡಬೇಕು ಎನ್ನುವ ಚಿಂತನೆ ನಡೆದಿದೆ ಎಂದು ಹೇಳಿದರು.
ಹೀಗಾಗಿ ಅಲ್ಲಿಯೇ ಕೆಲವರು ಕನಸು ಕಾಣಲು ಶುರುವಿಟ್ಟುಕೊಂಡರು.
dr. ಗಿರೀಶ ಸೋನವಾಲ್ಕರ ನಿವಾಸಕ್ಕೆ ರೇವಣ್ಣ ಮತ್ತು ವಿಶ್ವನಾಥ ಭೆಟ್ಟಿನೀಡಿದಾಗ ಸನ್ಮಾನಿಸಲಾಯಿತು
ಸಧ್ಯ ಬಂದಿರುವ ಮಾಹಿತಿ ಪ್ರಕಾರ ಸತೀಶ ಜಾರಕಿಹೊಳಿ ಬಳಗದಲ್ಲಿ ಗುರುತಿಸಿಕೊಂಡವರಿಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಎನ್ನುವ ಮಾತುಗಳಿವೆ.
ಹಾಗೇ ತಾಳೆ ಹಾಕತೊಡಗಿದರೆ ಗೋಕಾಕ ತಾಲೂಕಿನ ಕೌಜಲಗಿಯ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ, ನೇರ ಮಾತುಗಾರ ಡಾ. ರಾಜೇಂದ್ರ ಸಣ್ಣಕ್ಕಿ ಹೆಸರು ಮುನ್ನೆಲೆಗೆ ಬರುತ್ತದೆ.
ಇಲ್ಲಿ ಇವರನ್ನು ಹೊರತುಪಡಿಸಿದರೆ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲೂ ಬೇಕಾದ ವ್ಯಕ್ತಿ ಎಂದು ಗುರುತಿಸಿಕೊಂಡವರ ಹುಡುಕಾಟ ನಡೆಸುವ ಕೆಲಸವೂ ನಡೆಯುತ್ತಿದೆ.
ಅಂತಹ ಪಟ್ಟಿಯಲ್ಲಿ ಡಾ. ಗಿರೀಶ ಸೋನವಾಲ್ಕರ ಹೆಸರು ಪ್ರಮುಖವಾಗಿದೆ . ಇವರು ಜಾತಿ ಮೀರಿ ಬೆಳೆದವರು.
ಕಳೆದ ಬಾರಿ ಬಿಜೆಪಿ ಟಿಕೇಟ್ ಪಕ್ಕಾ ಎನ್ನುವ ಮಾತಿತ್ತು. ಆದರೆ ಕೊನೆಗಳಿಗೆಯಲ್ಲಿ ಅನುಕಂಪದ ಆದಾರದ ಮೇಲೆ ಅದು ಮಂಗಲಾ ಅಂಗಡಿಯವರ ಪಾಲಾಯಿತು.
ಈಗ ಅವರ ಸಂಬಂಧಿ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರಿದ್ದರಿಂದ ಅಂಗಡಿ ಕುಟುಂಬವನ್ನು ಬಿಜೆಪಿ ಕೈ ಹಿಡಿಯುವುದು ಕಷ್ಟ ಎನ್ನುವ ಮಾತಿದೆ.
ಇದೆಲ್ಲಾ ಒಂದು ಭಾಗವಾದರೆ ಕುರುಬ ಸಮಾವೇಶದಲ್ಲಿ ಡಿಕೆಶಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಿದ್ದರಾಮಯ್ಯ ನನ್ನ ರಾಜಕೀಯ ಗುರು ಎಂದಿದ್ದು ವಿಭಿನ್ನ ಚರ್ಚೆಗೆ ಎಡೆ ಮಾಡಿಕೊಡುತ್ತಿದೆ
ಅಷ್ಟೇ ಅಲ್ಲ ಅವರೇ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ಹೆಬ್ಬಾಳಕರ ಹೇಳಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿತು.
ಎರಡು ವರ್ಷಗಳ ಕಾಲ ಮಾತ್ರವೇ ಸಿದ್ದು ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರೇ ಸಿಎಂ ಆಗುತ್ತಾರೆ ಎಂದು ಪಕ್ಷದಲ್ಲಿ ವದಂತಿ ಜೋರಾಗಿತ್ತು.
ಸಚಿವೆ ಹೆಬ್ಬಾಳಕರ, ಮುಖ್ಯ ಮಂತ್ರಿಗಳನ್ನು ಹೊಗಳಿ ಅಟ್ಟಕ್ಕೇರಿಸುವ ಭರದಲ್ಲಿ ಇಂತಹ ಹೇಳಿಕೆ ನೀಡಿದರೇ ಅಥವಾ ಉದ್ದೇಶಪೂರ್ವಕವಾಗಿ ಈ ಮಾತನ್ನು ಆಡಿದರಾ ಎನ್ನುವುದು ಗೊತ್ತಾಗಿಲ್ಲ.
.ರಾಜಕೀಯದಲ್ಲಿ ಯಾರೂ ಶತ್ರುವೂ ಅಲ್ಲ; ಮಿತ್ರರೂ ಅಲ್ಲ ಎಂಬುದು ಈಗಾಗಲೇ ಹಲವಾರು ಪ್ರಕರಣಗಳನ್ನು ಕಂಡಾಗ ಮನದಟ್ಟಾಗುತ್ತದೆ. ಆದರೆ ಹೆಬ್ಬಾಳಕರ ಅವರ ಮಾತಿನ ಹಿಂದಿನ ಮರ್ಮವೇನು ಎಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.