Headlines

ರಾಜಕೀಯ ಯುದ್ಧದಲ್ಲಿ ಅಧಿಕಾರಿಗಳೇ ಬಲಿಪಶು

ಬೆಳಗಾವಿ.

ರಾಜಕಾರಣದಲ್ಲಿ ಯಾರು ಶತ್ರುನೂ ಅಲ್ಲ, ಮಿತ್ರನೂ ಅಲ್ಲ. ಆದರೆ ಅಂತಹ ರಾಜಕಾರಣಿಗಳ ಮಾತು ಕೇಳಿ ಏನಾದರೂ ಮಾಡ ಹೊರಟರೆ ಬಲಿ ಪಶು ಆಗುವವರು ಅಧಿಕಾರಿಗಳೇ..!

ಇದನ್ನು ಎಲ್ಲರೂ ಒಪ್ಪುವ ಮಾತು. ಅನುಮಾನವೇ ಇಲ್ಲ. ಹೇಗಿದೆ ಎಂದರೆ ,ಎಲ್ಲವೂ ಸುಸೂತ್ರವಾಗಿ ದಾಟಿದರೆ ನೂರು ವರ್ಷ ಆಯಸ್ಸು. ಅಕಸ್ಮಾತ ಯಾರಾದರೂ ಸ್ವಲ್ಪ ಕಿರಿಕ್ ಮಾಡಿದರೆ ಖೇಲ್ ಖತಂ.! ಟಾರ್ಗೆಟ್ ಫಿಕ್ಸ್.

ಸಧ್ಯ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಅಧಿಕಾರಿಗಳಿಗೆ ಸರ್ಕಾರಿ ನೌಕರಿ ಮಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ಬಂದೊದಗಿದೆ.

ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರು ಇದ್ದಾರೆ. ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಮಂತ್ರಿ. ಇನ್ನೊಬ್ವರಿಗೆ ಉಡುಪಿ ಉಸ್ತುವಾರಿ ಇದ್ದರೂ ಬೆಳಗಾವಿ ಹಿಡಿತ ಬಿಟ್ಟುಕೊಳ್ಳಲು ಸಿದ್ಧರಿಲ್ಲ. ರಾಜಕೀಯದಲ್ಲಿ ಅದು ಸಹಜ ಕೂಡ ಹೌದು.

ಹೀಗಾಗಿ ಒಬ್ಬರು ಒಬ್ಬ ಅಧಿಕಾರಿ ವರ್ಗಾವಣೆಗೆ ಶಿಫಾರಸ್ಸು ಕೊಟ್ಟರೆ, ಇನ್ನೊಬ್ಬ ಸಚಿವರು ಬೇರೊಬ್ಬರಿಗೆ ಶಿಫಾರಸ್ಸು ಪತ್ರ ಕೊಡುತ್ತಿದ್ದರು. ಇದು ಇಲ್ಲಷ್ಟೇ ಅಲ್ಲ ಸರ್ಕಾರ ಮಟ್ಟದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು.

ಇಸರಿಂದ ಸತೀಶ ಜಾರಕಿಹೊಳಿ ತಮ್ಮದೇ ಆದ ರೀತಿಯಲ್ಲಿ ಸರ್ಕಾರಕ್ಕೆ ಸಂದೇಶ ರವಾನಿಸಿದ ನಂತರ ಅವರು ಸೂಚಿಸಿದ ವರ್ಗಾಚಣೆ ಪಟ್ಟಿ ಫಟಾ ಫಟ್ ಅಂತ ರಿಲೀಸ್ ಆದವು.

ಆದರೆ ಎಲ್ಲವೂ ಸುಸೂತ್ರವಾಗಿ ಮುಗಿಯಿತು ಅನ್ನೊವಾಗಲೇ ಪಾಲಿಕೆಗೆ ಪೌರಾಡಳಿತ ನಿರ್ದೇಶನಾಲಯ ಕೊಟ್ಟ ನೋಟೀಸ್ ಮತ್ತು ಮೇಯರ್ ಸಹಿ ಮಾಡಿದ ಪತ್ರ ಕಳ್ಳತನ ವಿಷಯ ಮುನ್ನೆಲೆಗೆ ಬಂದಿತು.

ಇಲ್ಲಿ ನೋಟೀಸ್ ಬರೀ ಬೆಳಗಾವಿ ಮಹಾನಗರ ಪಾಲಿಕೆಗೆ ಅಷ್ಟೇ ಬಂದಿರಲಿಲ್ಲ. ರಾಜ್ಯದ ಹುಬ್ಬಳ್ಳಿ ಧಾರವಾಡ ಪಾಲಿಕೆಗೂ ಬಂದಿದೆ. ಇದಕ್ಕೊಂದು‌ ಸಿಂಪಲ್ ಉತ್ತರ ಕೊಟ್ಟು ಕಳಿಸಿದ್ದರೆ ಈ ಪ್ರಶ್ನೆಯೇ ಬರುತ್ತಿರಲಿಲ್ಲ. ಆದರೆ ಇಲ್ಲಿ ಉದ್ದೇಶ ಪೂರ್ವಕವಾಗಿ 138 ಪ್ರಕರಣವನ್ನು ಮರೆಮಾಚಲು ಹೋಗಿ ಇದನ್ನು ಕೆಲವರು ದೊಡ್ಡದು ಮಾಡಿದರು ಎನ್ನುವ ಮಾತು ಬರ್ತಿದೆ..

2 ಪ್ರಶ್ನೆ, 108 ಅನುಮಾನ..!

ಸಹಜವಾಗಿ ಇಲ್ಲಿ ಉದ್ಭವವಾಗಿರುವ ಈ ಎರಡು ಪ್ರಶ್ನೆಗಳನ್ನು ಕೆದಕುತ್ತ ಹೋದರೆ ನೂರೆಂಟು ಅನುಮಾನಗಳು ಉಲ್ಭಣವಾಗುತ್ತವೆ.

ಮೊದಲನೆಯದ್ದು..ಕಳೆದ ಸಪ್ಟೆಂಬರ್ ದಿ.‌21 ರಂದು ಮೇಯರ್ ಮತ್ತು ಆಯುಕ್ತರಿಗೆ ಪೌರಾಡಳಿತ ನಿರ್ದೇಶಕರು ಪತ್ರವನ್ನು ಕಳಿಸಿದ್ದರು.

ಇಲ್ಲಿ ಆಯುಕ್ತರಿಗೆ ಅದು ದಿ. ಅಕ್ಟೋಬರ್‌ 5 ರಂದು ತಲುಪಿದರೆ, ಮೇಯರ್ ಅವರಿಗೆ 10 ರಂದು ಸಿಕ್ಕಿದೆ. ಹೀಗಾಗಿ ಅನುಮಾನ ಇಲ್ಲಿಂದಲೇ ಶುರು ಆಗುತ್ತದೆ. ಇಲ್ಲಿ ಈ ವಿಳಂಬದ ಬಗ್ಗೆನೇ ಇನ್ನಷ್ಟು ಆಳವಾಗಿ ಕೆದಕುತ್ತ ಹೊರಟರೆ ಹಲವು ಇದರ ಸೂತ್ರಧಾರರ ಚಿತ್ರಗಳು ಕಣ್ಮುಂದೆ ಬರುತ್ತವೆ. ಇದು ಆಡಳಿತ ಬಿಜೆಪಿಗರಿಗೆ ಗೊತ್ತಿದ್ದರೂ ಅವರಿಗೆ ಬಿಸಿ ತುಪ್ಪ ಆಗಿದೆ

ಮೇಯರ್ ಹೆಸರಿನ ಮೇಲೆ ಬಂದ ಪತ್ರವನ್ನು ಆಯುಕ್ತರು ನೋಡಲು ಸಾಧ್ಯವೇ ಇಲ್ಲ.ಮೇಲಾಗಿ ಪೋಸ್ಟಮನ್ ವಿಳಂಬ ಮಾಡಿಕೊಟ್ಟರು ಅನ್ನಲೂ ಆಗಲ್ಲ. ಅಂದರೆ ಇಲ್ಲಿ ಮೇಯರ್ ಕೊಠಡಿಯಲ್ಲಿಯೇ ಏನೋ ಸದ್ದು ಗದ್ದಲವಿಲ್ಲದೇ ನಡೆಯುತ್ತದೆ. ಮತ್ತೊಂದು ಸೂಕ್ಷ್ಮವಾದ ಸಂಗತಿ ಎಂದರೆ, ಮೇಯರ್ ಗೆ ಕನ್ನಡ ಓದಲು ಬರಲ್ಲ. ಹಾಗಿದ್ದಾಗ ಮೊದಲು ಈ ಪತ್ರವನ್ನು ಓದಿ ಯಾವ ‘ಶ್ಯಾಣ್ಯಾ’ರಿಗೆ ಇದನ್ನು ಯಾರು ತೋರಿಸಿದರು? ಎನ್ನುವುದನ್ನು ಎಳೆ ಎಳೆಯಾಗಿ ಸಾಂದರ್ಭಿಕ ಸಾಕ್ಷಿ ಆದರಿಸಿ ವಿಚಾರಣೆ ಮಾಡುತ್ತ ಹೋದರೆ ಪತ್ರ 10 ದಿನ ಮಾಯವಾಗಿದ್ದು ಎಲ್ಲಿ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಎರಡನೆಯ ಸಂಗತಿ ಎಂದರೆ , ಸ್ಥಾಯಿ ಸಮಿತಿ ಬದಲು ಕೌನ್ಸಿಲ್ ದಲ್ಲಿ ತೆಗೆದುಕೊಂಡ ಗೊತ್ತುವಳಿ ಸರ್ಕಾರಕ್ಕೆ ಏಕೆ ಕಳಿಸಲಿಲ್ಲ. 2023-24 ರ ಬದಲು ಆಯುಕ್ತರು 2024-25 ಎಂದು ಕಳಿಸಲು ಬಲವಾದ ಕಾರಣ ಇನ್ನೂ ನಿಗೂಢವಾಗಿದೆ. ಅದನ್ನು ಬರೆದವರೇ ಸ್ಪಷ್ಟಪಡಿಸಬೇಕು.

ಇನ್ನು ಕೌನ್ಸಿಲ್ ಗೊತ್ತುವಳಿ ತಿದ್ದುಪಡಿಗೆ ಖುದ್ದು ಮೇಯರ್ ಸಹಿ ಮಾಡಿದ್ದ ಕೂಡ ಚರ್ಚೆಯ ವಸ್ತುವೇ. ಅಧಿಕಾರಿಗಳು ಮೇಯರ್ ಮನೆಗೆ ಸಹಿ ಮಾಡಿಸಿಕೊಳ್ಳಲು ಹೋಗಿದ್ದ ಸಂದರ್ಭದಲ್ಲಿ ಅದಕ್ಕೆ ಸಹಿ ಮಾಡಲು ಹಿಂಜರರಿದಿದ್ದಾರೆ.‌ಆಗ ಅವರ ಪುತ್ರ ದೀಪಕನೇ ಏನೂ ಓದದೇ, ‘ ಆಯಿ ಸೈನ್ ಕರಾ’ ಎಂದಿದ್ದು ಈ ಕೋಲಾಹಲಕ್ಕೆ ಕಾರಣ ಎನ್ನುವ ಮಾತು ಕೇಳಿ ಬರ್ತಿದೆ.

ಅಧಿಕಾರಿಗಳೇ ಟಾರ್ಗೆಟ್..!

ಪಾಲಿಕೆಯಲ್ಲಿ ಕಳೆದ ದಿನ ಏನೇ ನಡೆದದ್ದನ್ನು ಗಮನಿಸಿದರೆ ಅದು ರಾಜಕೀಯ ಅನ್ನೊದು ಗೊತ್ತಾಗುತ್ತದೆ.

ಇಲ್ಲಿ ಸಭೆಯಲ್ಲಿ ವೀರಾವೇಶದಿಂದ ಮಾತನಾಡಿದ ರಾಜಕಾರಣಿಗಳಿಗೆ ಅದರ ಎಫೆಕ್ಟ್ ಆಗೊದೇ ಇಲ್ಲ. ಏನೇ ಅದರಿಂದ ವ್ಯತಿರಿಕ್ತ ಪರಿಣಾಮ ಬಂದರೆ ಅದನ್ನು ಎದುರಿಸಬೇಕಾಗೋದು ಅಧಿಕಾರಿಗಳೇ.! ಹೀಗಾಗಿ ಇಲ್ಲಿ ಅಧಿಕಾರಿಗಳು ಎಚ್ಚರದ ನಡೆ ಅವಶ್ಯ

138 ಏನಾಯಿತು ನೋಡಿ..

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅತ್ಯಂತ ಸದ್ದು ಮಾಡಿದ್ದು ಆರೋಗ್ಯ ಸ್ಥಾಯಿ ಸಮಿತಿ ಯಡವಟ್ಟು.

ಇಲ್ಲಿ ಕೌನ್ಸಿಲ್ ಅನುಮತಿಗೂ ಮುನ್ನ 138 ಪೌರ ಕಾರ್ಮಿಕರನ್ನು ಯಾವುದೇ ಆದೇಶವಿಲ್ಲದೇ ನೇಮಿಸಿಕೊಳ್ಳುವ ಕೆಲಸವನ್ನು ಯಾರು ಮಾಡಿದರು ಎನ್ನುವುದು ಜಗಜ್ಜಾಹೀರ.

ಇಲ್ಲಿ ಕೂಡ ಮೇಯರ್ ಪತ್ರವನ್ನು ದುರುಪಯೋಗಪಡಿಸಿಕೊಳ್ಖುವ ಕೆಲಸವನ್ಬು ಸಮಿತಿಯ ಒಬ್ಬರು ಮಾಡಿದರು ಎನ್ನುವ ಮಾತಿದೆ.ಇದು ಈಗ ದೊಡ್ಡ ಮಟ್ಟದ ಹಗರಣ ಆಗಿ ಪರಿವರ್ತನೆ ಆಗಿದೆ.

ಈ ಕುರಿತು ಅಪಸ್ವರದ ಮಾತುಗಳು ಬಂದಾಗ ಯಾವುದೇ ಮುಲಾಜಿಲ್ಲದೆ ತನಿಖೆ ಮಾಡಿಸಿ ಅಂದರು. ಆಡಳಿತ ಪಕ್ಷದ ಕೆಲವೇ ಕೆಲವರನ್ನು ಬಿಟ್ಟು ಉಳಿದವರು ತನಿಖೆ ಆಗಲಿ ಅಂದರು.ಗಮನಿಸಬೇಕಾದ ಸಂಗತಿ ಅಂದರೆ, ಶಾಸಕ ಆಸೀಫ್ ಶೇಠರು ಮೊದಲು ಅಕ್ರಮ‌ ನೇಮಕಾತಿ ಹೊಂದಿದ ಎಲ್ಲರಗೂ ಸಂಬಳ ಕೊಡಿ ಎಂದರು. ಹೀಗಾಗಿ ತಪ್ಪು ಮಾಡಿದವರಿಗೆ ಹಂಡೆ ಹಾಲು ಕುಡಿದಂತೆ ಆಯಿತು.

ಆದರೆ ಈಗ ಮತ್ತೇ ಅದರ ಬಗ್ಗೆ ತನಿಖೆಗೆ ಅಸ್ತು ಎನ್ನಲಾಗಿದೆ.ಆದರೆ ಇದರ ಬಗ್ಗೆ ತನಿಖೆಗೆ ಇಳಿದರೆ ಸಿಕ್ಜಿ ಬೀಳೋದು ಆರೋಗ್ಯ ಶಾಖೆಯ ಅಧಿಕಾರಿಗಳೇ ಎನ್ನುವುದು ಸ್ಪಷ್ಟ.

ಇಂತಹ ಪ್ರಕರಣದಿಂದ ಬಿಜೆಪಿಗೆ ಮುಜುಗುರ ಉಂಟು ಮಾಡಿದ್ದಂತೂ ಸುಳ್ಳಲ್ಲ‌ . ಹೀಗಾಗಿ ಈ ಪ್ರಕರಣವನ್ನು ಖುದ್ದು ಶಾಸಕರೂ ಗಂಭೀರವಾಗಿ ಪರಿಗಣಿಸಿದ್ದಾರೆ. ಮೇಲಾಗಿ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇಂತಹ ವಾತಾವರಣ ಸೃಷ್ಟಿ ಮಾಡಿದ ಆರೋಗ್ಯ ಸ್ಥಾಯಿ ಸಮಿತಿಯ ‘ಭಯಂಕರ ಶ್ಯಾಣ್ಯಾ’ ಬಗ್ಗೆಯೂ ಬಿಜೆಪಿ ಹೈ ಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ಗೊತ್ತಾಗಿದೆ.

Leave a Reply

Your email address will not be published. Required fields are marked *

error: Content is protected !!