ಬೆಳಗಾವಿ:
ಪ್ರತಿಯೊಬ್ಬ ಯುವತಿಯೂ ವಿದ್ಯೆ ಕಲಿಯಬೇಕು. ಕಲಿತದ್ದನ್ನು ಸಮಾಜಕ್ಕೆ ಸಮರ್ಪಿಸಬೇಕೆಂದು ಲೇಖಕಿ ಆಶಾ ರತನ ಹೇಳಿದರು
ನಗರದ ವಿದ್ಯಾಧಿರಾಜ ಭವನದಲ್ಲಿ ರವಿವಾರ ಉನ್ನತಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಕ್ತಿ ಸಂಚಯ ಜಾಗೃತ ಮಹಿಳೆಯರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿ ಅವರುಮಾತನಾಡಿದರು.

ಹಣ ಸಂಪಾದಿಸುವುದು, ಮನೆ ಮಾಡುವುದು ಎಲ್ಲರ ಕನಸು. ಆದರೆ, ಸಂಪಾದಿಸಿದ ಹಣದಲ್ಲಿ ಒಂದಿಷ್ಟನ್ನು ಯಾರಿಗೆ ಅವಶ್ಯವಿದೆಯೋ ಅವರಿಗಾಗಿ ಬಳಸಬೇಕೆಂದರು.
ಭ್ರಷ್ಟಾಚಾರದಿಂದ ದೂರವಿರುವಂತೆ ಕರೆಕೊಟ್ಟ ಅವರು, ಸತ್ಯದೊಂದಿಗೆ ಭಗವಂತ ಇರುತ್ತಾನೆ. ಗಳಿಸಿದ ಹಣವನ್ನು ಕೆಟ್ಟ ಕೆಲಸಗಳಿಗೆ ವಿನಿಯೋಗಿಸಬೇಡಿ. ಅದರ ಪರಿಣಾಮ ನಿಮ್ಮ ಮೇಲಾಗುವುದಿಲ್ಲ. ನಿಮ್ಮ ಮಕ್ಕಳ ಮೇಲಾಗುತ್ತದೆ ಎಂಬುದನ್ನು ಮರೆಯಬೇಡಿ ಎಂದರು.
ನದಿ ಹರಿಯುತ್ತದೆ. ಆದರೆ ನದಿ ಕೆಳಗಿನ ಭೂಮಿ ಮಾತ್ರ ಸ್ಥಿರವಾಗಿರುತ್ತದೆ. ಪ್ರವಾಹ ಬರಲಿ, ಅನಾವೃಷ್ಟಿಯಾಗಲಿ ಏನೇ ಆದರೂ ಕೂಡ ಭೂಮಿ ಅದು ಹೇಗೆ ಇರುತ್ತದೆಯೋ ಹಾಗೆ ಇರುತ್ತದೆ. ಅದಕ್ಕಾಗಿ ಸತ್ಕಾರ್ಯಗಳನ್ನು ಮಾಡಿ. ಸಮಾಜದ ಋಣ ತೀರಿಸಿ. ಅಗತ್ಯ ಇರುವವರ ನೆರವಿಗೆ ಧಾವಿಸಿ ಎಂದು ಹೇಳಿದರು.
ಪುಣೆಯ ಮಹಿಳಾ ಸಮನ್ವಯ ಅಖಿಲ ಭಾರತೀಯ ಸಹಸಂಯೋಜಿಕಾ ಭಾಗ್ಯಶ್ರೀ ಸಾಠೆ ಮುಖ್ಯ ವಕ್ತಾರರಾಗಿ ಆಗಮಿಸಿದ್ದರು. ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹಕಾರ್ಯವಾಹಿಕಾ ಅಲಕಾ ಇನಾಮದಾರ, ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷೆ ಡಾ.ಜ್ಯೋತಿ, ಶಕ್ತಿ ಸಂಚಯದ ಉತ್ತರ ಕರ್ನಾಟಕ ಪ್ರಾಂತ ಸಂಯೋಜಿಕಾ ಆಶಾ ನಾಯಿಕ, ಉನ್ನತಿ ಟ್ರಸ್ಟ್ ಅಧ್ಯಕ್ಷ್ಯೆ ಲಕ್ಷ್ಮೀ ಮಿರ್ಜಿ, ಶಕ್ತಿ ಸಂಚಯ ಮಹಿಳಾ ಸಮಾವೇಶದ ಜಿಲ್ಲಾ ಸಂಯೋಜಿಕಾ ಶ್ರೀಮತಿ ಶಿಲ್ಪಾ, ಪಾಲ್ಗೊಂಡಿದ್ದರು.