Headlines

No SUNDAY, No MONDAY..24X7

ಈ ಅಧಿಕಾರಿಗಳಿಗೆ ದಿನದ 24 ತಾಸು ಸಾಕಾಗುತ್ತಿಲ್ಲ.

ಇವರಿಗೆ ಸಂಡೇ, ಮಂಡೇ ಎರಡೂ ಅಷ್ಟೆ.

ಗಡಿಯಾರ ಕಟ್ಟಿದ್ದರೂ ಸಮಯ ನೋಡಲ್ಲ.

ಸರ್ಕಾರದ ಸ್ವಾಗತಕ್ಕೆ‌ಸಕಲ ಸಜ್ಜು.

ಬೆಳಗಾವಿ.

ಅಧಿವೇಶನ‌ ನೆಪದಲ್ಲಿ ಇಡೀ ಸರ್ಕಾರ ಗಡಿನಾಡ ಬೆಳಗಾವಿಗೆ ಬರಲಿದೆ.‌ಡಿಸೆಂಬರ 4 ರಿಂದ ಬರೊಬ್ಬರಿ ಹತ್ತು ದಿನಗಳ ಕಾಲ ಗಣ್ಯಾತಿ ಗಣ್ಯರು ಬೆಳಗಾವಿಯಲ್ಲಿಯೇ ಬೀಡು ಬಿಟ್ಟಿದ್ದಾರೆ.

ಆ ಸಂದರ್ಭದಲ್ಲಿ ಹೊರಗೆ ಯಾವುದೇ ರೀತಿಯ ಕಿರಿಕ್ ಆಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಈ ಮೂರು ಅಧಿಕಾರಿಗಳ ಮೇಲಿದೆ.

ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟೆ ಮತ್ತು ಪೊಲೀಸ್ ಆಯುಕ್ತ ಸಿದ್ರಾಮಪ್ಪ ಅವರು ಈ ನಿಟ್ಟಿನಲ್ಲಿ ನಡೆಸುತ್ತಿರುವ ಶ್ರಮ ಹೇಳತೀರದು.

ಅವರಿಗೆ ಈಗ ಸಂಡೆ, ಮಂಡೆ‌ ನೆನಪಾಗುತ್ತಿಲ್ಲ. ಕೈಗಡಿಯಾರ ನೋಡದೇ ರಾತ್ರಿ ಹಗಲೆನ್ನದೇ ಕೆಲಸ ಮಾಡುತ್ತಿದ್ದಾರೆ. ಇದು ನಿಜ ನಿಜ.

ಬಹುತೇಕ ಸರ್ಕಾರಿ ಅಧಿಕಾರಿಗಳಿಗೆ ಸಂಡೆ ಮತ್ತು ಸರ್ಕಾರಿ ರಜೆ ಬಂದರೆ ಸಾಕು‌.‌ ಹಿಂದೊಂದು, ಮುಂದೊಂದು ದಿನ ರಜೆ ಹಾಕಿ ಜಿಗಿದು ಬಿಡುತ್ತಾರೆ. ಆ ಸಂದರ್ಭದಲ್ಲಿ ಕಚೇರಿಯತ್ತ ಮುಖ ಸಹ ಮಾಡಿ ಮಲಗಲ್ಲ.

ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಬೆಳಗಾವಿಯ ಸರ್ಕಾರಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಪ್ರಶಂಸನೀಯವೇ.! ಅನುಮಾನವೇ ಇಲ್ಲ.

ಬೆಳಗಾವಿ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರಿಗೆ ರಜೆ ಎನ್ನುವುದೇ ಇಲ್ಲ. ಮೇಲಾಗಿ ಇವರು ಎಂದೂ ಗಡಿಯಾರ ನೋಡಿ ಕೆಲಸ ಮಾಡಿಲ್ಲ. ಅಂದರೆ 24×7 . ಪಾಲಿಕೆಯಲ್ಲಿ ಹಿರಿಯ ಅಧಿಕಾರಿಗಳೇ ಬರ್ತಾರೆ ಅಂದ ಮೇಲೆ ಕಿರಿಯ ಅಧಿಕಾರಿಗಳೂ ಕಚೇರಿಗೆ ಬರುವುದು ಅನಿವಾರ್ಯ.

ಈಗ ಅಧಿವೇಶನ ಇದೆ. ಡಿಸೆಂಬರ 4 ರಿಂದ 15 ರವರೆಗೆ ಇಡೀ ಸರ್ಕಾರ ಗಡಿನಾಡಿಗೆ ಬರುತ್ತದೆ. ಅಂದ ಮೇಲೆ ಬೆಳಗಾವಿಯ ಅಧಿಕಾರಿಗಳಿಗೆ ಈಗ ಕೆಲಸ ಮಾಡಲು 24 ತಾಸು ಸಾಕಾಗುತ್ತಿಲ್ಲ. ಮೇಲಾಗಿ ಅಧಿವೇಶನ ಬೆಳಗಾವಿಯಲ್ಲಿಯೇ ನಡೆಯುತ್ತಿರುವುದರಿಂದ ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳುವುದು ಸಹಜ.

ಅದೆಲ್ಲವನ್ನು ಹೊತ್ತುಕೊಂಡ ಬೆಳಗಾವಿ ಪಾಲಿಕೆ ಆಯುಕ್ತರು ಸ್ಮಾರ್ಟ ಸಿಟಿ ಮಾಡಲು ಎಲ್ಕಿಲ್ಲದ ಕಸರತ್ತು ನಡೆಸಿದ್ದಾರೆ.

ಹೀಗಾಗಿ ಬೆಳ್ಳಂ ಬೆಳಿಗ್ಗೆ ಮನೆ ಬಿಡುವ ಆಯುಕ್ತ ಅಶೋಕ ದುಡಗುಂಟಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿದ್ದಾರೆ.

ಗಮನಿಸಬೇಕಾದ ಸಂಗತಿ ಎಂದರೆ ಇವರಿಗೆ ಸಿಟಿ ರೌಂಡ್ಸ್ ಹೋಗುವಾಗ ಕಾರೇ ಬೇಕು ಎಂದೆನಿಲ್ಲ . ಬಹುತೇಕ ಕಡೆಗೆ ಕಸ ತುಂಬುವ ವಾಹನದಲ್ಲಿಯೇ ಸಂಚರಿಸಿ ವೀಕ್ಷಣೆ ಮಾಡಿದ್ದಾರೆ. ಇನ್ನೂ ಒಂದು ವಿಷಯ ಎಂದರೆ, ಆಯಾ ವಾರ್ಡಗಳಿಗೆ ಹೋಗುವ ಮುನ್ನ ಸಂಬಂಧಿಸಿದ ನಗರಸೇವಕರಿಗೆ ತಿಳಿಸುವುದಲ್ಲದೇ ಅವರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚೆ ಕೂಡ ಮಾಡುತ್ತಾರೆ.

ಈಗ ಅಧಿವೇಶನ ಸಂದರ್ಭದಲ್ಲಿ ಕ್ಲೀನ್ ಸಿಟಿ ಜತೆಗೆ ಗಣ್ಯರ ವಸತಿ ಜವಾಬ್ದಾರಿ ಕೂಡ ಪಾಲಿಕೆ ಆಯುಕ್ತರ ಹೆಗಲ‌ ಮೇಲೆ ಬಿದ್ದಿದೆ. ಹೀಗಾಗಿ ಇವರು ಪಾಲಿಕೆಯ ಉಪ‌ಕಾರ್ಯದರ್ಶಿ,(ಆಡಳಿತ) ಉದಯಕುಮಾರ ತಳವಾರ ಅವರೊಂದಿಗೆ ಸೇರಿ ಹೋಟೇಲ್ ಮಾಲೀಕರೊಂದಿಗೆ ಸಭೆ ನಡೆಸುವುದು, ಅಚ್ಚುಕಟ್ಟು ವ್ಯವಸ್ಥೆ ಮಾಡುವುದರಲ್ಲಿ ಬ್ಯುಜಿ ಆಗಿದ್ದಾರೆ. ಹೀಗಾಗಿ ಪಾಲಿಕೆಯವರಿಗೆ ಸಂಡೇ ಮಂಡೆ ಎರಡೂ ಅಷ್ಟೆ ಎನ್ನುವಂತಾಗಿದೆ.

ಇವರೇ ಈ ಪರಿ ಕೆಲಸ ಮಾಡ್ತಾರೆ ಅಂದ ಮೇಲೆ ಜಿಲ್ಲಾಧಿಕಾರಿ ನಿತೇಶ ಪಾಟೀಲರದ್ದು ಹೇಗೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಅಧಿವೇಶನ ಸಂದರ್ಭದಲ್ಲಿ ಒಟ್ಟಾರೆ ವ್ಯವಸ್ಥೆ ಯ ಜವಾಬ್ದಾರಿ ಡಿಸಿ ಮೇಲಿರುತ್ತದೆ . ಅವರಿಗೆ ಸಭೆ ನಡೆಸಿ ಸೂಕ್ತ ನಿರ್ದೇಶನ ಕೊಟ್ಡು ಕೆಲಸ ಮಾಡಿಸಿಕೊಳ್ಳುವುದರಲ್ಲಿ ಸಾಕು ಸಾಕಾಗಿ ಹೋಗುತ್ತದೆ. ಆದರೂ ಅವರು ಎಲ್ಲವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೊರಟಿದ್ದಾರೆ‌.

ಗಮನಿಸಬೇಕಾದ ಸಂಗತಿ ಎಂದರೆ, ಇದಿಷ್ಟೇ ಆಗಿದ್ದರೆ ಆಯಿತು ಅನಬಹುದಿತ್ತು. ಆದರೆ ಈ ಸಂದರ್ಭದಲ್ಲಿ ಮಂತ್ರಿಗಳು, ಬೆಂಗಳೂರಿನ‌ ಹಿರಿಯ ಅಧಿಕಾರಿಗಳ ಸಭೆಗೂ ಡಿಸಿನೇ ಹಾಜರಾಗಬೇಕು. ಸಾರ್ವಜನಿಕರ ಸಮಸ್ಯೆಯನ್ನು ಆಲಿಸಬೇಕು. ಹೀಗಾಗಿ ಅವರು ಸಮಯ, ದಿನ ಎಲ್ಲವನ್ನು ಮರೆತು ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ.

ಇನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳಿಗಂತೂ ಈಗ ರಾತ್ರಿ ಹಗಲು ಯಾವುದು ಎನ್ನುವುದೇ ಗೊತ್ತಾಗುತ್ತಿಲ್ಲ.

ಅಧಿವೇಶನ ಸಂದರ್ಭದಲ್ಲಿ ಹೊರಗಿನಿಂದ ಬರುವ ಅಧಿಕಾರಿಗಳಿಗೆ ಮತ್ತು ಪೊಲೀಸ್ ಸಿಬ್ಬಂದಿಗೆ ವಸತಿ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಅವರು ತೆಲೆಬಿಸಿ ಮಾಡಿಕೊಂಡಿದ್ದಾರೆ.

ಪೊಲೀಸ್ ಸಿಬ್ಬಂದಿಗೆ ಅವರು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿಯೇ ಬಿಸಿ ಬಿಸಿ ಗುಣಮಟ್ಟದ ಊಟ ತಲುಪಬೇಕು ಎನ್ನುವುದು ಪೊಲೀಸ್ ಆಯುಕ್ತರ ಕಳಕಳಿ.

ಈ ನಿಟ್ಟಿನಲ್ಲಿ ಹಿಂದಿನ ಅಧಿವೇಶನದಲ್ಲಿ ಕೆಲಸ ಮಾಡಿದ ಅಧಿಕಾರಿಗಳಿಗೆ ಅದರ ಹೊಣೆ ಹೊರೆಸಿದ್ದಾರೆ. ಆದರೂ ಕೂಡ ಆಯುಕ್ತರು ಖುದ್ದು ಫೀಲ್ಡ್ ಗೆ ಇಳಿದು ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ.

ಇದರ ಜೊತೆಗೆ ಪ್ರತಿಭಟನೆಗಳಿಗೆ ಸರ್ಕಾರದ ನಿರ್ದೇಶನದನ್ವಯ ಅನುಮತಿ ಕೊಡುವ ಕೆಲಸ ಪೊಲೀಸ್ ಇಲಾಖೆ ಮೇಲಿದೆ. ಅಧಿವೇಶನದ ಸಂದರ್ಭದಲ್ಲಿ ಹೊರಗೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರು ಕೆಲಸ ಮಾಡುತ್ತಿದ್ದಾರೆ.

ಅದೇನೇ ಆಗಲಿ, ಅಧಿಕಾರಿಗಳ ಶ್ರಮ ಸಾರ್ಥಕ ಆಗಬೇಕಾದರೆ, ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆ ಆಗಬೇಕು. ಒಂದಿಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎನ್ನುವುದು ಜನರ ಹಕ್ಕೊತ್ತಾಯ. ಕಾದು ನೋಡೋಣ.

Leave a Reply

Your email address will not be published. Required fields are marked *

error: Content is protected !!