ರಾಜ್ಯಸಭೆ ಚುನಾವಣೆ: ಡಿಕೆಶಿ ತಂತ್ರ ಕುತೂಹಲ

5 ನೇ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ, ಕಾಂಗ್ರೆಸ್ ನಲ್ಲಿ ಹೆಚ್ಚಿದ ಪೈಪೋಟಿ. ಚುನಾವಣೆ ನಡೆದರೆ ಅಡ್ಡ ಮತದಾನ ಭೀತಿ ಕಾಡುತ್ತಿದೆ.ಮೊದಲನೇ ಪ್ರಾಶಸ್ತ್ಯದ ಮತಗಳಿಂದಲೇ ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳು ಗೆಲ್ಲಬಹುದು.

ವಿಶೇಷ ವರದಿ

ಬೆಂಗಳೂರು
ಬರುವ ಫೆಬ್ರವರಿ 27 ರಂದು ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆಗೆ ಐದನೇ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ಪರಿಶೀಲನೆ ನಡೆಸಿದೆ.
ವಿವಿಧ ರಾಜ್ಯಗಳಿಂದ ಒಟ್ಟು 56 ಸ್ಥಾನಗಳಿಗೆ ಚುನಾವನೆ ನಡೆಯಲಿದ್ದು ಆಯಾ ರಾಜ್ಯಗಳ ವಿಧಾನಸಭೆಯ ಸದಸ್ಯರು ಮತದಾರರಾಗಿದ್ದಾರೆ. ಆ ಪೈಕಿ ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ಕೇಂದ್ರ ಮಂತ್ರಿ ರಾಜೀವ್ ಚಂದ್ರಶೇಖರ್( ಬಿಜೆಪಿ) ಡಾ.ಎಲ್. ಹನುಮಂತಯ್ಯ, ಜಿ.ಸಿ.ಚಂದ್ರ ಶೇಖರ್,ಹಾಗೂ ಸಯ್ಯದ್ ನಸೀರ್ ಹುಸೆನ್ ( ಮೂವರೂ ಕಾಂಗ್ರೆಸ್) ಏಪ್ರಿಲ್ ನಲ್ಲಿ ನಿವೃತ್ತರಾಗಲಿದ್ದು ಈ ನಾಲ್ಕು ಸ್ಥಾನಗಳಿಗೆ ಆಯ್ಕೆ ನಡೆಯಲಿದೆ.


ಕರ್ನಾಟಕ ವಿಧಾನಸಭೆಯಲ್ಲಿ ಈಗಿರುವ ಸಸ್ಯರ ಸಂಖ್ಯಾ ಬಲದ ಪ್ರಕಾರ ಕಾಂಗ್ರೆಸ್ 136 ಶಾಸಕರನ್ನು ಹೊಂದಿ ಆಡಳಿತ ಪಕ್ಷವಾಗಿದೆ. ಬಿಜೆಪಿ 66 ಹಾಗೂ ಜೆಡಿಎಸ್ ನ 19 ಶಾಸಕರು ಇದ್ದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಮೂವರು ಪಕ್ಷೇತರ ಶಾಸಕರು ಸದನದಲ್ಲಿದ್ದಾರೆ.

ಕಾಂಗ್ರೆಸ್ ಆಡಳಿತ ಪಕ್ಷವಾಗಿರುವುದರಿಂದ ರಾಜ್ಯ ಸಭೆಗೆ ಆಯ್ಕೆಯಾಗಲು ಪುನರಾಯ್ಕೆಬಯಸಿರುವ ಸದಸ್ಯರೂ ಸೇರಿದಂತೆ ಅಧಿಕ ಆಕಾಂಕ್ಷಿಗಳ ತೀವ್ರ ಪೈಪೋಟಿ ನಡೆದಿದೆ.


ಸದ್ಯದ ಲೆಕ್ಕಾಚಾರದ ಪ್ರಕಾರ ನಾಲ್ಕೂ ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ಅವಕಾಶ ಇದೆಯಾದರೂ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ತಡೆ ಒಡ್ಡಲು ಪ್ರಯತ್ನಗಳು ನಡೆದಿವೆ.
ಬಿಜೆಪಿ ಹಾಗೂ ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಗೆ ಸ್ಥಾನ ಹಂಚಿಕೆಯ ಮೂಲಕ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆಯಾದರೂ ಸೀಟುಗಳ ಅಂತಿಮ ಆಯ್ಕೆ ಕುರಿತು ಮಾತುಕತೆ ನಡೆದಿಲ್ಲ. ಒಂದು ವೇಳೆ ಪಕ್ಷೇತರರ ಬೆಂಬಲ ಪಡೆದೂ ಎರಡೂ ಪಕ್ಷಗಳು ಒಟ್ಟಾದರೂ ಮತ್ತೊಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಅಗತ್ಯ ಸಂಖ್ಯಾಬಲ ಪ್ರತಿಪಕ್ಷಗಳಿಗೆ ಇಲ್ಲ.

ಬಹು ಮುಖ್ಯವಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಭಿನ್ನಮತೀಯ ಶಾಸಕರ ಸಂಖ್ಯೆ ದಿನೇ ದಿನೇ ಏರುತ್ತಿರುವುದು ತಲೆ ನೋವಾಗಿದೆ. ಒಂದು ವೇಳೆ ಚುನಾವಣೆಯೇ ನಡೆದರೆ ಅಡ್ಡ ಮತದಾನ ಭೀತಿ ಕಾಡುತ್ತಿದೆ.


ಕಾಂಗ್ರೆಸ್ ನಲ್ಲಿ ಮೂವರು ಅಭ್ಯರ್ಥಿಗಳನ್ನ ಸರಾಗವಾಗಿ ಗೆಲ್ಲಿಸಿಕೊಳ್ಳುವಷ್ಟು ಮತಗಳಿದ್ದು ನಂತರವೂ ಹೆಚ್ಚುವರಿ ಮತಗಳು ಉಳಿಯಲಿವೆ. ವಿಶೇಷವಾಗಿ ಈ ಚುನಾವಣೆ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ನಡೆಯಲಿರುವುದರಿಂದ ಮೊದಲನೇ ಪ್ರಾಶಸ್ತ್ಯದ ಮತಗಳಿಂದಲೇ ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳು ಗೆಲ್ಲುವುದು ಸುಲಭವಾಗಿದೆ

. ಕಾಂಗ್ರೆಸ್ ನಾಲ್ಕನೇ ಅಭ್ಯರ್ಥಿಯನ್ನು ಪಕ್ಷೇತರವಾಗಿ ಕಣಕ್ಕಿಳಿಸಿದರೆ ಆಗ ಚುನಾವಣಾ ಕಣ ರಂಗೇರುತ್ತದೆ. ಈಗಾಗಲೇ ಜೆಡಿಎಸ್ನ 19 ಶಾಸಕರ ಪೈಕಿ 10 ಮಂದಿ ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ. ಇದರ ಸುಳಿವರಿತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕರು ಕಾಂಗ್ರೆಸ್ ಜತೆ ಹೋಗದಂತೆ ಕಾಪಾಡಿಕೊಳ್ಳುವ ಎಲ್ಲ ಪ್ರಯತ್ನ ನಡೆಸಿದ್ದಾರೆ.

ಬಿಜೆಪಿಯ ಶಾಸಕರ ಪೈಕಿ ಬೆಂಗಳೂರು ಯಶವಂತ ಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಯಿಂದ ಈಗಾಗಲೇ ಒಂದು ಕಾಲು ಹೊರಗಿಟ್ಟಿದ್ದಾರೆ. ಇವರಿಬ್ಬರೇ ಅಲ್ಲದೇ ಬಿಜೆಪಿಯಲ್ಲಿ ನಾನಾ ಕಾರಣಗಳಿಗೆ ಅಸಮಧಾನಗೊಂಡ ಒಂದಷ್ಟು ಶಾಸಕರೂ ಇದ್ದು ಅವರನ್ನು ಡಿ.ಕೆ.ಶಿವಕುಮಾರ್ ಈಗಾಗಲೇ ಸಂಪರ್ಕಿಸಿದ್ದಾರೆ. ಈ ಶಾಸಕರ ಪಕ್ಷಾಂತರಕ್ಕೆ ಕಾನೂನು ಅಡ್ಡ ಬರುವುದರಿಂದ ಪಕ್ಷದಲ್ಲೇ ಉಳಿದು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿದರೂ ಅಚ್ಚರಿ ಇಲ್ಲ ಎಂಬ ಪ್ರಬಲ ಆತ್ಮ ವಿಶ್ವಾಸ ಕಾಂಗ್ರೆಸ್ ಪಾಳೇದಲ್ಲಿದೆ.
ಚುನಾವಣೆ ದಿನಾಂಕ ಈಗಷ್ಟೇ ಘೋಷಣೆ ಆಗಿದೆ. ಮುಂದಿನ ದಿನಗಳಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ಲೋಕಸಭೆ ಚುನಾವಣೆಗೆ ದಿಕ್ಸೂಚಿ ಆಗಲಿದೆ. ಪ್ರತಿ ಪಕ್ಷಗಳಂತೆ ಕಾಂಗ್ರೆಸ್ ನಲ್ಲೂ ಭಿನ್ನಮತೀಯ ಚಟುವಟಿಕೆ ನಡೆದಿದೆಯಾದರೂ ಬಯಲಿಗೆ ಬಂದಿಲ್ಲ. ಒಂದು ವದಂತಿ ಪ್ರಕಾರ ಬೆಳಗಾವಿಯ ಕಾಂಗ್ರೆಸ್ ನಾಯಕ, ಸಚಿವ ಸತೀಶ ಜಾರಕಿಹೊಳಿ ಕಾಂಗ್ರೆಸ್ ನಲ್ಲಿ ಅಸಮಧಾನಗೊಂಡಿದ್ದು ಬಿಜೆಪಿಯ ಕೆಲವು ನಾಯಕರ ಜತೆ ಮಾತುಕತೆ ನಡೆಸಿದ್ದಾರೆ ಎಂದೂ ಹೇಳಲಾಗುತ್ತಿದೆ. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಇದೇನಾದರೂ ಬಿಜೆಪಿಗೆ ಸಹಾಯ ಆಗಲಿದೆಯಾ ಕಾದು ನೋಡಬೇಕು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕನೇ ಅಭ್ಯರ್ಥಿಯನ್ನುಕಾಂಗ್ರೆಸ್ ನಿಂದ ಕಣಕ್ಕಿಳಿಸುವ ಬಗ್ಗೆ ಆಸಕ್ತರಾಗಿಲ್ಲ ಎಂದೂ ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!