Headlines

ಅಭಯ ಎಚ್ಚರಿಕೆ ಸಂದೇಶ ಯಾರಿಗಿತ್ತು ಗೊತ್ತಾ?

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ನೂತನ ಮೇಯರ ಮತ್ತು ಉಪಮೇಯರ ಚುನಾವಣೆ ಸುಖಾಂತ್ಯವಾಗಿ‌ ಮುಗಿತು.

ಇತಿಹಾಸದಲ್ಲಿ ಬಡ ಕುಟುಂಬದ ಮಹಿಳೆಯನ್ಬು ಮೇಯರ್ ಪಟ್ಟಕ್ಕೆ ಕುಳ್ಳಿರಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿದರು. ಇದರ ಜೊತೆಗೆ ಆಡಳಿತ ಪಕ್ಷದ ನಾಯಕರ ಆಯ್ಕೆ ಸಹ ನಡೆಯಿತು.

ಇಂದು ನಡೆದ ಆಯ್ಕೆ ಬಗ್ಗೆ ಯಾರಿಗೂ ತಕರಾರಿಲ್ಲ. ಎಲ್ಲರೂ ಭೇಷ್ ಎನ್ನುವ ರೀತಿಯಲ್ಲಿ ಆಯ್ಕೆ ಮಾಡಿದರು.

ಆದರೆ ಇದೆಲ್ಲದರ ನಡುವೆ ಪಾಲಿಕೆಯ ಕಿಂಗ್ ಮೇಕರ ಎನಿಸಿಕೊಂಡ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಸೂಕ್ಷ್ಮ ರೀತಿಯಲ್ಲಿ ಕೊಟ್ಟ ಎಚ್ಚರಿಕೆಯ ಸಂದೇಶ ಏನಿತ್ತು?

ಅವರು ಆ ಎಚ್ಚರಿಕೆಯ ಮಾತುಗಳನ್ನು ಆಡಲು ಕಾರಣವಾದರೂ ಏನಿತ್ತು ಎನ್ನುವುದನ್ಬು ಕೆದಕುತ್ತ ಹೋದರೆ ಹಿಂದೆ ನಡೆದು ಹೋದ ಬೀದಿ ರಂಪಾಟಗಳು ಥಟ್ಟನೆ ನೆನಪಿಗೆ ಬರುತ್ತವೆ.

ಆ ಎಲ್ಲ ರಂಪಾಟಗಳಿಂದ ಪಕ್ಷಕ್ಕೆ ಎಷ್ಟು ಡ್ಯಾಮೇಜ್ ಆಯಿತು ಎನ್ನುವುದು ಸೇರಿದಂತೆ ಅದನ್ನು ತಿಳಿಗೊಳಿಸಲು ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ ಅಷ್ಟೇ ಅಲ್ಲ ರಾಜ್ಯಮಟ್ಟದ ನಾಯಕರು ಏನೆಲ್ಲ ಕಸರತ್ತು ಮಾಡಿದರು ಎನ್ನುವುದು ಗುಟ್ಟಿನ ವಿಷಯವಾಗಿ ಉಳಿದಿಲ್ಲ.

ಸಿಂಪಲ್ ಆಗಿ ಹೇಳಬೇಕೆಂದರೆ, ಬಿಜೆಪಿ ಮೊದಲ ಅವಧಿಯಲ್ಲಿ ಮೇಯರ ಗಮನಕ್ಕೆ ಬಾರದೆ ಕೆಲವೊಂದು ಕಹಿ ಘಟನೆಗಳು ನಡೆದು ಹೋದವು. ಹಾಗೆ ನೋಡಿದರೆ ಬಿಜೆಪಿ ಮೊದಲ ಮೇಯರ್ ಗೌರವಾನ್ವಿತ ಮಹಿಳೆ. ಗೌರವ ಕೊಟ್ಟು ಗೌರವ ತೆಗೆದುಕೊಳ್ಳುವಂತಹವರು. ಆದರೆ ಅವಸರಕ್ಕೆ ಬಿದ್ದು ಒಂದಿಷ್ಟು ಗೊಂದಲ, ವಿವಾದವನ್ನು ಮೈಮೇಲೆ ಎಳೆದುಕೊಂಡರು ಎನ್ನುವುದು ಬೇರೆ ಮಾತು.

ಒಂದು ಹಂತದಲ್ಲಿ ಸರ್ಕಾರದಿಂದ ಸೂಪರ್ ಸೀಡ್ ನೋಟೀಸ್ ಕೂಡ ಬಂದಿತು. ಇಲ್ಲಿ ಪೌರಾಡಳಿತ ಇಲಾಖೆಯಿಂದ ಬಂದ ನೋಟೀಸ್ ಮೇಯರ್ ಗೆ ಹತ್ತು ದಿನ ತಡವಾಗಿ ಸಿಕ್ಕಿತು . ಆ ಪತ್ರವನ್ನು ಮುಚ್ವಿಟ್ಟವರು ಯಾರು ಎನ್ನುವುದು ಬಹಿರಂಗವಾಗಿ ಬಿಟ್ಟಿತ್ತು. ಈ ವಿವಾದದ ಕೇಂದ್ರ ಬಿಂದು ಯಾರು ಎನ್ನುವುದು ಗೊತ್ತಾಗಿತ್ತು.

ಈ ವಿವಾದವನ್ನು ರಾಜಕೀಯವಾಗಿ ಸಮರ್ಥವಾಗಿ ಎದುರಿಸುವಲ್ಲಿ ಶಾಸಕ ಅಭಯ ಪಾಟೀಲ ಮತ್ತು ಎಲ್ಲವನ್ನು ಕಾನೂನು ಬದ್ಧವಾಗಿ ಮಾಡುವಲ್ಲಿ ಹನುಮಂತ ಕೊಂಗಾಲಿ ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಇದೆಲ್ಲ ಒಂದು ಹಂತಕ್ಕೆ ಸರಿಹೋಯಿತು ಎನ್ನುವಾಗಲೇ ಕಡತ ನಾಪತ್ತೆ ಪ್ರಕರಣ ನಡೆಯಿತು. ಇಲ್ಲಿ ಕಾಂಗ್ರೆಸ್ ಸರ್ಕಾರವು ಮೇಯರ್ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ತಂತ್ರಗಾರಿಕೆ ನಡೆಸಿತು. ಆದರೆ ಅದನ್ನೂ ಕೂಡ ಬಿಜೆಪಿ ನಾಯಕರು ಸಮರ್ಥವಾಗಿ ಎದುರಿಸಿದರು..

ಅದು ರೀಪಿಟ್ ಆಗೋದು ಬೇಡ..!

ಇಲ್ಲಿ ಮೇಯರ್ ಆಗಿ ಆಯ್ಕೆಯಾದವರು ಸಂಭಾವಿತೆ. ಅಧಿಕಾರಿಗಳು ಅಷ್ಟೇ ಅಲ್ಲ ಹಿತಶತ್ರುಗಳು ಏನೇ ಹೇಳಿದರೂ ಹಿಂದೆ ಮುಂದೆ ನೋಡದೇ ನಂಬುವಂತಹವರು.

ಹೀಗಾಗಿ ಇಂದು ನೂತನವಾಗಿ ಆಯ್ಕೆಗೊಂಡ ಮೇಯರ್ ಸೇರಿದಂತೆ ಇತರರಿಗೆ ಗೊಂದಲಕ್ಕೆ ಅವಕಾಶ ಮಾಡಿಕೊಡುವಂತಹ ಸನ್ನಿವೇಶ ಸೃಷ್ಟಿಸಬೇಡಿ ಎನ್ನುವ ಸಂದೇಶ ರವಾನಿಸಿದ್ದಾರೆ. ಯಾವುದೇ ಕಡತಕ್ಕೆ ಸಹಿ ಮಾಡುವ ಮುನ್ನ ಅದರ ಸಾಧಕ‌ವಾಧಕಗಳ ಬಗ್ಗೆ ಚರ್ಚೆ ಮಾಡಿ. ಬೆಳ್ಳಗಿದ್ದುದು ಎಲ್ಲವೂ ಹಾಲು ಅಂತ ಭಾವಿಸಬೇಡಿ. ಎಲ್ಲವನ್ನೂ ಆಡಳಿತ ಪಕ್ಷದ ನಾಯಕರ ಗಮನಕ್ಕೆ ತಂದು‌ ಕೆಲಸ ಮಾಡಬೇಕು ಎಂದು ಸೂಚ್ಯವಾಗಿ ಹೇಳಿದ್ದಾರೆ.ಶಾಸಕ ಅಭಯ ಪಾಟೀಲರ ಇಂತಹ ಸೂಕ್ಷ್ಮ ಮಾತು ಯಾರಿಗೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಕಾಲಾಯತಸ್ಮೈ ನಮಃ

Leave a Reply

Your email address will not be published. Required fields are marked *

error: Content is protected !!