ವಿಜಯ ಮೋರೆ ಕಾರ್ಯ ಪ್ರಶಂಸನೀಯ. 30 ಜನ ವೃದ್ಧರು ಮುಂಬಯಿಗೆ..
ವಿಮಾನದಲ್ಲೇ ಸುತ್ತಾಟ. ಫೈವ್ ಸ್ಟಾರ್ ಹೊಟೇಲನಲ್ಲಿ ವಾಸ್ತವ್ಯ
ಬೆಳಗಾವಿ:
ನೀಲಿ ಆಗಸದಲ್ಲಿ ಮೋಡವನ್ನು ಬೇಧಿಸಿ ಮುಂದಕ್ಕೆ ಹೋಗುವ ವಿಮಾನಗಳನ್ನು ಕಂಡು ಇಲ್ಲಿಂದ ಟಾಟಾ ಹೇಳಿದ್ದು ಬಹುಶಃ ನಾವ್ಯಾರೂ ಮರೆತಿಲ್ಲ. ಬಾಲ್ಯದ ಸುಮಧುರ ಕ್ಷಣಗಳಲ್ಲಿ ಇದು ಕೂಡಾ ಒಂದು.
ಈಗಲೂ ಆಕಾಶದಲ್ಲಿ ವಿಮಾನ ಹಾರಾಟದ ಸದ್ದು ಜೋರಾಗಿ ಕೇಳಿದಾಗ ತಲೆ ಎತ್ತಿ ನಾವೂ ಅತ್ತ ಒಮ್ಮೆ ನೋಡೇ ನೋಡುತ್ತೇವೆ.
. ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಅಜ್ಜಿಯಂದಿರೂ ಕೂಡಾ ಮಾಡಿದ್ದು ಇಷ್ಟೇ. ಇಲ್ಲಿಂದಲೇ ವಿಮಾನ ಹಾರಾಟದ ಕ್ಷಣಗಳನ್ನು ಆಸ್ವಾದಿಸುತ್ತಾ ಮತ್ತೆ ಮಕ್ಕಳಾಗಿದ್ದಾರೆ. ಪ್ರತಿದಿನ ವಿಮಾನ ಹಾರಾಡುವಾಗ ಇಲ್ಲಿಂದಲೇ ಕೈ ಬೀಸಿ ಟಾಟಾ ಮಾಡಿ ಖುಷಿ ಪಟ್ಟಿದ್ದಾರೆ. ವಿಮಾನದಲ್ಲಿ ಹಾರಾಟ ಮಾಡುವ ಅನುಭವ ಹೇಗಿರಬಹುದು ಎಂದು ತಮ್ಮೊಳಗೇ ಚರ್ಚೆ ಮಾಡಿದ್ದಾರೆ. ಅಷ್ಟೆ. ಅಜ್ಜಿಯಂದಿರಿಗೆ ವಿಮಾನ ಹಾರಾಟದ ಬಗೆಗೆ ಇರುವ ಕ್ರೇಜ್ ಕಂಡ ವೃದ್ಧಾಶ್ರಮದ ಆಡಳಿತ ಮಂಡಳಿ ಆಗಿದ್ದಾಗಲಿ, ಇವರೆಲ್ಲೆರನ್ನೊಮ್ಮೆ ವಿಮಾನ ಯಾನ ಮಾಡಿಸಲೇಬೇಕು ಎಂದು ನಿಶ್ಚಯ ಮಾಡಿದ್ದಾರೆ. ಅಂದಹಾಗೆ ರಾಷ್ಟ್ರದ ಇತಿಹಾಸದಲ್ಲಿಯೇ ಮೊದಲಬಾರಿಗೆ ವೃದ್ಧಾಶ್ರಮದ ಅಮ್ಮಂದಿರಿಗೆ ವಿಮಾನಯಾನದ ಭಾಗ್ಯವನ್ನು ಕಲ್ಪಿಸಿಕೊಡುವ ಮೂಲಕ ಮತ್ತೊಮ್ಮೆ ಆಶ್ರಮದ ಕಾರ್ಯಾಧ್ಯಕ್ಷ ವಿಜಯ ಮೋರೆ ಮಾನವೀಯತೆ ಮೆರೆದಿದ್ದಾರೆ.
ಸದ್ಯ ಫೆ. ೨೨ರಂದು ಮಧ್ಯಾಹ್ನ ಶಾಂತಾಯಿ ವೃದ್ಧಾಶ್ರಮದ ನಾಲ್ವರು ಅಜ್ಜಂದಿರು, ೨೪ ಅಜ್ಜಿಯಂದಿರು, ಆಶ್ರಮದ ಸಿಬ್ಬಂದಿ, ಆಡಳಿತ ಮಂಡಳಿ ನಿರ್ದೇಶಕರು ಸೇರಿ ಒಟ್ಟು ೪೨ ಜನ ಸ್ಟಾರ್ ಏರ್‌ವೇಸ್‌ನಲ್ಲಿ ಮುಂಬೈಗೆ ಹೋಗಲಿದ್ದಾರೆ. ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ಇವರನ್ನು ತಾಜ್ ಹೊಟೇಲ್‌ಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಸಂಜೆಯ ತಿಂಡಿ-ಚಹಾ ಸೇವನೆ ಮಾಡಿದ ನಂತರ ಸಮುದ್ರ ಕಿನಾರೆಯಲ್ಲಿ ವಿಹರಿಸಲು ಕರೆದುಕೊಂಡು ಹೋಗಲಾಗುತ್ತದೆ.
ಫೆ. ೨೬ರ ತನಕವೂ ಮುಂಬೈನಲ್ಲಿರುವ ಈ ತಂಡ ಅಟಲ್ ಜೀ ಸೇತುವೆ, ಗೇಟ್ ವೇ, ಮಹಾಲಕ್ಷ್ಮಿ ಮಂದಿರ, ಜೈನ ಮಂದಿರ, ಅನಿಲ್ ಅಂಬಾನಿಯವರ ಫೌಂಟೇನ್ ಆಫ್ ಎಂಜಾಯ್‌ಮೆಂಟ್, ಸಮುದ್ರ ಸಫಾರಿ ಸೇರಿದಂತೆ ವಿವಿಧ ಸ್ಥಳವನ್ನು ವೀಕ್ಷಣೆ ಮಾಡಲಿದ್ದಾರೆ. ಮಜಾ ಎಂದರೆ ಮುಂಬೈಗೆ ಬರುವ ಈ ಅಮ್ಮಂದಿರ ಭೇಟಿಗೆ ಅಂದಕಾಲತ್ತಿಲೆ ಸಿನೆಮಾಸ ಸೂಪರ್ ಸ್ಟಾರ್‌ಗಳು, ಹೀರೋಗಳು ಕೂಡಾ ಕಾದಿದ್ದು, ಈಗಾಗಲೇ ಇವರಿಗಾಗಿ ಸಮಯ ನಿಗದಿಪಡಿಸಿದ್ದಾರೆ!
ದಾನಿಗಳಿಗೆ ಸಲಾಂ: ಅಂದಹಾಗೆ ನಮ್ಮಲ್ಲಿ ಎಷ್ಟು ಜನ ನಮ್ಮ ಪೋಷಕರನ್ನು ವಿಮಾನದಲ್ಲಿ ಕರೆದೊಯ್ದಿದ್ದೇವೋ ಗೊತ್ತಿಲ್ಲ. ಆದರೆ ಈ ವಿಶೇಷ ಅಮ್ಮಂದಿರ ಬಗ್ಗೆ ಕಾಳಜಿ ವಹಿಸಿರುವ ದಾನಿಗಳು ಕೊಡುಗೈಯಿಂದ ಈ ಪ್ರವಾಸಕ್ಕೆ ನೆರವು ನೀಡಿದ್ದಾರೆ. ಸ್ಟಾರ್ ಗ್ರೂಪ್‌ನ ಸಂಜಯ ಗೋಡಾವತ್ ವಿಮಾನ ಟಿಕೇಟು ಜವಾಬ್ದಾರಿ ವಹಿಸಿದರೆ, ತಾಜ್ ಹೊಟೇಲ್‌ನವರು ತಿಂಡಿ ವ್ಯವಸ್ಥೆ ಮಾಡಿದ್ದಾರೆ. ಮುಂಬೈನ ಅನೀಲ್ ಜೈನ್ ಸೇರಿದಂತೆ ಹೆಸರು ಬಹಿರಂಗಪಡಿಸಲು ಇಷ್ಟಪಡದ ಅದೆಷ್ಟೋ ದಾನಿಗಳು ಈ ಅಮ್ಮಂದಿರ ಪ್ರವಾಸಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ. ಇವರೆಲ್ಲರೂ ಬದುಕಿನಲ್ಲಿ ಮೊದಲ ಬಾರಿ ವಿಮಾನ ಏರುವ ಸಂಭ್ರಮದಲ್ಲಿದ್ದು, ಸದ್ಯ ಶಾಂತಾಯಿ ವೃದ್ಧಾಶ್ರಮದಲ್ಲಿ ಹಬ್ಬದ ವಾತಾವರಣವಿದೆ. ಈ ಅಮ್ಮಂದಿರಿಗೆ ನಾವೂ ಹ್ಯಾಪಿ ಜರ್ನಿ ಹೇಳೋಣ