Headlines

ಸತೀಶ್ ಸಂಧಾನ- ಪ್ರತಿಭಟನೆ ವಾಪಸ್

ಸಚಿವ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಸಂಧಾನ ಸಭೆ; ಧರಣಿ ಕೈ ಬಿಟ್ಟ ರೈತರು

ಬೆಳಗಾವಿ: ಹಿಡಕಲ್ ಡ್ಯಾಮ್ ಹಿನ್ನೀರಿಗೆ ಜಮೀನು ಕಳೆದುಕೊಂಡ ರೈತರು ನೀರಾವರಿ ಇಲಾಖೆಯಿಂದ ಪರಿಹಾರ ನೀಡುವಂತೆ ಆಗ್ರಹಿಸಿ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ಸೋಮವಾರದಿಂದ ಮುತ್ತಿಗೆ ಹಾಕಿ ನಡೆಸುತ್ತಿರುವ ಧರಣಿಯನ್ನು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮಾಸ್ತಿಹೊಳಿ ಗ್ರಾಮದ ರೈತರು ಧರಣಿಯನ್ನು ಇಂದು ಕೈ ಬಿಟ್ಟಿದ್ದಾರೆ.
ಸೋಮವಾರ ಚನ್ನಮ್ಮಾ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಾಸ್ತಿಹೊಳಿ ರೈತರು 2 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದರು. ನಂತರ ಅಲ್ಲಿಂದ ನೀರಾವರಿ ಇಲಾಖೆ ಕಚೇರಿವರಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಸಿವಿಲ್ ಮುಖ್ಯ ಇಂಜಿನಿಯರ್ ಬಿ. ಆರ್. ರಾಠೋಡ್ ಕಚೇರಿಗೆ ಮುತ್ತಿಗೆ ಹಾಕಿ ಹರಿಹಾಯ್ದರು. ಅಲ್ಲದೇ ಭ್ರಷ್ಟ ಅಧಿಕಾರಿಗಳಾದ ಚೀಪ್ ಇಂಜಿನಿಯರ್ ಬಿ.ಆರ್. ರಾಠೋಡ, ಸಿ.ಎ.ಓ ಔದ್ರಾಮ, ನೀರಾವರಿ ನಿಗಮ ಎಂಡಿ ರಾಜೇಶ್ ಅಮೀನಬಾವಿ, ರವೀಂದ್ರ ತಾಳೂರ, ಎಸ್.ಎಂ. ಮಡಿವಾಲೆ, ಎಸ್ . ಆರ್ ಕಾಮತ ಅವರನ್ನು ಶೀಘ್ರವೇ ಅಮಾನತು ಮಾಡುವಂತೆ ರೈತರು ಪಟ್ಟು ಹಿಡಿದ್ದರು.

ಸೋಮವಾರ ಸಂಜೆ ಜಿಲ್ಲಾಧಿಕಾರಿಗಳು ಸಂಧಾನ ಸಭೆ ನಡೆಸಿದರೂ ರೈತರು ಪ್ರತಿಭಟನೆ ಮುಂದುವರೆಸಿದ್ದರು.ಇಂದು ಸಂಜೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ನೀರಾವರಿ ನಿಗಮ ಎಂಡಿ ರಾಜೇಶ್ ಅಮೀನಬಾವಿ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್‌, ಸಿವಿಲ್ ಮುಖ್ಯ ಇಂಜಿನಿಯರ್ ಬಿ. ಆರ್. ರಾಠೋಡ, ರೈತ ಮುಖಂಡ ಬಾಳೇಶ್‌ ಮಾವನೂರೆ, ಮಾಸ್ತಿಹೊಳಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ರೈತರೊಂದಿಗೆ ಸಭೆ ನಡೆಸುವ ಮೂಲಕ ಸಮಸ್ಯೆ ಪರಿಹರಿಸಲು ಭರವಸೆ ನೀಡಿದ್ದು, ರೈತರು ಪ್ರತಿಭಟನೆ ವಾಪಸ್‌ ಪಡೆದಿದ್ದಾರೆ.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ ಅವರು, ಹಿಡಕಲ್ ಡ್ಯಾಮ್ ಹಿನ್ನೀರಿಗೆ ಜಮೀನು ಕಳೆದುಕೊಂಡ ರೈತರು ಸಮಸ್ಯೆಗೆ ಸಿಲುಕಿದ್ದು, ಈ ಸಮಸ್ಯೆ ಬಗ್ಗೆ ನನ್ನ ಗಮನಕ್ಕೂ ಇದೆ. ಆದರೆ ಅಧಿಕಾರಿಗಳ ಬಳಿ 50 ವರ್ಷಗಳ ಹಿಂದನ ದಾಖಲೆಗಳು ಇಲ್ಲಾ. ಹೀಗಾಗಿ ಕೆಲ ರೈತರ ದಾಖಲೆಗಳು ಇದ್ದು, ಕೆಲ ರೈತರ ದಾಖಲೆಗಳಿಲ್ಲ. ಆದ್ದರಿಂದ ಅಧಿಕಾರಿಗಳಿಗೆ ವಸ್ತುಸ್ಥಿತಿ ಇದ್ದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ನಾಲ್ಕೈದು ದಿನ ಸಮಯ ನೀಡಿದ್ದೇವೆ. ಈ ಕೇಸ್‌ಗೆ ಸಂಬಂಧಿಸಿದ ಅಧಿಕಾರಿಗಳು ಬೇಗ ವರದಿ ನೀಡಿದರೆ ಸಚಿವ ಸಂಪುಟ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ರೈತರ ಸಮಸ್ಯೆ ಪರಿಹರಿಸುತ್ತೇವೆಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!