ಬೆಳಗಾವಿ. ನಾಡದ್ರೋಹಿ ಎಂಇಎಸ್ ಸಂಘಟನೆ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಆಯೋಗದ ಯಾವುದೇ ಪೂರ್ವಾನುಮತಿ ಪಡೆಯದೇ ಇಂದಿಲ್ಲಿ ಸಭೆ ನಡೆಸಿತು.
ಈ ಬಗ್ಗೆ ಸಂಘಟನೆಯ ಮುಖಂಡರಲ್ಲೊಬ್ಬರಾದ ರಮಾಕಾಂತ ಕೊಂಡುಸ್ಕರ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ.
ಸಭೆಯಲ್ಲಿ ಏನೇನಾಯಿತು?

ಕಳೆದ ಹಲವು ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ನಾಡದ್ರೋಹಿ ಎಂಇಎಸ್ ಈಗ ಅಸ್ತಿತ್ವ ಉಳಿಸಿಕೊಳ್ಳುವ ಸರ್ಕಸ್ ಮಾಡುತ್ತಿದೆ.
ಈ ಹಿಂದೆ ನಡೆದ ಪಾಲಿಕೆ ಚುನಾವಣೆ ಸಂದರ್ಭದಲ್ಲಿ AIMIM ಮತ್ತು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡ ಎಂಇಎಸ್ ಹೀನಾಯ ಸೋಲು ಅನುಭವಿಸಿತ್ತು.
ಪ್ರತಿಯೊಂದು ಚುನಾವಣೆ ಸಂದರ್ಭದಲ್ಲಿ ಮಾತ್ರ ನಿದ್ರಾವಸ್ಥೆಯಿಂದ ಎದ್ದೇಳುವ ಎಂಇಎಸ್ ಈಗ ಲೋಕಸಭೆ ಚುನಾವಣೆಯಲ್ಲಿ ಹೊಸ ನಾಟಕ ಶುರುವಿಟ್ಡುಕೊಂಡಿದೆ.
ಈ ಹಿನ್ನೆಲೆಯಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ಬಹುತೇಕ ಸ್ವಯಂ ಘೋಷಿತ ನಾಯಕರು ಅಭ್ಯರ್ಥಿ ಆಯ್ಕೆಯ ಕಸರತ್ತು ನಡೆಸಿದರು.
ಸಭೆ ನಡೆದಿರುವಾಗಲೇ ಓರ್ವ ನಾನು ನಿಲ್ಲೋನೆ ಎಂದು ಕೂಗುತ್ತ ಬಂದನು. ಆಗ ಅಲ್ಲಿಯೇ ಕುಳಿತವರೊಬ್ಬರು ಮೊದಲು ಕುರ್ಚಿ ಖಾಲಿ ಇದೆ ಕುಳಿತುಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಯೊಂದು ವಾರ್ಡನಿಂದ ಒಬ್ಬೊಬ್ಬ ಅಭ್ಯರ್ಥಿ ಯನ್ನು ಕಣಕ್ಕಿಳಿಸಬೇಕು ಎನ್ನುವ ಪ್ರಸ್ತಾಪ ಮಾಡಿದರು. ಕೊನೆಗೆ ಅಭ್ಯರ್ಥಿಗಳ ಆಯ್ಕೆಗೆ 32 ಜನರ ಸಮಿತಿ ರಚನೆ ಮಾಡಲಾಯಿತು.
ಬೆಳಗಾವಿ ನಗರ ದಕ್ಷಿಣ ಉತ್ತರ ಮತ್ತು ಗ್ರಾಮಾಂತರ ಕ್ಷೇತ್ರಗಳಿಂದ ಸಮಿತಿಯ 32 ಕಾರ್ಯಕರ್ತರು ಆಯ್ಕೆ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಆರಂಭದಲ್ಲಿ 21 ಜನರ ಸಮಿತಿ ಮಾಡಲು ನಿರ್ಧರಿಸಲಾಗಿತ್ತು. ನಂತರ ಪರಿಷ್ಕೃತ ಸಮಿತಿ ಮಾಡಿ ಬೆಳಗಾವಿ ಉತ್ತರದಿಂದ 11, ದಕ್ಷಿಣದಿಂದ 11 ಹಾಗೂ ಗ್ರಾಮೀಣ ಭಾಗದಿಂದ 10 ಮಂದಿಯನ್ನು 32 ಜನರ ಆಯ್ಕೆ ಸಮಿತಿಯನ್ನಾಗಿ ಮಾಡಲಾಗಿದೆ. ಶುಭಂ ಶೆಳಕೆ, ರಮಾಕಾಂತ ಕೊಂಡುಸ್ಕರ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.