E belagavi ವಿಶೇಷ
ಲೋಕಸಭೆ ಚುನಾವಣಾ ಫಲಿತಾಂಶ ಹೊರ ಬೀಳಲು ಇನ್ನು ಒಂದೇ ದಿನ ಬಾಕಿ ಇರುವ ಹಂತದಲ್ಲೇ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಗಳು ಆಗುವ ಸೂಚನೆ ಸಿಕ್ಕಿದೆ.
ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಸಚಿವ ಚಿಕ್ಕಮಗಳೂರಿನ ಸಿ.ಟಿ.ರವಿ ಯವರನ್ನು ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಬಿಜೆಪಿ ಪ್ರಕಟಿಸಿರುವುದು ಹಲವು ಊಹೋಪೋಹಗಳಿಗೆ ಕಾರಣವಾಗಿದ್ದು ವಿಧಾನ ಪರಿಷತ್ತು ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕರುಗಳ ಬದಲಾವಣೆ ಮಾತುಗಳೂ ಕೇಳಿ ಬರುತ್ತಿವೆ.

ಹಾಲಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಅವರು ಆಯ್ಕೆಯಾಗುತ್ತಾರೆಂಬ ಖಚಿತ ವಿಶ್ವಾಸ ಬಿಜೆಪಿ ಪಾಳೇಯದಲ್ಲಿ ಮನೆ ಮಾಡಿದೆ.
ಸಜ್ಜನ ಮತ್ತು ಸರಳ ರಾಜಕಾರಣಿ ಎಂದೇ ಹೆಸರಾದ ಶ್ರೀನಿವಾಸ ಪೂಜಾರಿ ಪರ ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮತದಾರರ ಒಲವು ವ್ಯಕ್ತವಾಗಿದ್ದು ಅವರು ಆಯ್ಕೆಯಾಗುವುದು ಖಚಿತ ಎಂಬ ನಂಬಿಕೆ ಬಿಜೆಪಿಯದ್ದು.

ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ವಿಫಕ್ಷ ನಾಯಕರಾಗಿರುವ ಅವರ ಸದಸ್ಯತ್ವದ ಅವಧಿ 2028 ನೇ ಇಸವಿಯವರೆಗೆ ಇದೆ. ಅವರು ಲೋಕಸಭೆಗೆ ಆಯ್ಕೆಯಾದರೆ ಆರು ತಿಂಗಳ ಒಳಗೆ ಎರಡೂ ಸದನಗಳ ಪೈಕಿ ಒಂದರ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಬಿಜೆಪಿ ಮೂಲಗಳ ಪ್ರಕಾರ ಅವರು ಲೋಕಸಭೆಗೆ ಆಯ್ಕೆಯಾಗುವುದು ಖಚಿತ ಹೀಗಾದಾಗ ವಿಧಾನ ಪರಿಷತ್ ಸದಸ್ಯತ್ವ ತ್ಯಜಿಸುತ್ತಾರೆ. ಸಹಜವಾಗೇ ವಿಪಕ್ಷ ನಾಯಕನ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡುವುದು ಅನಿವಾರ್ಯವಾಗುತ್ತದೆ. ಇದೀಗ ಈ ಸ್ಥಾನ ತೆರವಾಗುವ ಮುನ್ನವೇ ಬಿಜೆಪಿಯಲ್ಲಿ ಪೈಪೋಟಿ ಆರಂಭವಾಗಿದೆ.
ಸದ್ಯದಲ್ಲೇ ಪರಿಷತ್ತಿಗೆ ಆಯ್ಕೆಯಾಗಲಿರುವ ಮಾಜಿ ಸಚಿವ ಸಿ.ಟಿ.ರವಿ ವಿಪಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಈ ಕುರಿತಂತೆ ಸಂಘ ಪರಿವಾರ ಮತ್ತು ಬಿಜೆಪಿಯ ಪ್ರಮುಖ ನಾಯಕರ ನಡುವೆ ಮಾತುಕತೆಯೂ ನಡೆದಿದೆ ಎಂದೂ ಹೇಳಲಾಗುತ್ತಿದೆ.
ಇದೇ ವೇಳೆ ವಿಧಾನಸಭೆಯ ಪ್ರತಿಪಕ್ಷದ ಹಾಲಿ ನಾಯಕ ಅಶೋಕ್ ಕಾಋ್ಯ ನಿರ್ವಹಣೆ ಬಗ್ಗೆಯೂ ಬಿಜೆಪಿ ನಾಯಕರಲ್ಲಿ ಅಸಮಧಾನ ಮಡುಗಟ್ಟಿದೆ. ಸರ್ಕಾರವನ್ನು ಪರಿಣಮಕಾರಿಯಾಗಿ ಎದುರಿಸುವಲ್ಲಿ ಅವರು ವಿಫಲರಾಗುತ್ತಿದ್ದಾರೆ. ಬಹು ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸರ್ಕಾರದಲ್ಲಿರುವ ಘಟಾನುಘಟಿ ನಾಯಕರನ್ನು ಸಮರ್ಥವಾಗಿ ಎದುರಿಸುವಲ್ಲಿ ಅಶೋಕ್ ಸೋತಿದ್ದಾರೆ ಎಂಬ ಟೀಕೆಗಳು ವ್ಯಾಪಕವಾಗಿವೆ. ಪ್ರತಿ ಪಕ್ಷದ ನಾಯಕರಾಗಿ ಅವರ ಕಾರ್ಯ ನಿರ್ವಹಣೆ ಆಕ್ರಮಣಕಾರಿಯಾಗಿಲ್ಲ, ಬದಲಾಗಿ ಹೊಂದಾಣಿಕೆ ಮನೋಭಾವದಿಂದ ಪಕ್ಷ ಮುಜಗುರುದ ಪರಿಸ್ಥಿತಿ ಎದುರಿಸುವ ಸನ್ನಿವೇಶಗಳು ಎದರಾಗಿವೆ. ಮತ್ತೊಂದು ಸಂಗತಿ ಎಂದರೆ ಸದನದ ಒಳಗೆ ಪಕ್ಷದ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಜತೆ ಸಮನ್ವಯತೆ ಸಾಧಿಸುವಲ್ಲಿ ವಿಫಲರಾಗಿದ್ದು ಇದರಿಂದ ಗೊಂದಲಮಯ ಸನ್ನಿವೇಶವನ್ನು ಪಕ್ಷದ ಶಾಸಕರು ಎದುರಿಸಬೇಕಾದ ಇಕ್ಕಟ್ಟಿನ ಸನ್ನಿವೇಶಗಳೂ ಉಂಟಾಗಿದೆ ಎಂದೂ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಅಸಮಾಧಾನ ವ್ಯಕ್ತ ಪಡಿಸುತ್ತಾರೆ.

ಈ ಎಲ್ಲ ಪರಿಸ್ಥಿತಿಗಳ ಹಿನ್ನಲೆಯಲ್ಲಿ ಒಕ್ಕಲಿಗ ಸಮುದಾಯದ ಅಶೋಕ್ ಅವರನ್ನು ಬದಲಿಸುವ ಚಿಂತನೆ ನಡೆದಿದೆ. ಇದೇ ಹಿನ್ನಲೆಯಲ್ಲಿ ವಿಧಾನಸಭೆಯ ಪ್ರತಿ ಪಕ್ಷದ ನಾಯಕನ ಸ್ಥಾನಕ್ಕೆ ಸಮರ್ಥ ವ್ಯಕ್ತಿಯೊಬ್ಬರ ಹುಡುಕಾಟ ನಡೆದಿದ್ದು ಇಲ್ಲೂ ಜಾತಿ ಸಮೀಕರಣ ಆಧರಿಸಿಯೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಇದೆ. ಈಗಾಗಲೇ ವಿಜಾಪುರದ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸವನಗೌಡ ಯತ್ನಾಳ್ , ಬೆಂಗಳೂರು ರಾಜಾಜಿ ನಗರ ಕ್ಷೇತ್ರದ ಶಾಸಕ ಸುರೇಶ ಕುಮಾರ್ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೆಸರು ಚಾಲ್ತಿಗೆ ಬಂದಿದೆ.
ಹಾಲಿ ಬಿಜೆಪಿ ರಾಜ್ಯ ಘಟಕದ ಫೈರ್ ಬ್ರ್ಯಾಂಡ್ ನಾಯಕ ಎಂದೇ ಗುರುತಿಸಿಕೊಂಡಿರುವ ಸುನಿಲ್ ಕುಮಾರ್ ಸಂಘ ಪರಿವಾರಕ್ಕೆ ಹತ್ತಿರದವರಾಗಿದ್ದಾರೆ.
ಅದಕ್ಕಿಂತ ಹೆಚ್ಚಾಗಿ ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದವರು. ಕೋಟಾ ಶ್ರೀನಿವಾಸ ಪೂಜಾರಿಯವರು ನಿರ್ಗಮಿಸುವ ಪ್ರಸಂಗ ಎದುರಾದರೆ ಆ ಸಮುದಾಯ ಸೂಕ್ತ ಪ್ರಾತನಿಧ್ಯದಿಂದ ವಂಚನೆ ಆಗುವುದನ್ನು ತಪ್ಪಿಸಲು ಸುನಿಲ್ ಅವರನ್ನೇ ವಿಧಾನ ಸಭೆಯ ವಿಪಕ್ಷ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಆಮೂಲಕ ಜಾತಿ ಸಮೀಕರಣ ಕಾಪಾಡುವುದು ಬಿಜೆಪಿ ಹೈಕಮಾಂಡ್ ನ ನಿರ್ಧಾರ ಎಂದೂ ಹೇಳಲಾಗುತ್ತಿದೆ. ಬ್ರಾಹ್ಮಣ ಸಮುದಾಯದ ಸುರೇಶ್ ಕುಮಾರ್ ಆಯ್ಕೆಗೆ ಜಾತಿ ಸಮೀಕರಣ ಅಡ್ಡಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಇತ್ತೀಚಿನ ದಿನಗಳಲ್ಲಿ ಪಾರಂಪರಿಕ ಮೇಲ್ವರ್ಗಳ ಜತೆಗೇ ತನ್ನ ಸಿದ್ಧಾಂತಗಳಿಗೆ ಹೊಂದಿಕೆ ಆಗುವ ಹಿಂದುಳಿದ ಮತ್ತು ದಲಿತ ಸಮುದಾಯದ ಮುಖಂಡರುಗಳಿಗೆ ಹೆಚ್ಚು ಪ್ರಾತನಿಧ್ಯ ನೀಡುವ ಮೂಲಕ ಮೇಲ್ವರ್ಗದ ಪಕ್ಷದ ಎಂಬ ಹಣೆಪಟ್ಟಿಯಿಂದ ಹೊರ ಬರುವ ಪ್ರಯತ್ನ ಮಾಡುತ್ತಿದೆ. ಇನ್ನು ಇನ್ನೊಬ್ಬ ಪ್ರಮುಖ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಆಯ್ಕೆಗೆ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪುವ ಸಾಧ್ಯತೆ ಕಡಿಮೆ. ಜತೆಗೇ ಲಿಂಗಾಯಿತ ಸಮುದಾಯದ ಬಿ.ವೈ. ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿರುವುದರಿಂದ ಮತ್ತೆ ಅದೇ ಸಮುದಾಯಕ್ಕೆ ವಿಪಕ್ಷ ನಾಯಕನ ಸ್ಥಾನ ಕೊಡುವ ಸಾಧ್ಯತೆ ಇಲ್ಲ. ಹೀಗಾಗಿ ಸುನಿಲ್ ಕುಮಾರ್ ಆಯ್ಕೆ ಅನಿವಾರ್ಯ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.
ಸಂಘ ಪರಿವಾರದ ಅಂಗ ಸಂಸ್ಥೆ ಬಜರಂಗ ದಳದಲ್ಲಿದ್ದು ಚಿಕ್ಕಮಗಳೂರಿನ ದತ್ತ ಪೀಠದ ಹೋರಾಟವನ್ನುಮುಂಚೂಣಿಗೆ ತಂದು ನಿಲ್ಲಿಸುವ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತು ಕರಾವಳಿ, ಮಲೆನಾಡು ಭಾಗಗಳಲ್ಲಿ ಬಿಜೆಪಿಗೆ ಭದ್ರ ನೆಲೆ ಕಲ್ಪಿಸುವಲ್ಲಿ ಸುನಿಲ್ ಕುಮಾರ್ ಹೋರಾಟ, ಪರಿಶ್ರಮ ದೊಡ್ಡದು. ಆದರೆ ಅದರ ಯಶಸ್ಸನ್ನು ಮಲೆ ನಾಡಿನ ಅರೆ ಕಾಲಿಕ ಮುಖಂಡರೊಬ್ಬರು ಪಡೆದು ಲಾಭ ಮಾಡಿಕೊಂಡಿದ್ದು ಈಗ ಇತಿಹಾಸ. ಸಂಘಟನೆ ಬೆಳೆಯುವಲ್ಲಿ ಸುನಿಲ್ ಪರಿಶ್ರಮವನ್ನು ಸಂಘ ಪರಿವಾರದ ಹಿರಿಯರೇ ಒಪ್ಪುತ್ತಾರೆ. ಹೀಗಾಗಿ ವಿಪಕ್ಷ ನಾಯಕರ ಬದಲಾವಣೆ ಸನ್ನಿವೇಶ ಎದುರಾದರೆ ಬಿಜೆಪಿಯಲ್ಲಿ ಮಹತ್ವದ ವಿದ್ಯಮಾನಗಳು ನಡೆಯಲಿವೆ. ಇನ್ನು ಒಂದು ವಾರದ ನಂತರ ಸ್ಪಷ್ಟ ಚಿತ್ರಣ ಸಿಕ್ಕಲಿದೆ.

ಲೇಖಕರು- ಯಗಟಿ ಮೋಹನ