ಗಿಡ- ಮರಗಳನ್ನು ಉಳಿಸಿ- ಬೆಳೆಸಿ- ಶಾಸಕ ಬಾಲಚಂದ್ರ ಜಾರಕಿಹೊಳಿ
ಏಕ ಪೇಡ್ ಮಾ ಕೆ ನಾಮ ವನ ಮಹೋತ್ಸವ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ-..
ಅರಣ್ಯ ಉಳಿಯಬೇಕಾದರೆ ಗಿಡ- ಮರಗಳನ್ನು ನೆಟ್ಟು ಅರಣ್ಯವನ್ನು ಬೆಳೆಸಬೇಕೆಂದು ಅರಭಾವಿ ಶಾಸಕ, ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ತಮ್ಮ ತಾಯಿಯ ಸ್ಮರಣಾರ್ಥವಾಗಿ
ನಗರದ ಎನ್ಎಸ್ಎಫ್ ಆವರಣದಲ್ಲಿ “ಏಕ ಪೇಡ್ ಮಾ ಕೆ ನಾಮ” ಅಭಿಯಾನದ ನಿಮಿತ್ತ ವನ ಮಹೋತ್ಸವಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅರಣ್ಯವನ್ನು ಉಳಿಸಿ, ಬೆಳೆಸುವ ಜವಾಬ್ದಾರಿಯು ನಮ್ಮ ಮೇಲಿದೆ ಎಂದು ತಿಳಿಸಿದರು.
ಗಿಡ- ಮರಗಳನ್ನು ಬೆಳೆಸುವುದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದ ಮಳೆಯಾಗಿ ಸಮೃದ್ಧವಾಗಿ ಬೆಳೆಯನ್ನು ತೆಗೆಯಬಹುದು. ಮಳೆಯಾದರೆ ರೈತನ ಮೊಗದಲ್ಲಿ ಸಂತಸ- ಹರ್ಷದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.

ಅರಣ್ಯ ಉಳಿಯಬೇಕಾದರೆ ಮರಗಳನ್ನು ನೆಟ್ಟು ಅರಣ್ಯ ಸಂಪತ್ತನ್ನು ಬೆಳೆಸಬೇಕಾದ ಅಗತ್ಯತೆಯನ್ನು ಅವರು ಪ್ರತಿಪಾದಿಸಿದರು.
ಕೇಂದ್ರ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಮಳೆಯಾಗುವ ತಿಂಗಳಿನ ಮೊದಲ ವಾರದಲ್ಲಿ ತಾಯಿಯ ಹೆಸರಿನಲ್ಲಿ ಒಂದು ಮರವನ್ನು ನೆಡುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಮೂಲಕ ೨೦೨೪- ೨೫ ನೇ ಸಾಲಿನಲ್ಲಿ ನಡೆಸುವ ವನ ಮಹೋತ್ಸವ
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಮ್ಮ ದಿ.ಮಾತೋಶ್ರೀ ಅವರ ಸವಿ- ನೆನಪಿಗಾಗಿ ಗಿಡವನ್ನು ನೆಟ್ಟು ಪ್ರಸಕ್ತ ಸಾಲಿನ ವನ ಮಹೋತ್ಸವ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಸಿದ್ದಪ್ಪ ಹಂಜಿ, ಲಕ್ಷ್ಮಣ ಮುಸಗುಪ್ಪಿ, ಅಶೋಕ ಖಂಡ್ರಟ್ಟಿ, ಪಾಂಡುರಂಗ ದೊಡಮನಿ, ಗುರುನಾಥ ಕಂಕಣವಾಡಿ, ಮುತ್ತೆಪ್ಪ ಕುಳ್ಳೂರ, ಸಾಬಪ್ಪ ಬಂಡ್ರೊಳಿ, ಯಲ್ಲಾಲಿಂಗ ವಾಳದ, ಪ್ರಮೋದ ನುಗ್ಗಾನಟ್ಟಿ, ಸಿದ್ದು ದುರದುಂಡಿ, ಬಿಜೆಪಿ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.