ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ಗೆ ಕ್ಷಣಗಣನೆ ಶುರುವಾಗಿದೆ. ದಕ್ಷಿಣ ಭಾರತದಲ್ಲೇ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ನೀಡಿರುವ ಕರ್ನಾಟಕ, ಮೋದಿ 3ನೇ ಅವಧಿಯ ಮೊದಲ ಬಜೆಟ್‌ನತ್ತ ಆಸೆಗಣ್ಣಿನಿಂದ ನೋಡುತ್ತಿದೆ. ಹಾಗಾದರೆ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಕೇಂದ್ರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಇರುವ ನಿರೀಕ್ಷೆಗಳೇನು? ಇಲ್ಲಿದೆ ವಿವರ.
ಬೆಂಗಳೂರು, ಜುಲೈ 23: ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮೇಲೆ ಕರ್ನಾಟಕ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಕರ್ನಾಟಕದಿಂದ ಲೋಕಸಭೆಗೆ ಆಯ್ಕೆ ಆಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಬಜೆಟ್ ಬಗ್ಗೆ ಜನಸಾಮಾನ್ಯರಿಂದ ಹಿಡಿದು ಉದ್ಯಮಿಗಗಳ ತನಕ, ಅನ್ನದಾತರಿಂದ ವ್ಯಾಪಾರಿಗಳ ತನಕ, ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಂದ ಹಿಡಿದು ರಾಜ್ಯದ ಮೂಲೆ ಮೂಲೆಯಲ್ಲಿ ಸಂಚರಿಸುವ ರೈಲ್ವೇ ಪ್ರಯಾಣಿಕರ ತನಕ ಅಪಾರ ನಿರೀಕ್ಷೆ ಇದೆ.
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ರೈಲು ಯೋಜನೆಗಳಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ.
ರೈಲು ಯೋಜನೆಗಳ ನಿರೀಕ್ಷೆ
ಬೆಂಗಳೂರು ಉಪನಗರ ರೈಲು ಯೋಜನೆಗೆ ವೇಗ ನೀಡಲು ಅಗತ್ಯ ಅನುದಾನ. ಬೆಂಗಳೂರು- ಮೀರಜ್ ಮಾರ್ಗ ವಿದ್ಯುದೀಕರಣದ ನಿರೀಕ್ಷೆ. ಇದೇ ರೀತಿ ರಾಜ್ಯದ ಹಲವು ರೈಲು ಮಾರ್ಗಗಳ ವಿದ್ಯುದೀಕರಣ. ತುಮಕೂರಿನಿಂದ-ಚಿತ್ರದುರ್ಗಕ್ಕೆ ನೇರ ರೈಲು ಸಂಪರ್ಕ ಯೋಜನೆ. ಹುಬ್ಬಳ್ಳಿ-ಅಂಕೋಲಾ, ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ. ಗದಗದಿಂದ ವಾಡಿವರೆಗೆ ಹೊಸ ಮಾರ್ಗ ನಿರ್ಮಾಣ. ರೈಲು ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಕ್ತ ಕ್ರಮ ಮೆಟ್ರೋ ಯೋಜನೆಗೆ ಅನುದಾನ, 3ನೇ ಹಂತದ ಬಗ್ಗೆ ಪ್ರಸ್ತಾಪ? ಬೆಂಗಳೂರು ಮೆಟ್ರೋದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಪ್ರತಿ ಮೆಟ್ರೋ ಕಾಮಗಾರಿ ನಿಗದಿತ ಅವಧಿಗಿಂತ ತಡವಾಗಿ ಮುಕ್ತಾಯಗೊಳ್ಳುತ್ತಿದೆ. ಸದ್ಯ ಸಾಗುತ್ತಿರುವ ಏರ್‌ಪೋರ್ಟ್ ಲೈನ್, ಕಾಳೇನ ಅಗ್ರಹಾರ-ನಾಗವಾರ ಕಾಮಗಾರಿಗೆ ಅನುದಾನದ ಜತೆಗೆ ಮೆಟ್ರೋ ಹಂತ-3ರ ಯೋಜನೆಗೆ 15 ಸಾವಿರ ಕೋಟಿ ರೂಪಾಯಿ ಅನುದಾನದ ಬಗ್ಗೆ ಪ್ರಸ್ತಾಪಿಸುವ ನಿರೀಕ್ಷೆ ಇದೆ.
ಕರ್ನಾಟಕದ ಇತರ ನಿರೀಕ್ಷೆಗಳೇನು? ಮೇಕೆದಾಟು, ಕಳಸಾ, ಎತ್ತಿನಹೊಳೆ ಯೋಜನೆಗಳ ಬಗ್ಗೆ ಪ್ರಸ್ತಾಪ ಆಗುತ್ತಾ, ಕಿಸಾನ್ ನಿಧಿ ಹೆಚ್ಚಳವಾಗುತ್ತಾ? ತೆಂಗು ಅಭಿವೃದ್ಧಿ ಮಂಡಳಿಗೆ ವಿಶೇಷ ಪ್ಯಾಕೇಜ್ ಸಿಗಬಹುದೇ ಎಂಬ ಪ್ರಶ್ನೆಗಳು ಕರ್ನಾಟಕದ ಜನತೆಯ ಮನಸಲ್ಲಿವೆ. ಜತೆಗೆ ಸಿರಿಧಾನ್ಯ ಬಳಕೆಗೆ ಪ್ರೋತ್ಸಾಹ ಸಿಕ್ಕರೆ ಕರ್ನಾಟಕದ ರೈತರಿಗೆ ಬಂಪರ್ ಸಿಗಲಿದೆ. ಇದರ ಜೊತೆಗೆ ಹೊಟೇಲ್ ಉದ್ಯಮಿಗಳಿಗೆ ತೆರಿಗೆ ಹೊರೆ ಇಳಿಸುವ ನಿರೀಕ್ಷೆ ಇದೆ.