ಅಶೋಕ ಹಾರನಹಳ್ಳಿ ಅಧ್ಯಕ್ಷತೆಯಲ್ಲಿ ನಡೆದ ತೀರ್ಮಾನ.
ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ. 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಸಮಾವೇಶ
ಗಾಯತ್ರಿ ಭವನದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನ..
ಬ್ರಾಹ್ಮಣ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹರಿಂದ ಸಂಪೂರ್ಣ ಸಹಕಾರದ ಭರವಸೆ
.
ಬೆಂಗಳೂರು:
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಸ್ಥಾಪನೆಯಾಗಿ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್ ನಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.
ಮಹಾ ಸಭಾ ಕೇಂದ್ರ ಕಚೇರಿ ಬೆಂಗಳೂರಿನ ಗಾಯತ್ರಿ ಭವನದಲ್ಲಿ ಶುಕ್ರವಾರ ಕರೆದಿದ್ದ ಪ್ರಮುಖ ಪದಾಧಿಕಾರಿಗಳು ಹಾಗೂ ಸಮಾಜದ ಹಿರಿಯ ಮುಖಂಡರ ಸಭೆಯಲ್ಲಿ ಅಧ್ಯಕ್ಷ ಅಶೋಕ್ ಹಾರನ ಹಳ್ಳಿ ಈ ನಿರ್ಧಾರ ಪ್ರಕಟಿಸಿದರು.

ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಈ ಸಮಾವೇಶದ ಯಶಸ್ಸಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ ಇರುವುದಾಗಿ ಭರವಸೆ ನೀಡಿದರು. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾರಂಭ ನಡೆಸಲು ಉದ್ದೇಶಿಸಿದ್ದು ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡೂವ ಮೂಲಕ ಸಮಾಜಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದ ಸಾಧಕರನ್ನು ಸನ್ಮಾನಿಸಲು ಉದ್ದೇಶಿಸಲಾಗಿದೆ.
ಇದೊಂದು ಐತಿಹಾಸಿಕ ಸಮಾರಂಭವಾಗಿರಲಿದ್ದು ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಲು ಎಲ್ಲರೂ ನೆರವು ನೀಡಬೇಕೆಂದೂ ಅಶೋಕ್ ಹಾರನಹಳ್ಳಿ ಮನವಿ ಮಾಡಿದರು. ಸಮಾವೇಶದ ಅಗತ್ಯ ಸಿದ್ಧತೆಗಳು, ರೂಪುರೇಷೆಗಳಿಗೆ ಸಂಬಂಧಿಸಿದಂತೆ ಸದ್ಯದಲ್ಲೇ ಇನ್ನೊಂದು ಸಭೆ ಕರೆದು ಚರ್ಚಿಸುವುದಾಗಿ ಅವರು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು, ಪ್ರಮುಖ ಪದಾಧಿಕಾರಿಗಳು ಮಾತನಾಡಿ ಸಮಾವೇಶದ ಯಶಸ್ಸಿಗೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡಿದರು. ಸಮಾವೇಶದ ನೆನಪಿಗಾಗಿ ಒಂದು ಸ್ಭರಣ ಸಂಚಿಕೆ ಹೊರ ತರಲು ನಿರ್ಧರಿಸಲಾಯಿತು.
