ವರ್ಗಾವಣೆ ಸುಲಿಗೆ . ಬೆಳಗಾವಿಯಲ್ಲಿಯೂ ಕೈ ಸುಟ್ಟುಕೊಂಡವರೆಷ್ಟು ಜನ?.
ದುಡ್ಡುಕೊಟ್ಟರೆ ವರ್ಗಾವಣೆ ಇಲ್ಲ ಅಂದಿದ್ದರು. ಆದರೆ ಕೊಟ್ಟ ಮೇಲೂ ಆ ಪೊಲೀಸ್ ಅಧಿಕಾರಿಯನ್ನು ಬೆಂಗಳೂರಿಗೆ ಎತ್ತಾಕಿದರು.
ಹರಾಜಿನಂತೆ ನಡೆದಿದೆಯೇ ವರ್ಗಾವಣೆ ವ್ಯವಹಾರ?.
ಬೆಳಗಾವಿಯಲ್ಲಿ ಬರೀ ಪತ್ರ ಕೊಡೊದಕ್ಕೆ ಒಂದು ರೇಟ್ ಫಿಕ್ಸ್.
ಆ ಒಂದು ಡಿಡಿ ಪೋಸ್ಟ್ ಗೆ ನಡೆದಿತ್ತು ಕೋಟಿ ರೂ ಡೀಲ್..
ಸರ್ಕಾರಿ ಗ್ಯಾರಂಟಿಗೆ ಅನುದಾನವಿಲ್ಲ.ಆದರೆ ವರ್ಗಾವಣೆ ಗ್ಯಾರಂಟಿಗೆ ಅನು’ದಾನ’ ಪಕ್ಕಾ.
ಎಲ್ಲ ಸರ್ಕಾರದಲ್ಲೂ ನಡೆಯುತ್ತಿತ್ತು ವರ್ಗಾವಣೆ ದಂಧೆ..
ಈ ದಂಧೆಗೆ ಬ್ರೆಕ್ ಬೀಳೊದು ಯಾವಾಗ?
`ವರ್ಗಾವಣೆ ದಂಧೆಯ ಕರಾಳ ಮುಖ ಬಯಲು
ಬೆಳಗಾವಿ. ಯಾದಗಿರಿಯಲ್ಲಿ ಸೈಬರ್ ಕ್ರೈಂ ಠಾಣೆಯ ಪಿಎಸ್ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವು ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆಯ ಕರಾಳ ಮುಖವನ್ನು ಬಿಚ್ಚಿಟ್ಟಿದೆ. ಅಷ್ಟೇ ಅಲ್ಲ ಇಲ್ಲಿ ಮೃತ ಪಿಎಸ್ಐ ಪತ್ನಿ ಬರೆದ ಮೂರು ಪುಟಗಳ ಪತ್ರವನ್ನು ಗಮನಿಸಿದರೆ ಈ ದಂಧೆಯ ಸುಲಿಗೆ ಯಾವ ಪ್ರಮಾಣದಲ್ಲಿ ಇದೆ ಎನ್ನುವುದು ಗೊತ್ತಾಗುತ್ತದೆ.
ಇದು ಕೇವಲ ಯಾದಗಿರಿಗೆ ಅಷ್ಟೇ ಸಿಮೀತವಾಗಿಲ್ಲ.ಬದಲಾಗಿ ಇಡೀ ರಾಜ್ಯವ್ಯಾಪಿಯಲ್ಲಿ ಇಂತಹ ಘಟನೆಗಳು ನಡೆದಿವೆ ಎನ್ನುವ ಆತಂಕದ ಮಾತುಗಳು ಕೇಳಿ ಬರುತ್ತಿವೆ. ಇಲ್ಲಿ ಹೇಗಾಗಿದೆ ಎಂದರೆ, ಅನೇಕರು ಹಣ ಕೊಟ್ಟು ವರ್ಗಾವಣೆ ಯಾದವರು ಮತ್ತು ದುಡ್ಡು ಕೊಡದೆ ವರ್ಗವಾದವರು ಸಾಕಷ್ಟು ಜನ ಇದ್ದಾರೆ. ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಇಂತಹ ಘಟನೆಗಳಿಂದ ಮಾನಸಿಕವಾಗಿ ಕುಗ್ಗಿ ಹೋದವರು ಬಹಳಷ್ಟು ಜನ ಇದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಉಳಿದ ಗ್ಯಾರಂಟಿಗಳಿಗಿಂತ ವರ್ಗಾವಣೆ ಗ್ಯಾರಂಟಿ ಬಲು ಜೋರಾಗಿ ಸದ್ದು ಮಾಡುತ್ತಿದೆ.
ಎಲ್ಲರೂ ದುಡ್ಡು ಅನ್ನಲ್ಲ.. ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿ ಜಿಲ್ಲೆಯ ಬಹುತೇಕ ರಾಜಕಾರಣಿಗಳು ವರ್ಗಾವಣೆ ವಿಷಯದಲ್ಲಿ ದುಡ್ಡು ತೆಗೆದುಕೊಳ್ಳುವ ಕೆಲಸ ಮಾಡಲ್ಲ. ಆದರೆ ಅವರ ಹಿಂಬಾಲಕ ಎನಿಸಿಕೊಂಡ ಕೆಲವರು. ವರ್ಗಾವಣೆ ಗ್ಯಾರಂಟಿ ಕೊಟ್ಟು ಅನುದಾನ ಪಡೆದುಕೊಳ್ಳುತ್ತಾರೆ ಎನ್ನುವಮಾತಿದೆ
ಇಲ್ಲಿ ಜಾರಕಿಹೊಳಿ ಕುಟುಂಬ, ಲಕ್ಷ್ಮಣ ಸವದಿ, ಅಭಯ ಪಾಟೀಲ, ಈರಣ್ಣ ಕಡಾಡಿ, ಕವಟಗಿಮಠ ಸೇರಿದಂತೆ ಇನ್ನೂ ಕೆಲವರು ವರ್ಗಾವಣೆ ವಿಷಯದಲ್ಲಿ ದುಡ್ಡಿನ ಬೆನ್ನತ್ತಿ ಹೆಸರು ಕೆಡಿಸಿಕೊಂಡಿಲ್ಲ ಎನ್ನುವುದು ಸ್ಪಷ್ಟ.
ಪಿಎ ಗಳನ್ನು ಇಟ್ಟಿದ್ದಾರೆ.. ಬಹುತೇಕ ಕಡೆಗೆ ಈ ವರ್ಗಾವಣೆ ದಂಧೆಗೆಂದೇ ಕೆಲ ಜನಪ್ರತಿನಿಧಿಗಳು ಖಾಸಗಿ ಪಿಎ ಗಳನ್ನು ಇಟ್ಟುಕೊಂಡಿದ್ದಾರೆ. ಯಾರೇ ವರ್ಗಾವಣೆ ಸಂಬಂಧ ಮಾತುಕತೆಗೆ ಹೋದರೆ ಮೊದಲು ಅವರು ಪಿಎ ಬಳಿ ಹೋಗಬೇಕು. ಅಲ್ಲಿ ಪಿಎಗಳ ಕೈ ಬೆಚ್ಚಗೆ ಮಾಡಿದರೆ ಮುಂದಿನ ಮಾತು ಕತೆ ಆರಂಭವಾಗುತ್ತದೆ. ಇಲ್ಲಿ ಮಾರ್ಕೆಟ್ ದಲ್ಲಿ ಕಾಯಿಪಲ್ಲೆ ಹೇಗೆ ಹರಾಜು ಮಾಡಲಾಗುತ್ತದೆಯೋ ಅದೇ ರೀತಿ ವರ್ಗಾವಣೆ ದಂಧೆಯಲ್ಲೂ ನಡೆಯುತ್ತದೆ ಎನ್ನುವುದು ಬಹುತೇಕರ ಮಾತು.
ಈಗ ಹೇಗಾಗಿದೆ ಎಂದರೆ, ಈ ವಿಷಯದಲ್ಲಿ ಮಾತನಾಡಲು ಹಿಂದೆ ಜವಾಬ್ದಾರಿಯುತ ಜನಪ್ರತಿನಿಧಿಗಳು ಹಿಂಜರಿಕೆ ಮಾಡುತ್ತಿದ್ದರು. ಆದರೆ ಈಗ ಹಾಗಿಲ್ಲ. ಮುಂದೆ ಕುಳ್ಖಿರಿಸಿಕೊಂಡು ಅವನು 65 ಅಂತಾರೆ, ನೀವು ಎಷ್ಟು ಎಂದು ಕೇಳುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದು ನಿಂತಿದೆ. ಗಮನಿಸಬೇಕಾದ ಸಂಗತಿ ಎಂದರೆ, ಇಲ್ಲಿ ಇಸಕೊಂಡವರು, ದುಡ್ಡು ಕೊಟ್ಟು ಕೋಡಂಗಿ ಆದವರು ಯಾರೂ ಬಾಯಿ ಬಿಡಲ್ಲ. ಆದರೂ ಗುಟ್ಟಿನ ಮಾತುಕತೆಗಳು ತೇಲಿ ಬರುತ್ತಲೇ ಇರುತ್ತವೆ.
ಗೃಹ ಸಚಿವರು ಏನಂದ್ರು? ಯಾದಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಅಧಿಕಾರಿಗಳಿಗೆ ತನಿಖೆಗೆ ಸೂಚಿಸಿದ್ದೇನೆ. ಈ ಒಂದು ಪ್ರಕರಣದಲ್ಲಿ ಶಾಸಕರಾಗಲಿ ಬೇರೆ ಯಾರೇ ಭಾಗಿಯಾಗಿದ್ದರೂ ಕೂಡಲೇ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
. ಪಿಎಸ್ಐ ನ್ಯಾಚುರಲ್ ಆಗಿ ಮೃತಪಟ್ಟಿದ್ದಾಗಿ ಸುದ್ದಿ ಬರುತ್ತದೆ. ಪಿಎಸ್ಐ ಸೂಸೈಡ್ ಮಾಡಿಕೊಂಡಿಲ್ಲ, ಡೆತ್ ನೋಟ್ ಬರೆದಿಟ್ಟಿಲ್ಲ. ಅವರನ್ನು ವರ್ಗಾವಣೆ ಮಾಡಿದ್ದಾರೆ ಅನ್ನೋ ಕಾರಣ ಕೊಟ್ಟಿದ್ದಾರೆ. ಇದನ್ನೆಲ್ಲಾ ತನಿಖೆ ಮಾಡಿ ಅಂತ ನಾನು ಸೂಚನೆ ಕೊಟ್ಟಿದ್ದೇನೆ. ತನಿಖಾ ವರದಿ ಬಂದ ಮೇಲೆ ನೋಡೋಣ. ಪಿಎಸ್ಐ ಪರಶುರಾಮ್ ಪತ್ನಿ ಆರೋಪವನ್ನು ಪರಿಗಣಿಸುತ್ತೇನೆ. ಪ್ರಾಥಮಿಕವಾಗಿ ಕೆಲವೊಂದಿಷ್ಟು ಮಾಹಿತಿಯನ್ನು ಕಲೆ ಹಾಕಬೇಕಾಗುತ್ತದೆ. ಪರಿಶೀಲನೆ ಮಾಡಿ ಶ್ರೀಘ್ರದಲ್ಲಿ ಎಫ್ಐಆರ್ ದಾಖಲಿಸುತ್ತಾರೆಂದು ಹೇಳಿದರು.