ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 40 ಲಕ್ಷ ರೂ. ಮೌಲ್ಯದ ಮದ್ಯ ವಶ
ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕಂಟೇನರ್ ನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸೀಜ್ ಮಾಡಿ 40 ಲಕ್ಷಕ್ಕೂ ಅಧಿಕ ಮದ್ಯವನ್ನು ವಶಪಡಿಸಿಕೊಂಡ ಘಟನೆ ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಮಂಗಳವಾರ ನಡೆದಿದೆ.

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಗೋವಾದಿಂದ ಮಹಾರಾಷ್ಟ್ರದ ಕಡೆಗೆ ಹೊರಟಿದ್ದ ಕಂಟೇನರ್ ನಲ್ಲಿ ಅಕ್ರಮ ಮದ್ಯ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದ್ದು, ಕಂಟೇನರ್ ಸಹಿತ ಸುಮಾರು 40 ಲಕ್ಷಕ್ಕೂ ಅಧಿಕ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅಬಕಾರಿ ಆಯುಕ್ತ ಮಂಜುನಾಥ್ ಅವರು, ಮಧ್ಯರಾತ್ರಿ 1 ಗಂಟೆ ವೇಳಗೆ ಗೋವಾದಿಂದ ಮಹಾರಾಷ್ಟ್ರದ ಕಡೇಗೆ ಸಾಗುತ್ತಿದ್ದ ಕಂಟೇನರ್ ಲಾರಿಯನ್ನು ತಡೆದ ಅಬಕಾರಿ ರಕ್ಷಕ ಬಸವರಾಜ ವಾಹನ ತಪಾಸಣೆ ಮಾಡಿದ್ದಾರೆ. ಈ ವೇಳೆ ಚಾಲಕ ಪರಾರಿ ಆಗಿದ್ದು, ಅನುಮಾನಗೊಂಡ ವಾಹನ ತಪಾಸಣೆ ಮಾಡಿದಾಗ ನಕಲಿ ಮದ್ಯ ಇರುವುದು ಗಮನಕ್ಕೆ ಬಂದಿದೆ.
ಕೂಡಲೇ ಹಿರಿಯ ಅಧಿಕಾರಿಗಳು ದಾಳಿ ಮಾಡಿದಾಗ ವಾಹನದಲ್ಲಿ 255 ಬಾಕ್ಸ್ ಗಳ 3060 ಬಾಟಲಿಗಳನ್ನು ಸಾಗಿಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ವಾಹನದ ಮೌಲ್ಯ 42 ಲಕ್ಷ ಹಾಗೂ ಮದ್ಯದ ಮೌಲ್ಯ 40 ಲಕ್ಷಕ್ಕೂ ಅಧಿಕ ಸೇರಿ ಒಟ್ಟು 84 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಕಂಟೇನರ್ ಲಾರಿಯಲ್ಲಿ ಪಾಸ್ಲಿಕ್ ಬಕೆಟ್ ಗಳನ್ನು ಸಾಗಾಟ ಮಾಡುವ ರೀತಿಯಲ್ಲಿ ಜಿಎಸ್ ಟಿ ಬಿಲ್ ಸೃಷ್ಟಿ ಮಾಡಲಾಗಿದ್ದು ಗೊತ್ತಾಗಿದೆ. ಈ ಬಿಲ್ ಮಹಾರಾಷ್ಟ್ರದ ಠಾಣಾದ ವಿಳಾಸ ತೋರಿಸಲಾಗಿದೆ. ಒಟ್ಟಾರೆ, ಸಿನಿಮಯ ರೀತಿಯಲ್ಲಿ ಖದೀಮರು ಮದ್ಯ ಸಾಗಾಟ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿದ್ದಾರೆ.