ಬೆಂಗಳೂರು: ಜನವರಿ 18 ಮತ್ತು 19 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಸುವರ್ಣ ಮಹೋತ್ಸವಕ್ಕೆ ಆಗಮಿಸುವಂತೆ ಕೋರಿ ಆರ್ಟ್ ಆಫ್ ಲಿವಿಂಗ್ ನ ಮುಖ್ಯಸ್ಥ ಶ್ರೀ ರವಿಶಂಕರ ಗುರೂಜಿ ಅವರನ್ನು ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ,ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ನೇತೃತ್ವದ ನಿಯೋಗ ಶುಕ್ರವಾರ ಆಹ್ವಾನ ನೀಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಗುರೂಜಿಯವರು ತಮ್ಮ ಬಾಲ್ಯದ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆದ ಮಹಾಸಭೆಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದನ್ನು ನೆನಪು ಮಾಡಿಕೊಂಡರಲ್ಲದೇ ಮಹಾಸಭೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ರಕ್ತಪಡಿಸಿದರು.
ಇದೇ ಸಂದರ್ಭದಲ್ಲಿಅಧ್ಯಕ್ಷರಾದ ಅಶೋಕ್ ಹಾರನಹಳ್ಳಿಯವರು ಮಹಾಸಭೆ ಸಮುದಾಯದ ಕಲ್ಯಾಣಕ್ಕಾಗಿ ಕೈಗೊಂಡು ನಡೆಸುತ್ತಿರುವ ಹಲವು ಚಟುವಟಿಕೆಗಳು,ಕಾರ್ಯಕ್ರಮಗಳ ವಿವರ ನೀಡಿದರಲ್ಲದೇ ಜನವರಿಯಲ್ಲಿ ನಡೆಯುವ ಸಮ್ಮೇಳನಕ್ಕೆ ಆಗಮಿಸಿ ಆಶೀರ್ವದಿಸುವಂತೆ ಶ್ರೀಗುರೂಜಿಯವರನ್ನು ವಿನಂತಿಸಿದರು.
ನಂತರ ಆರ್ಟ್ ಆಫ್ ಲಿವಿಂಗ್ ನಡೆಸುತ್ತಿರುವ ವೇದ ಆಗಮ ಸಂಸ್ಕೃತ ಮಹಾ ಪಾಠಶಾಲೆಗೆ ಭೇಟಿ ನೀಡಿದ ಅಶೋಕ್ ಹಾರನಹಳ್ಳಿ ಹಾಗೂ ಅಸಗೋಡು ಜಯಸಿಂಹ ಅವರು ಅಲ್ಲಿನ ಚಟುವಟಿಕೆಗಳನ್ನು ವೀಕ್ಷಿಸಿದರು.ಪಾಠ ಶಾಲೆಯ ಮುಖ್ಯಸ್ಥರಾದ ಎಸ್.ಎ.ಮಹೇಶ್ ಶರ್ಮ ಅಲ್ಲಿನ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಪಾಠ ಶಾಲೆಯಲ್ಲಿ 300ಕ್ಕೂ ಹೆಚ್ಚು ಮಕ್ಕಳು ವೇದದ ವಿವಿಧ ಪ್ರಕಾರಗಳನ್ನು ಕಲಿಯುತ್ತಿದ್ದು ರಾಜ್ಯ ಸಂಸ್ಕೃತ ವಿವಿ ಸಹಯೋಗ ದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆಶ್ರಮದ ವತಿಯಿಂದ ಗೋಶಾಲೆ ಕೂಡಾ ನಡೆಯುತ್ತಿದೆ ಎಂದೂ ವಿವರ ನೀಡಿದರು.
ಭೇಟಿಯ ವೇಳೆ ಶ್ರಿ ಶ್ರೀ ಗುರೂಜಿಯವರು ಅಸಗೋಡು ಜಯಸಿಂಹ, ಹಾಗೂ ಅಶೋಕ್ ಹಾರನಹಳ್ಳಿ ಯವರನ್ನು ಶಾಲು ಹೊದಿಸಿ ಸನ್ಮಾನಿಸಿ ಆಶೀರ್ವದಿಸಿದರು.
ಈ ನಿಯೋಗದಲ್ಲಿ ಸಂಚಾಲಕರಾದ ಸುಧಾಕರ ಬಾಬು, ರಾಜೇಂದ್ರ ಪ್ರಸಾದ್, ಅರುಣ್ ಹಿರಿಯಣ್ಣ, ಕಾರ್ತಿಕ್ ಎಸ್. ಬಾಪಟ್, ರವಿಶಂಕರ್ ಹಾಗು ಮಹಾಸಭೆಯ ಸದಸ್ಯರಾದ ಮಧುಸೂದನ, ಮಾದ್ಯಮ ಸಮಿತಿಯ ಮುಖ್ಯಸ್ಥರಾದ ಯಗಟಿ ಮೋಹನ್, ಡಿವಿ.ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.