ಸರ್ವರ ಒಗ್ಗಟ್ಟಿನಿಂದಲೇ ಮೂರು ಕ್ಷೇತ್ರಗಳಲ್ಲಿ ಗೆಲುವು: ಸಚಿವ ಸತೀಶ್ ಜಾರಕಿಹೊಳಿ
ಶಿಗ್ಗಾಂವಿ ಅಭ್ಯರ್ಥಿ ಗೆಲ್ಲಿಸಿದ್ದರಿಂದ ಡಬಲ್ ಪ್ರಮೋಶನ್- ಅಹಿಂದ ಮತಗಳನ್ನು ಒಗ್ಗೂಡಿಸಿದ್ದರಿಂದ ಜಯ
ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳು ಸೇರಿದಂತೆ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂಬ ಕಾರ್ಯಕರ್ತರ ಛಲದಿಂದಾಗಿ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಸಾಧಿಸಿದ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು ಕ್ಷೇತ್ರಗಳ ಗೆಲುವಿಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಕಾರ್ಯಕರ್ತರು ಒಗ್ಗಟ್ಟಾಗಿದ್ದರಿಂದ ನಮ್ಮ ಅಭ್ಯರ್ಥಿಗಳಿಗೆ ಗೆಲುವಾಗಿದೆ ಎಂದು ತಿಳಿಸಿದರು.
ಶಿಗ್ಗಾಂವಿ, ಚನ್ನಪಟ್ಟಣದಲ್ಲಿ ನಾವು ಗೆಲ್ಲಲು ಆಗಲ್ಲ. ಸಂಡೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಾಧ್ಯವಿದೆ ಎಂದು ಸರ್ವೇಗಳಲ್ಲಿ, ಮುಖಂಡರ ಭಾವನೆ ಆಗಿತ್ತು. ಶಿಗ್ಗಾಂವಿಯಲ್ಲಿ ಐದು ಬಾರಿ ಸೋಲಲು ನಾಯಕತ್ವದ ಕೊರತೆ ಇತ್ತು. ಆದರೆ ಸಚಿವ ಶಿವಾನಂದ ಪಾಟೀಲ್, ನಾವು ಸೇರಿದಂತೆ ಅನೇಕರು ಹಿಂದೂ-ಮುಸ್ಲಿಂ ಭಾವನೆಯನ್ನು ಹೊಗಲಾಡಿಸಿ, ಅಹಿಂದ ಮತಗಳನ್ನು ಒಗ್ಗೂಡಿಸಿದ್ದರಿಂದ ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಅನುಕೂಲವಾಯಿತು ಎಂದರು.
ಪ್ರತಿ ಚುನಾವಣೆಯಲ್ಲಿ ಧಾರ್ಮಿಕ ಭಾವನೆಗಳನ್ನು ಇಟ್ಟುಕೊಂಡು ಬಿಜೆಪಿಯವರು ಚುನಾವಣೆ ಗೆಲ್ಲುತ್ತಿದ್ದರು. ಆದರೆ ಈ ಬಾರಿ ನಮ್ಮ ಕಾರ್ಯಕರ್ತರು ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವಾಗಿದೆ. ಚಿಕ್ಕೋಡಿಯಲ್ಲಿ ಗೆದ್ದ ಹಾಗೆ ಶಿಗ್ಗಾಂವಿಯನ್ನು ಗೆದ್ದಿದ್ದೇವೆ. ನಮ್ಮ ಚುನಾವಣೆ ಮಾಡಿದ ಹಾಗೇ ಮತ್ತೊಬ್ಬರ ಚುನಾವಣೆ ಮಾಡಬೇಕು. ಅಂದಾಗ ಮಾತ್ರ ಗೆಲುವು ಸಾಧ್ಯವಿದೆ. ಶಿಗ್ಗಾಂವಿ ಕ್ಷೇತ್ರದ ಉಸ್ತುವಾರಿಯಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದರಿಂದ ನನಗೂ ಡಬಲ್ ಪ್ರಮೋಶನ್ ಸಿಕ್ಕಿದೆ ಎಂದು ಹೇಳಿದರು.
ಇವಿಎಂನಲ್ಲಿ ಅಡ್ಜಸ್ಟ್ಮೆಂಟ್ ಮಾಡ್ತಿದ್ದಾರೆ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಒಕ್ಕೂಟಕ್ಕೆ ಸೋಲಾದ ಬೆನ್ನಲ್ಲೇ ಇವಿಎಂ ಮೇಲೆ ಸಚಿವ ಸತೀಶ್ ಜಾರಕಿಹೊಳಿ ಸಂಶಯ ವ್ಯಕ್ತಪಡಿಸಿದರು.
ಇವಿಎಂ ಮಷೀನ್ ಇರುವವರೆಗೂ ಈ ರೀತಿ ಎಲ್ಲಾ ಆಗುತ್ತದೆ. ಇವಿಎಂ ಬಗ್ಗೆ ಸಾಕಷ್ಟು ಅನುಮಾನ ಇದೆ. ಸಾಕಷ್ಟು ಕಡೆಗಳಲ್ಲಿ ಇವಿಎಂ ಬಗ್ಗೆ ಚರ್ಚೆ ಆಗುತ್ತಿದೆ. ಒಂದು ಕಡೆ ಕೊಡ್ತಾರೆ, ಇನ್ನೊಂದು ಕಡೆ ಕಸಿದುಕೊಳ್ತಾರೆ. ಜಮ್ಮು ನಮಗೆ ಕೊಟ್ಟರೂ, ಹರಿಯಾಣವನ್ನು ಬಿಜೆಪಿಯವರು ತೆಗೆದುಕೊಂಡರು. ಈ ರೀತಿ ಗೀವ್ & ಟೆಕ್ ಪಾಲಿಸಿ ಮಾಡ್ತಿದ್ದಾರೆ. ಅವರಿಗೆ ಬೇಕಾದದ್ದನ್ನು ತೆಗೆದುಕೊಳ್ತಾರೆ, ಬೇಡದ್ದನ್ನ ಬಿಡ್ತಾರೆ. ಇವಿಎಂನಲ್ಲೂ ಅಡ್ಜಸ್ಟ್ಮೆಂಟ್ ಇದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ, ಮುಖಂಡರಾದ ಸಿದ್ದಿಕ ಅಂಕಲಗಿ, ಸೈಯದ್ ಮನ್ಸೂರ್, ರಾಜಾ ಸಲೀಂ, ಅರುಣ ಕಟಾಂಬಳೆ ಇದ್ದರು.