30 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಕೋಟ್ಯಂತರ ವಂಚನೆ ಆರೋಪ
ಮಹಿಳೆಗೆ ಘೇರಾವ್ ಹಾಕಿ ಆಕ್ರೋಶ!
ಬೆಳಗಾವಿ:
ಸುಮಾರು 30 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಕೋಟ್ಯಂತರ ರೂ.ಗಳನ್ನು ವಂಚಿಸಿದ ಮಹಿಳೆಯೋರ್ವಳಿಗೆ ಗ್ರಾಮದ ನೂರಾರು ಮಹಿಳೆಯರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ತಾಲೂಕಿನ ಹಾಳಭಾವಿ ಗ್ರಾಮದಲ್ಲಿ ನಡೆದಿದೆ.

ಹಾಳಭಾವಿ ಗ್ರಾಮದ ಸುರೇಖಾ ಹಳವಿ ಎಂಬುವರ ಮೇಲೆ ಈ ವಂಚನೆ ಆರೋಪ ಬಂದಿದೆ,
ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಮಹಿಳಾ ಸಂಘಗಳನ್ನು ರಚಿಸುವ ಮೂಲಕ ಮಹಿಳೆಯರಿಗೆ ಪಂಗನಾಮ ಹಾಕಿದ್ದಾಳೆ ಎಂದು ಹೇಳಲಾಗಿದೆ,
ಈಕೆ ಸೊಸೈಟಿ, ಫೈನಾನ್ಸ್, ಸಂಘಗಳಲ್ಲಿ 50 ಸಾವಿರ ರೂ. ಸಾಲ ತೆಗೆಸುತ್ತಿದ್ದ ಸುರೇಖಾ ಅದರಲ್ಲಿಯ 25 ಸಾವಿರ ರೂ.ಗಳನ್ನು ತಾನಿಟ್ಟುಕೊಂಡು 25 ಸಾವಿರ ಮಹಿಳೆಯರಿಗೆ ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ನಿಮ್ಮ ಎಲ್ಲ ಸಾಲವನ್ನು ನಾನೇ ಪಾವತಿಸುತ್ತೇನೆಂದು ಹೇಳಿ ನಂಬಿಸಿದ್ದಳು. ಆದರೆ, ಈಗ ಸಂಘ, ಫೈನಾನ್ಸ್ ನವರು ಸಾಲ ತುಂಬುವಂತೆ ದುಂಬಾಲು ಬಿದ್ದಾಗ ವಂಚನೆ ಮಾಡಿರುವುದು ಗೊತ್ತಾಗಿ, ಮಹಿಳೆಯರು ಸುರೇಖಾಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರಿಂದ ಪಡೆದ ಹಣದಲ್ಲಿ ಆಸ್ತಿ ಮಾಡುವ ಜೊತೆಗೆ ಸುರೇಖಾ ಐಷಾರಾಮಿ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸಾಲ ಪಾವತಿಸುವಂತೆ ಈಗ ಸಂಘ, ಸೊಸೈಟಿ, ಫೈನಾನ್ಸ್ನವರು ಮಹಿಳೆಯರ ಮನೆಗೆ ಹೋಗಿ ಕಿರುಕುಳ ನೀಡತೊಡಗಿದಾಗ ಹಾಳಭಾವಿ ಗ್ರಾಮದ ಸುರೇಖಾ ಮನೆಗೆ ನೂರಾರು ಮಹಿಳೆಯರು ಘೇರಾವ್ ಹಾಕಿ, ಸಾಲ ಪಾವತಿಸುವಂತೆ ಮಹಿಳೆಯರ ಪಟ್ಟು ಹಿಡಿದಿದ್ದರು.

ಹಾಳಭಾವಿಗೆ ಕಾಕತಿ ಠಾಣೆ ಪೊಲೀಸರು ಭೇಟಿ, ಜನರ ಮನವೊಲಿಕೆಗೆ ಕಸರತ್ತು ನಡೆಸಿದರೂ ಪ್ರಯೋಜನವಾಗದಿದ್ದರಿಂದ ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ರೋಹನ್ ಜಗದೀಶ್ , ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಅಲ್ಲದೇ, ವಂಚಕಿ ಸುರೇಖಾ ಹಳವಿಯನ್ನು ಕಾಕತಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.