ಬೆಳಗಾವಿ.
ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಚಿವರನ್ನು ಓಲೈಸಲು ಹೋಗಿ ಬೆಳಗಾವಿ ಪೊಲೀಸರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡರಾ?
ಸಹಜವಾಗಿ ಈಗ ಅಂತಹ ಮಾತುಗಳು ಕೇಳಿ ಬರುತ್ತಿವೆ.
ಈಗ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಜೊತೆ ಪೊಲೀಸರು ನಡೆದುಕೊಂಡ ರೀತಿ ಅಕ್ಷಮ್ಯ ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ.
ಪೊಲೀಸರು ರವಿ ವಿರುದ್ಧ ಉಲ್ಲೇಖ ಮಾಡಿದ ಕಲಂನ್ನು ಪರಿಗಣಿಸಿದರೆ ಕೇವಲ ನೋಟೀಸ್ ಕೊಟ್ಟು ವಿಚಾರಣೆಗೆ ಕರೆಯುವಂತಹುದ್ದು.
ಆದರೆ ಇಲ್ಲಿ ಸಭಾಪತಿಯವರ ಅನುಮತಿಯನ್ನೂ ಕೇಳದೆ ಯಾವುದೇ ನೋಟೀಸನ್ಬೂ ನೀಡದೇ ಬಂಧಿಸಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.
ಸಧ್ಯ ಬೆಳಗಾವಿ ಪೊಲೀಸರನ್ನು ಜನ ಸಂಶಯ ದೃಷ್ಟಿಯಿಂದ ನೋಡುವಂತಹ ಪರಿಸ್ಥಿತಿ ಬಂದಿದೆ.
ಇಲ್ಲಿ ಸುವರ್ಣ ಸೌಧಕ್ಕೆ ನುಗ್ಗಿದ್ದಲ್ಲದೆ ವಿ.ಪ ಸದಸ್ಯ ರವಿ ಮೇಲೆ ಹಲ್ಲೆ ಮಾಡಿದವರ ಮೇಲೆ ಇದೇ ಪೊಲೀಸರು ಯಾವುದೇ ರೀತಿಯ ಪ್ರಕರಣ ದಾಖಲಿಸಿಲ್ಲ. ಇದೊಂದೇ ವಿಷಯವನ್ನು ಗಮನಿಸಿದರೆ ಪೊಲೀಸರು ಕಾನೂನನ್ನು ಗಾಳಿಗೆ ತೂರಿ ಕೆಲಸ ಮಾಡಿದ್ದಾರೆ ಎನ್ನುವುದು ಸ್ಪಷ್ಟ.
ಆ ಕರೆ ಯಾರದ್ದು..?
ಇದೆಲ್ಲದರ ನಡುವೆ ಸಿ.ಟಿ.ರವಿ ಅವರನ್ನು ಬಂಧಿಸಿ ಬೆಳಗಿನ ಜಾವದ ವರೆಗೆ ಸುತ್ತಾಡಿಸಿ ಮಾನಸಿಕ, ದೈಹಿಕ ಹಿಂಸೆ ನೀಡುವಂತೆ ಹೇಳಿದ ಆ ದೂರವಾಣಿ ಕರೆ ಯಾವುದು ಎನ್ನುವುದು ಗೊತ್ತಾಗಬೇಕಿದೆ.
ಉಲ್ಲೇಖನೀಯ ಸಂಗತಿ ಎಂದರೆ, ರವಿ ಅವರನ್ನು ಬೆಳಗಾವಿಯಿಂದ ಖಾನಾಪುರ ಕಡೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯದಲ್ಲಿ ಪೊಲೀಸರಿಗೆ ಈ ರೀತಿಯ ಹಠಾತ್ ಬೆಳವಣಿಗೆಗಳು ನಡೆಯುತ್ತವೆ ಎನ್ನುವುದು ಕನಸು ಮನಸ್ಸಿನಲ್ಲಿಯೂ ಇರಲಿಲ್ಲ.
ಹೀಗಾಗಿ ದಾರಿ ಮಧ್ಯದಲ್ಲಿ ರವಿ ಅವರಿಗೆ ತಮ್ಮ ಕಾರು ಮತ್ತು ಕೊಠಡಿಯಲ್ಲಿನ ಬ್ಯಾಗ ತರಿಸಿಕೊಳ್ಳಲು ಹೇಳಿದ್ದರು. ಖಾನಾಪುರದಿಂದಲೇ ಬೆಂಗಳೂರಿಗೆ ತೆರಳುವಂತೆ ಹೇಳಿದ್ದರು. ಅದಕ್ಕೆ ಅವರು ಸಹಮತ ಕೂಡ ವ್ಯಕ್ತಪಡಿಸಿದ್ದರು.
ಆದರೆ ಪೊಲೀಸ್ ವಾಹನದಲ್ಲಿದ್ದ ಅಧಿಕಾರಿಗೆ ಬಂದ ಆ ಒಂದು ಕರೆ ಇಡೀ ಚಿತ್ರಣವನ್ನು ಬದಲಾಯಿತು. ಇಲ್ಲಿ ಪೊಲೀಸರೇ ರವಿ ಅವರ ಮೇಲೆ ಹಲ್ಲೆ ಮಾಡಿದರು ಎನ್ನುವ ಮಾತಿದೆ.
ಮತ್ತೊಂದು ಸಂಗತಿ ಎಂದರೆ ,ಯಾರನ್ನೇ ಅರೆಸ್ಟ್ ಮಾಡಿದಾಗ ಮೊದಲು ಅವರನ್ನು ಮೆಡಿಕಲ್ ಚೆಕ್ ಪ್ ಗೆ ಕರೆದುಕೊಂಡು ಹೋಗಬೇಕು. ಆದರೆ ಇಲ್ಲಿ ಪೊಲೀಸರು ರವಿ ತಲೆಗೆ ರಕ್ತ ಸೋರುತ್ತಿದ್ದರೂ ಕೂಡ ಸುಮಾರು ಮೂರ್ನಾಲ್ಕು ತಾಸುಗಳ ಕಾಲ ಚಿಕಿತ್ಸೆ ಸಹ ಕೊಡಿಸದೇ ಅಮಾನವೀಯವಾಗಿ ವರ್ತಿಸಿದರು ಎನ್ನುವ ಮಾತಿದೆ.
ಜೀಪ್ ಅಡ್ಡಗಟ್ಟಿ ನಿಲ್ಲಿಸಿದರು..!
ಇಲ್ಲಿ ಮಾಧ್ಯಮದವರು ರವಿ ಬಂಧನಕ್ಕೆ ಸಂಬಂಧಿಸಿದಂತೆ ವರದಿಗಾಗಿ ಪೊಲೀಸರ ವಾಹನವನ್ನು ಬೆನ್ನಟ್ಟಿದ್ದರು.
ಆದರೆ ಈ ಮಾಧ್ಯಮದವರ ದಿಕ್ಕು ತಪ್ಪಿಸುವ ಉದ್ದೇಶದಿಂದ ರಸ್ತೆಗೆ ಅಡ್ಡಲಾಗಿ ಪೊಲೀಸ್ ವಾಹನವನ್ನು ನಿಲ್ಲಿಸಿದರು. ಈ ಬಗ್ಗೆ ಪ್ರಶ್ನೆ ಮಾಡಿದಾಗ ಪತ್ರಕರ್ತರ ವಾಹನಕ್ಕೆ ಬಡಿಗೆಯಿಂದ ಹೊಡೆಯುವ ಕೆಲಸ ಮಾಡಿದ್ದು ಹಲವು ಅನುಮಾನಕ್ಕೆ ಕಾರಣವಾಗಿತ್ತು.
ರುದ್ರೇಶ ಪ್ರಕರಣದಲ್ಲೂ ಯಡವಟ್ಟು..!
ಬೆಳಗಾವಿ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರೇಶ ಯಡವಣ್ಣವರ ಪ್ರಕರಣದಲ್ಲೂ ಪೊಲೀಸರು ಯಡವಟ್ಟು ಮಾಡಿಕೊಂಡರು.
ಇಲ್ಲಿ ತಹಶೀಲ್ದಾರ, ಸಚಿವೆ ಹೆಬ್ಬಾಳಕರ ಆಪ್ತ ಸೋಮು ಸೇರಿದಂತೆ ಮೂವರ ವಿರುದ್ಧ FIR ದಾಖಲಾದರೂ ಅರೆಸ್ಟ್ ಮಾಡುವ ಗೋಜಿಗೆ ಹೋಗಲಿಲ್ಲ.
ಮಾನವ ಹಕ್ಕು ಉಲ್ಲಂಘನೆ
ಸಿ.ಟಿ.ರವಿ ಅವರೊಂದಿಗೆ ಪೊಲೀಸರು ನಡೆದುಕೊಂಡ ವರ್ತನೆ ಮಾನವ ಹಕ್ಕುಗಳ ಉಲ್ಲಂಘನೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಈಗ ಅದರ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದೆ. ಆ ರೀತಿ ಆದರೆ ಬೆಳಗಾವಿ ಪೊಲೀಸರಿಗೆ ಅಪಾಯ ಕಟ್ಟಿಟ್ಟ ಬುತ್ತಿ.