ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು, AFE ಶಂಕೆ ವ್ಯಕ್ತಪಡಿಸಿದ ಬಿಮ್ಸ್ ನಿರ್ದೇಶಕ.. ಏನಿದು AFE?
ಬೆಳಗಾವಿ, – ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ. ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ನಿವಾಸಿ 31 ವರ್ಷದ ಅಂಜಲಿ ಪಾಟೀಲ್ ಮೃತ ದುರ್ದೈವಿ. ನಿನ್ನೆ ಸಂಜೆ 4 ಗಂಟೆಗೆ ಬಿಮ್ಸ್ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ ಅಂಜಲಿ ಪಾಟೀಲ್‌ರವರಿಗೆ ರಾತ್ರಿ ಸಿಜರಿನ್ ಮೂಲಕ ಹೆರಿಗೆ ಆಗಿತ್ತು. ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದ ಅಂಜಲಿ ಪಾಟೀಲ್ ಇಂದು ಬೆಳಗ್ಗೆ 4 ಗಂಟೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಅಂಜಲಿ ಪಾಟೀಲ್ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಶವಾಗಾರದ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಬೆಳಗಾವಿ ತಾಲೂಕಿನ ಅಲತಗಾ ಗ್ರಾಮದ ಅಂಜಲಿ ಪಾಟೀಲ್‌ರನ್ನು ನಿಲಜಿ ಗ್ರಾಮದ ನಿಂಗಾಣಿ ಪಾಟೀಲ ಜೊತೆಗೆ ವಿವಾಹ ಮಾಡಿಕೊಡಲಾಗಿತ್ತು. 12 ವರ್ಷಗಳ ಹಿಂದೆ ನಿಂಗಾಣಿ ಜೊತೆಗೆ ಅಂಜಲಿ ವಿವಾಹವಾಗಿತ್ತು.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮೃತ ಬಾಣಂತಿ ಅಂಜಲಿ ಪಾಟೀಲ್ ಸಂಬಂಧಿ ರಾಹುಲ್, ‘ನಿನ್ನೆ ಅಂಜಲಿ ಪಾಟೀಲ್ ನಡೆದುಕೊಂಡು ಬಂದೇ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಇವತ್ತು ಹೆರಿಗೆ ಮಾಡಲ್ಲ ಅಂತಾ ವೈದ್ಯರು ಹೇಳಿದಾಗ ಅವರ ಪತಿ ಮನೆಗೆ ಹೋಗಿದ್ದರು.
ಬಳಿಕ ಅವರ ಪತಿ ಮನೆಯಿಂದ ಬರುವ ಮುಂಚೆಯೇ ಸೀಜರಿನ್ ಮಾಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಪತಿಯ ಬಳಿ ಖಾಲಿ ಪೇಪರ್ ಮೇಲೆ ಸಹಿ ತಗೆದುಕೊಂಡಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಪೇಷಂಟ್ ಕಂಡೀಷನ್ ಕ್ರಿಟಿಕಲ್ ಇದೆ ಅಂತಾ ಹೇಳಿದ್ದಾರೆ. ಬೇರೆ ಆಸ್ಪತ್ರೆಗೆ ಕರೆದೊಯ್ಯುತ್ತೇವೆ ಅಂತಾ ಹೇಳಿದಾಗ ಅವರು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಿಡಲಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವನ್ನಪ್ಪಿದ್ದಾರೆ’ ಎಂದು ಆರೋಪಿಸಿದ್ದಾರೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಬಸವರಾಜ್ ದೌಡಾಯಿಸಿದ್ದು, ಬಾಣಂತಿ ಅಂಜಲಿ ಪಾಟೀಲ್ ಸಾವಿನ ಕುರಿತು ಬಿಮ್ಸ್ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.
ಆಮ್ನಿಯೋಟಿಕ್ ಫ್ಲ್ಯೂಡ್ ಎಂಬಾಲಿಸಮ್‌ನಿಂದ ಸಾವು ಶಂಕೆ ಎಂದ ಬಿಮ್ಸ್ ನಿರ್ದೇಶಕರು
ಬೆಳಗಾವಿ ಬೀಮ್ಸ್ ಆಸ್ಪತ್ರೆಯ ಶವಾಗರಕ್ಕೆ ಭೇಟಿ ನೀಡಿದ ಬಿಮ್ಸ್ ನಿರ್ದೇಶಕ ಡಾ.ಅಶೋಕಕುಮಾರ್ ಶೆಟ್ಟಿ, ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ್ದಾರೆ ಎಂಬ ಕುಟುಂಬಸ್ಥರ ಆರೋಪ ಅಲ್ಲಗಳೆದಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬಿಮ್ಸ್ ನಿರ್ದೇಶಕ ಡಾ.ಅಶೋಕಕುಮಾರ ಶೆಟ್ಟಿ, ’40 ವಾರ ತುಂಬಿದ ಗರ್ಭಿಣಿ ಬಿಮ್ಸ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಹೆರಿಗೆ ತಜ್ಞರು ಪರಿಶೀಲಿಸಿದಾಗ ಹೈ ರಿಸ್ಕ್ ಪ್ರೆಗ್ನೆನ್ಸಿ ಅಂತ ಗೊತ್ತಾಗಿದೆ. ತಕ್ಷಣವೇ ಸಿಜರಿನ್ ಮಾಡಲು ಆಪರೇಷನ್ ಥೇಟರ್‌ಗೆ ಕರೆದೊಯ್ಯಲಾಗಿದೆ. ಆಗ ದಿಢೀರ್ ಅಂಜಲಿ ಪಾಟೀಲ್‌ರವರಿಗೆ ಪಿಟ್ಸ್ (ಮೂರ್ಛೆರೋಗ) ಕಾಣಿಸಿಕೊಂಡು ರಕ್ತದೊತ್ತಡ ಕಡಿಮೆಯಾಗಿದೆ. ಇನ್ನು ಆಮ್ನಿಯೊಟಿಕ್ ಫ್ಲ್ಯೂಡ್ ಓಪನ್ ಆದಾಗ ಸ್ವಲ್ಪ ವಾಸನೆ ಬರುತ್ತಿತ್ತು. ಆಗ ಆಮ್ನಿಯೊಟೆಕ್ ಪ್ಲೂಯಿಡ್ ಎಂಬಾಲೀಸಂ ಆಗಿರಬಹುದು ಎಂದು ಶಂಕಿಸಲಾಗಿದೆ. ಬೆಳಗ್ಗೆ ಅಂಜಲಿ ಪಾಟೀಲ ಸಾವಾಗಿದೆ. ಇದರಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡುಬಂದಿಲ್ಲ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ವರ್ಷಕ್ಕೆ 10 ಸಾವಿರ ಹೆರಿಗೆ ಆಗುತ್ತೆ. ಅದರಲ್ಲಿ ಶೇಕಡ 40 ರಷ್ಟು ಸಿಜರಿನ್ ಆಗುತ್ತವೆ. ಜಿಲ್ಲೆಯ ವಿವಿಧ ಪಿಎಚ್‌ಸಿಗಳಿಂದ ಬಹುತೇಕ ಹೈರಿಸ್ಕ್ ಪೇಸೆಂಟ್‌ಗಳು ಬಿಮ್ಸ್ ಆಸ್ಪತ್ರೆಗೆ ಬರುತ್ತವೆ. ಆಮ್ನಿಯೊಟೆಕ್ ಫ್ಲ್ಯೂಢ್ ಎಂಬಾಲೀಸಮ ಕಂಡು ಬಂದರೆ ಅದು ಯಾರ ಕೈಯಲ್ಲೂ ಇರಲ್ಲ’ ಎಂದಿದ್ದಾರೆ.
ಬಿಮ್ಸ್ ಶವಾಗಾರದ ಎದುರು ಪ್ರತಿಭಟನೆ
ಬಿಮ್ಸ್ ಆಸ್ಪತ್ರೆಯ ಶವಾಗಾರದ ಎದುರು ನಿಲಜಿ ಗ್ರಾಮಸ್ಥರು ಹಾಗೂ ಮೃತ ಬಾಣಂತಿ ಅಂಜಲಿ ಪಾಟೀಲ್ ಸಂಬಂಧಿಕರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಕುಟುಂಬಸ್ಥರನ್ನು ಕೇಳದೇ ಸೀಜರಿನ್ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.