Headlines

ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ: ಸಚಿವ ಜಾರಕಿಹೊಳಿ

ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ಐದು ವರ್ಷಗಳಲ್ಲಿ ಯಮಕನಮರಡಿ ಮತ ಕ್ಷೇತ್ರದಲ್ಲಿ ಸುಮಾರು 250 ಸರ್ಕಾರಿ ಶಾಲೆಯ ನೂತನ ಕಟ್ಟಡಗಳನ್ನು ಕಟ್ಟಬೇಕೆಂದು ನಿರ್ಧರಿಸಿದ್ದು, ಈಗಾಗಲೇ ಹುಕ್ಕೇರಿ ತಾಲೂಕಿನ ಗ್ರಾಮದಲ್ಲಿ 50 ಕಟ್ಟಡಗಳನ್ನು ಕಟ್ಟಿದ್ದೇವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಬೆಳಗಾವಿ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಎರಡನೇ ಬಾರಿ ರಾಜ್ಯಾಧ್ಯಾಕ್ಷರಾಗಿ ಆಯ್ಕೆಯಾದ ಸಿ.ಎಸ್. ಷಡಾಕ್ಷರಿ ರವರ ಸನ್ಮಾನ ಸಮಾರಂಭ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೆಳಗಾವಿ ತಾಲೂಕಿನ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಗುರುಸ್ವಂದನ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ನಮ್ಮ ಇಲಾಖೆಯಿಂದ 10 ರಿಂದ15 ಶಾಲಾ ಕಟ್ಟಡಗಳನ್ನು ನಿರ್ಮಿಸಲು ಅನುದಾನ ಒದಗಿಸಲಾಗಿದೆ. ಹೀಗಾಗಿ ನಿಮ್ಮ ಸಂಘಟನೆ ಮೂಲಕ ಸರ್ಕಾರಕ್ಕೆ ಸಲಹೆ, ಸೂಚನೆಗಳನ್ನು ನೀಡಿದರೆ, ಬಜೆಟ್ ನಲ್ಲಿ ಹಣ ಒದಗಿಸಲು ಸರ್ಕಾರಕ್ಕೆ ಅನುಕೂಲವಾಗುತ್ತದೆ ಎಂದರು.

ಶಿಕ್ಷಣ, ಆರೋಗ್ಯಕ್ಕೆ ಸರ್ಕಾರ ಸೇರಿದಂತೆ ಸರ್ವರೂ ಆದ್ಯತೆ ನೀಡಬೇಕಿದೆ. ವಿದ್ಯಾವಂತ ಸಮಾಜ ನಿರ್ಮಾಣ ಆಗಬೇಕೆಂದರೆ ಶಿಕ್ಷಕರ ಪಾತ್ರ ಮಹತ್ವದು ಎಂದ ಸಚಿವರು, ಸಾಧಕಿ ಶಿಕ್ಷಕಿಯರಿಗೆ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಹೆಸರಿನಲ್ಲಿ ಪ್ರಶಸ್ತಿ ನೀಡುವಂತೆ ಸಲಹೆ ನೀಡಿದರು.

ಕರ್ನಾಟಕದ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಎರಡನೇ ಬಾರಿ ರಾಜ್ಯಾಧ್ಯಾಕ್ಷರಾಗಿ ಆಯ್ಕೆಯಾದ ಸಿ.ಎಸ್. ಷಡಕ್ಷರಿ ಅವರನ್ನು ಇಂದು ಬೆಳಗಾವಿಯಲ್ಲಿ ಸತ್ಕರಿಸುತ್ತಿರುವುದು ಸಂತೋಷ ತಂದಿದೆ. ಇನ್ನು ಚಿಕ್ಕೋಡಿಯಲ್ಲಿ ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ ಈಗಾಗಲೇ ನಮ್ಮ ಇಲಾಖೆಯಿಂದ 1 ಕೋಟಿ 50 ಲಕ್ಷ ರೂಪಾಯಿ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನು ಎರಡು ಕೋಟಿ ರೂ. ನೀಡುವುದಾಗಿ ಇದೇ ವೇಳೆ ಭರವಸೆ ನೀಡಿದರು.

ಎರಡನೇ ಬಾರಿಗೆ ನೌಕರರ ಸಂಘದ ರಾಜ್ಯಾಧ್ಯಾಕ್ಷರಾಗಿ ಆಯ್ಕೆಯಾದ ಸಿ.ಎಸ್. ಷಡಕ್ಷರಿ ಅವರು ನಿಮ್ಮ ಪರವಾಗಿ ಒಳ್ಳೆಯ ಕೆಲಸ ಮಾಡಲೆಂದು ಹರಿಸುತ್ತೇನೆಂದು ತಿಳಿಸಿದ ಸಚಿವರು, ಸಿ.ಎಸ್. ಷಡಕ್ಷರಿ ಅವರ ಬೇಡಿಕೆಯಂತೆ ಬೆಂಗಳೂರಿನಲ್ಲಿ ಸ್ಥಳ ಒದಗಿಸಿದರೆ ಲೋಕೋಪಯೋಗಿ ಇಲಾಖೆಯಿಂದ ನೌಕರರ ಸಂಘಕ್ಕೆ ಕಟ್ಟಡ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದರು.

ಸರ್ಕಾರಿ ನೌಕರರು ರಾಜಕೀಯಕ್ಕೆ ಬರಲಿ, ವಿದ್ಯಾವಂತರು, ಸಮಾಜದ ಕಳಕಳಿ ಇದ್ದವರು, ಬುದ್ದ, ಬವಸ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ಪಾಲಿಸುವವರು ರಾಜಕೀಯಕ್ಕೆ ಬಂದರೆ ರಾಜ್ಯ, ದೇಶ ಪ್ರಯತಿಯತ್ತ ಸಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಇದೇ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಬೆಳಗಾವಿ, ಬೆಳಗಾವಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘ, ಗುರುಸ್ಪಂದನ ಆಡಳಿತ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಎರಡನೇ ಬಾರಿ ರಾಜ್ಯಾಧ್ಯಾಕ್ಷರಾಗಿ ಆಯ್ಕೆಯಾದ ಸಿ.ಎಸ್. ಷಡಾಕ್ಷರಿ ಅವರಿಗೆ ಸನ್ಮಾನ, ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೆಳಗಾವಿ ತಾಲೂಕಿನ 54 ಶಿಕ್ಷಕಿಯರಿಗೆ ಗುರುಸ್ವಂದನ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರಧಾನ ಮಾಡಿ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಪ್ ( ರಾಜು) ಸೇಠ್, ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ರಾಯವ್ವಗೋಳ, ಬೆಳಗಾವಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಲ್. ಎಸ್. ಹಿರೇಮಠ, ಗಿರಿಗೌಡ ಹೆಚ್., ಮಲ್ಲಿಕಾರ್ಜುನ ಬಳ್ಳಾರಿ, ಎಸ್. ಬಸವರಾಜು, ಎಸ್.ಪಿ. ದಾಸಪ್ಪನವರ, ರವಿ ಭಜಂತ್ರಿ, ಬಾಬಾ ಸಾಹೇಬ್ ಕುಂಬಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!