Headlines

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತು ಚರ್ಚಿಸಲು ಪ್ರತ್ಯೇಕ ಅಧಿವೇಶನ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತು ಚರ್ಚಿಸಲು ಪ್ರತ್ಯೇಕ ಅಧಿವೇಶನ ಕರೆದು ಚರ್ಚಿಸುವುದು ಸೂಕ್ತ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ:

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2015ರ ವರದಿ ಕುರಿತಂತೆ ಚರ್ಚಿಸಲು ಪ್ರತ್ಯೇಕ ವಿಧಾನಮಂಡಲ ಅಧಿವೇಶನ ಕರೆದು ಚರ್ಚಿಸುವುದು ಸೂಕ್ತ. ಈ ವರದಿ ಕುರಿತಂತೆ ಮುಕ್ತವಾಗಿ ಚರ್ಚಿಸಲು ಅವಕಾಶ ನೀಡಿದರೆ ಒಳ್ಳೆಯದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಯ ಅಂಕಿ ಸಂಖ್ಯೆ, ಅಧ್ಯಯನದ ಬಗ್ಗೆ ಅನುಮಾನ, ಆರೋಪವಿದ್ದರೆ ಸದನದಲ್ಲೇ ಚರ್ಚಿಸಲಿ, ಈ ವಿಚಾರವಾಗಿ ಒಂದು ಬಾರಿ ಸಮಗ್ರವಾಗಿ ಚರ್ಚೆಯಾದರೆ ಯಾರಿಗೂ ಅನುಮಾನ ಉಳಿಯುವುದಿಲ್ಲ, ಈ ಕುರಿತು ರಾಜ್ಯದ ಜನತೆಗೂ ಗೊತ್ತಾಗಲಿ ಎಂದು ತಿಳಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್‌ ಒಕ್ಕಲಿಗ ಶಾಸಕರ ಸಭೆ ನಡೆಸಿರುವ ಕುರಿತು ಪ್ರತಿಕ್ರಿಯೇ ನೀಡಿ, ಡಿಸಿಎಂ ಡಿ.ಕೆ. ಶಿವಕುಮಾರ್‌ ಒಕ್ಕಲಿಗ ಸಮಾಜದ ನಾಯಕರು. ಹೀಗಾಗಿ ಸಭೆ ನಡೆಸಿ ವರದಿ ಕುರಿತು ಚರ್ಚಿಸಿದರೆ ತಪ್ಪೇನೆಂದು ಪ್ರಶ್ನಿಸಿದರು.

ಬಿಜೆಪಿ, ಜೆಡಿಎಸ್‌ ಜನಾಕ್ರೋಶ ಯಾತ್ರೆ ಬಗ್ಗೆ ಮಾತನಾಡಿದ ಸಚಿವರು, ಪೆಟ್ರೋಲ್‌, ಡಿಸೇಲ್‌, ಗ್ಯಾಸ್‌ ಸೇರಿದಂತೆ ಅನೇಕ ವಸ್ತುಗಳ ಬೆಲೆಗಳನ್ನು ಕೇಂದ್ರ ಸರ್ಕಾರವೇ ಏರಿಕೆ ಮಾಡಿದೆ. ಹೀಗಿದ್ದಾಗ ನಮ್ಮ ಸರ್ಕಾರದ ಬಗ್ಗೆ ಜನಾಕ್ರೋಶ ಯಾತ್ರೆ ಮಾಡುತ್ತಿರುವ ಬಿಜೆಪಿಯವರ ನಿಲುವು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಸಚಿವ ಸತೀಶ್‌ ಜಾರಕಿಹೊಳಿ, ಬಿಜೆಪಿಯವರು ಧರಣಿ ಮಾಡುವುದಿದ್ದರೆ ಕೇಂದ್ರ ಸರ್ಕಾರದ ವಿರುದ್ಧವೂ ಪ್ರತಿಭಟಿಸಲಿ ಎಂದು ವ್ಯಂಗ್ಯವಾಡಿದರು.

ಎಲಿವೇಟೆಡ್ ಕಾರಿಡಾರ್, ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ, ನೀರಾವರಿ ಸಮಸ್ಯೆಗಳು, ಹಿಡಕಲ್‌ ಡ್ಯಾಮ್‌ ನಲ್ಲಿ ಕುಡಿಯುವ ನೀರು ಸಂಗ್ರಹಣೆ, ಅರಣ್ಯ ಇಲಾಖೆಯ ಕೆಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾಗಿ ತಿಳಿಸಿದ ಸಚಿವರು, ಕುಡಿಯುವ ನೀರಿಗಾಗಿ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವಂತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್‌ಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.ಈ ಬಗ್ಗೆ ಶೀಘ್ರವೇ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!