33.11 ಕೋಟಿ ಲಾಭ, 6087 ಕೋಟಿ ಠೇವು, ರೈತರಿಗೆ ಶೇ. 109 ಸಾಧನೆ!
ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಗ್ರಾಮೀಣ ಆರ್ಥಿಕತೆಗೆ ನವ ಉತ್ಸಾಹ
ಬೆಳಗಾವಿ:
ಶತಮಾನೋತ್ಸವದ ದ್ವಾರಕ್ಕೆ ಕಾಲಿಡುತ್ತಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಈ ಆರ್ಥಿಕ ವರ್ಷದಲ್ಲಿ 33.11 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕಿನ ಠೇವು ಮೊತ್ತ 6087 ಕೋಟಿ ರೂ. ತಲುಪಿದೆ. ಬ್ಯಾಂಕಿನ ಆಡಳಿತ ಮಂಡಳಿ ರೈತರ ನೈಜ ಅವಶ್ಯಕತೆಗಳನ್ನು ಗುರುತಿಸಿ ಯೋಜಿತವಾಗಿ ಸಾಗುತ್ತಿರುವ ಪರಿಣಾಮ, ಪ್ರತಿ ವರ್ಷ ಭರ್ಜರಿ ಸಾಧನೆ ಮಾಡುತ್ತಿದೆ.

ಬ್ಯಾಂಕಿನ ಮಾರ್ಗದರ್ಶಕರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಈ ಸಾಧನೆಯಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಪ್ಪಾಸಾಹೇಬ ಕುಲಹೋಡೆ ಹೇಳಿದರು.
ಮಧ್ಯಾವಧಿ ಸಾಲದ ವ್ಯಾಪ್ತಿ ವಿಸ್ತಾರ:
ಕೃಷಿ ಯಂತ್ರೋಪಕರಣ, ಟ್ರ್ಯಾಕ್ಟರ್, ಪಂಪ್‌ಸೆಟ್, ಪೈಪ್‌ಲೈನ್ ಖರೀದಿಗೆ ಶೇ.3 ಬಡ್ಡಿ ದರದಲ್ಲಿ 15 ಲಕ್ಷವರೆಗೆ ಸಾಲ ನೀಡಲಾಗುತ್ತಿದೆ. ಈ ಮೂಲಕ 2014 ರೈತರಿಗೆ 161.48 ಕೋಟಿ, ಪೈಪ್‌ಲೈನ್‌ಗೆ 378 ರೈತರಿಗೆ 1790 ಕೋಟಿ, ಹೈನುಗಾರಿಕೆಗೆ 609 ರೈತರಿಗೆ 3.64 ಕೋಟಿ ರೂ. ಸಾಲ ವಿತರಿಸಲಾಗಿದೆ. ಶೇ.99.78ರಷ್ಟು ಸಾಲ ವಸೂಲಾತಿ ಶ್ರೇಷ್ಠತೆ ಸಾಧಿಸಿದೆ.

ಬ್ಯಾಂಕಿನ ಗಟ್ಟಿಯಾದ ಸ್ಥಿರತೆ:
ಬ್ಯಾಂಕಿನ ದುಡಿಯುವ ಬಂಡವಾಳ 8593 ಕೋಟಿ ರೂ. ತಲುಪಿದ್ದು, ಶೇ.8.84ರಷ್ಟು ವರ್ಷಾಂತರ ವೃದ್ಧಿ ಕಂಡಿದೆ. ಈ ವರ್ಷ ಠೇವುಗಳಲ್ಲಿ 290 ಕೋಟಿ ರೂ. ಹೆಚ್ಚಳವಾಗಿದೆ. ಶೇ.2.07ರಷ್ಟು ಎನ್‌ಪಿಎಯನ್ನು ಉಳಿಸಿಕೊಂಡು ಬ್ಯಾಂಕು ವಿತರಣಾ ಸಾಮರ್ಥ್ಯದೊಂದಿಗೆ ವಿಶ್ವಾಸಾರ್ಹತೆ ಕಾಪಿಟ್ಟಿದೆ.
ರೈತರಿಗೆ ಶೇ.109ರಷ್ಟು ಬೆಳೆ ಸಾಲ ವಿತರಣೆಯ ಸಾಧನೆ:
ಬಿಡಿಸಿಸಿ ಬ್ಯಾಂಕ್ ಈ ವರ್ಷ 4,88,379 ರೈತ ಸದಸ್ಯರಿಗೆ 3475.66 ಕೋಟಿ ರೂ. ಅಲ್ಪಾವಧಿ ಬೆಳೆಸಾಲ ವಿತರಿಸಿದ್ದು, ನಿರ್ಧರಿಸಿದ್ದ ಗುರಿಗೆ ಹಿನ್ನಡೆ ಇಲ್ಲದೆ ಶೇ.109.47ರಷ್ಟು ಸಾಧನೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 19,604 ಹೊಸ ರೈತ ಸದಸ್ಯರಿಗೆ ಸಾಲ ವಿತರಿಸಿ 415.24 ಕೋಟಿ ರೂ. ಹೆಚ್ಚುವರಿ ಬೆಳೆಸಾಲ ನೀಡಲಾಗಿದೆ.
ಸಕ್ಕರೆ ಕಾರ್ಖಾನೆಗಳ ಸಾಲ ವಿತರಣೆಯ ಯಶಸ್ಸು:
ಬ್ಯಾಂಕು ಒಟ್ಟು 1486.96 ಕೋಟಿ ರೂ.ವನ್ನು 23 ಸಕ್ಕರೆ ಕಾರ್ಖಾನೆಗಳಿಗೆ ವಿತರಿಸಿದ್ದು, ಬಡ್ಡಿ ಮತ್ತು ಅಸಲು ಸಂಪೂರ್ಣವಾಗಿ ವಸೂಲಿ ಮಾಡಿದೆ. ಯಾವುದೇ ಕಾರ್ಖಾನೆಯ ಬಾಕಿ ಉಳಿಸಿಲ್ಲ.
ಶತಮಾನೋತ್ಸವ ಸಂಭ್ರಮ ಮತ್ತು ಭವಿಷ್ಯದ ಪ್ಲಾನ್:
ಬಿಡಿಸಿಸಿ ಶತಮಾನೋತ್ಸವದ ಅಂಗವಾಗಿ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಕೇಂದ್ರ ಮತ್ತು ರಾಜ್ಯ ನಾಯಕರ ಉಪಸ್ಥಿತಿಯಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ. ಹೊಸ ಶಾಖೆಗಳನ್ನು ಆರಂಭಿಸುವ ಯೋಜನೆಗೆ ಅನುಮತಿ ದೊರೆತಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಬ್ಯಾಂಕಿಂಗ್ ವ್ಯಾಪ್ತಿ ವಿಸ್ತರಿಸಲಾಗುತ್ತಿದೆ.
ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದ ಪ್ರಭಾವ:
“ಬ್ಯಾಂಕ್‌ನಲ್ಲಿ ರಾಜಕೀಯಕ್ಕಿಂತ ರೈತರ ಹಿತವೇ ಮುಖ್ಯ. ನಾವು ನಿರಂತರ ಬೆಳವಣಿಗೆಗೆ ಬದ್ಧರಿದ್ದೇವೆ. ಅಕ್ಟೋಬರ್‌ನಲ್ಲಿ ನಮ್ಮವರೇ ಮತ್ತೆ ಅಧ್ಯಕ್ಷರು-ಉಪಾಧ್ಯಕ್ಷರಾಗುತ್ತಾರೆ,” ಎಂದು ಜಾರಕಿಹೊಳಿ ಹೇಳಿದ್ದಾರೆ.
ಬ್ಯಾಂಕಿನ ನಿರ್ದೇಶಕರಾದ ಸುಭಾಷ ಢವಳೇಶ್ವರ, ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡಗೌಡರ, ಅರವಿಂದ ಪಾಟೀಲ, ಶ್ರೀಕಾಂತ ಢವಣ,ಶಿವಾನಂದ ಡೋಣಿ,ರಾಜೇಂದ್ರ ಅಂಕಲಗಿ, ಪಂಚನಗೌಡ ದ್ಯಾಮನಗೌಡ್ರ, ಸಂಜು ಅವಕ್ಕನವರ, ನೀಲಕಂಠ ಕಪ್ಪಲಗುದ್ದಿ, ಕೃಷ್ಣಾ ಅನಗೋಳಕರ, ಗಜಾನನ ಕಳ್ಳಿ , ಪ್ರವೀಣ ಘಾಳಿ, ಶಶಿಕಾಂತ ಹಾದಿಮನಿ ಮತ್ತು ಸುರೇಶ ಅಳಗುಂಡಿ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು,
ಶೇಖರಣಾ ಸಂಖ್ಯಾಂಶಗಳು (31.03.2025)
ಶೇರು ಬಂಡವಾಳ: 303.1 ಕೋಟಿ
ಠೇವಣಿಗಳು: 6087 ಕೋಟಿ
ಲಾಭ: 33.11 ಕೋಟಿ (8.31% ಏರಿಕೆ)
ಎನ್.ಪಿ.ಎ ಪ್ರಮಾಣ: ಶೇಕಡಾ 2.07 (ಗ್ರಾಸ), ನಿವ್ವಳ ಶೂನ್ಯ