
ಜಗಜ್ಯೋತಿ ಬಸವೇಶ್ವರ ಉತ್ಸವ ಮೆರವಣಿಗೆಯ ಶ್ರದ್ಧಾ ಶಕ್ತಿ ಪ್ರದರ್ಶನ
E belagavi spl:
ಬೆಳಗಾವಿ: ತತ್ವ, ಭಕ್ತಿ, ಶ್ರದ್ಧಾ, ಹಾಗೂ ಸಂಸ್ಕೃತಿಯ ವೈಭವಭರಿತ ಜಗಜ್ಯೋತಿ ಬಸವೇಶ್ವರ ಜಯಂತಿಯ ಅದ್ದೂರಿ ಮೆರವಣಿಗೆಗೆ ಭಾನುವಾರ ಬೆಳಗಾವಿ ನಗರ ಸಾಕ್ಷಿಯಾಯಿತು.

ಜಗಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ನಡೆದ ಶೋಭಾ ಮೆರವಣಿಗೆಯು ಬಸವ ತತ್ತ್ವದ ಪ್ರತಿಧ್ವನಿಯಾಗಿ, ಭಕ್ತಿಯ ಜವಾಬ್ದಾರಿಯಾಗಿ, ಸಮಾಜದ ಒಗ್ಗಟ್ಟಿನ ಸಂಕೇತವಾಗಿ ಮೈಮೇಲಿಟ್ಟಿತ್ತು.


ಮೆರವಣಿಗೆ, ನಗರದ ಕೇಂದ್ರವಾದ ಚೆನ್ನಮ್ಮ ವೃತ್ತದಲ್ಲಿ ಹರಗುರು ಚರಮೂರ್ತಿಗಳು ಹಾಗೂ ಲಿಂಗಾಯತ ಮುಖಂಡರ ಸಮೂಹದೊಂದಿಗೆ ಶ್ರದ್ಧಾ ಸಂಭ್ರಮದ ವಾತಾವರಣದಲ್ಲಿ ಚಾಲನೆ ನೀಡಲಾಯಿತು.

. ಬಸವಣ್ಣನವರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಭಕ್ತಸಾಗರ ಮೊಳಗಿತು.
ವಚನದ ನಾದ – ಶರಣ ಸಂಸ್ಕೃತಿಯ ರೂಪಕ:
ಬಸವ ವಚನಗಳ ಗಾನ, ಡೊಳ್ಳು-ತಮಟೆಗಳ ಸದ್ದು, ಡಿಜೆ ನಾದದಲ್ಲಿ ತೇಲಿದ ನೃತ್ಯತಾಳಗಳು, ಅನುಭವ ಮಂಟಪದ ಶರಣರು, ಅಕ್ಕಮಹಾದೇವಿಯ ಬಿಂಬ, ಮಕ್ಕಳ ಘೋಷವಾಕ್ಯಗಳು “ಜೈ ಬಸವೇಶ್ವರ!” ಎಂಬ ಘನ ನಾದದೊಂದಿಗೆ ಗಗನ ಮುಟ್ಟಿದವು. ಪ್ರತಿಯೊಂದು ವಾಹನವೂ ಒಂದು ಸಂದೇಶ – ಸಮತೆಯ ಶ್ರದ್ಧೆ, ಶ್ರಮದ ಶಕ್ತಿ, ಸತ್ಯದ ಮಾರ್ಗವಾಗಿತ್ತು.

ಸಮುದಾಯದ ಒಗ್ಗಟ್ಟಿಗೆ ಪ್ರತೀಕ:
20ಕ್ಕೂ ಹೆಚ್ಚು ಮಠಾಧೀಶರು, 15ಕ್ಕೂ ಹೆಚ್ಚು ಸಂಘಟನೆಗಳು, ಸಾವಿರಾರು ಭಕ್ತರು – ಎಲ್ಲರೂ ಒಂದೇ ಪಂಕ್ತಿಯಲ್ಲಿ. ಲಿಂಗಾಯತ ಸಮುದಾಯದಲ್ಲಿ ನಡೆಯುತ್ತಿರುವ ಒಳಪಂಗಡಗಳ ಚರ್ಚೆಗಳ ನಡುವೆಯೂ, ಈ ಮೆರವಣಿಗೆಯಲ್ಲಿಯ ಒಗ್ಗಟ್ಟು ಪ್ರದರ್ಶಿಸಿದರು


ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದ ಜಗದೀಶ ಶೆಟ್ಟರ್, ಮಾಜಿ ಸಂಸದೆ ಮಂಗಳಾ ಅಂಗಡಿ, ಶಾಸಕರಾದ ಅಭಯ ಪಾಟೀಲ, ಆಸೀಫ್ ಸೇಠ್, ಪಾಲಿಕೆ ಉಪಮೇಯರ್ ವಾಣಿ ಜೋಶಿ, ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಅನಿಲ ಬೆನಕೆ, ಬಾಬಾಸಾಹೇಬ್ ಪಾಟೀಲ, ದುರ್ಯೋಧನ ಐಹೊಳೆ, ಗಣೇಶ ಹುಕ್ಕೇರಿ, ಎಂ. ಬಿ.ಜಿರಲಿ. ಶಙಕರಗೌಡ ಪಾಟೀಲ ಸೇರಿದಂತೆ ಅನೇಕ ಮಾಜಿ ಶಾಸಕರು, ಸ್ಥಳೀಯ ನಾಯಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಕಾಕತಿವೇಸ್, ಖಡೇಬಜಾರ್, ಮಾರುತಿ ಗಲ್ಲಿಗಳಿಂದ ಸಾಗಿ, ಆರ್ ಎಲ್ಎಸ್ ಕಾಲೇಜು ಮೈದಾನದಲ್ಲಿ ಕೊನೆಗೊಂಡಿತು.