ಶಿಕ್ಷಣ, ವೈದ್ಯಕೀಯ ಕ್ಷೇತ್ರ ಅಷ್ಟೆ ಅಲ್ಲ ಚಿತ್ರೋದ್ಯಮದಲ್ಲೂ ಸೈ ಎನಿಸಿಕೊಂಡ ಡಾ.ಕೋರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪುಟ್ಟ ಹಳ್ಳಿ ಅಂಕಲಿ. ಮರಾಠಿ ಭಾಷೆಯ ಪ್ರಭಾವದ ನಡುವೆ ಕನ್ನಡದ ದೀಪವನ್ನು ಬೆಳಗಿದ ಒಂದು ಚಿತ್ರಮಂದಿರದ ಕಥೆ ಇದು.
1975 ರಲ್ಲಿ ಡಾ. ಪ್ರಭಾಕರ ಕೋರೆ ರೂಪಿಸಿದ ‘ಮಯೂರ ಥಿಯೇಟರ್’ ಈಗ ಸಾವಿರಾರು ಮನಸ್ಸುಗಳ ಸೃಜನಾತ್ಮಕ ತಾಣವಾಗಿ, ಭಾಷಾ ಸೌಹಾರ್ದತೆಯ ಪ್ರತೀಕವಾಗಿ 50 ವರ್ಷಗಳ ಇತಿಹಾಸವನ್ನು ನಿರ್ಮಿಸಿದೆ.
ಕನ್ನಡ-ಮರಾಠಿ ಹೃದಯಗಳನ್ನು ಒಂದುಗೂಡಿಸಿದ ಸಿನೆಮಾ ಮಂದಿರ
“ಚಿತ್ರಮಂದಿರ ಕೇವಲ ಪರದೆಯ ಮನೆ ಅಲ್ಲ, ಸಂಸ್ಕೃತಿಯ ಸೇತುವೆ” ಎನ್ನುತ್ತಾರೆ ಡಾ. ಕೋರೆ. 1950ರ ದಶಕದಲ್ಲಿ ತಂದೆ ಬಸವಪ್ರಭು ಕೋರೆ ಶುರು ಮಾಡಿದ್ದ ಸಿನೇಮಾ ಪ್ರಯೋಗವನ್ನು 1975ರಲ್ಲಿ ಅವರು 1 ಲಕ್ಷ ರೂಪಾಯಿ ಸಾಲದಿಂದ ಪುನರುಜ್ಜೀವನ ಗೊಳಿಸಿದರು. ಆರಂಭದಲ್ಲಿ ಡಾ. ರಾಜ್ರಕುಮಾರ, ಪಂಢರಿಬಾಯಿ, ಲೀಲಾವತಿ ನಟನೆಯ ಕನ್ನಡ ಚಿತ್ರಗಳು ಮರಾಠಿ ಪ್ರೇಕ್ಷಕರನ್ನೂ ಆಕರ್ಷಿಸಿದವು. “ಸಂಗೀತ ಮತ್ತು ಕಥೆಯ ಭಾಷೆ ಎಲ್ಲರಿಗೂ ಸಮಾನ” ಎಂಬ ನಂಬಿಕೆಯಿಂದ ‘ಮಯೂರ್’ ಸಿನಿಮಾವನ್ನು ಭಾಷಾ ಸೀಮೆಗಳಿಗೂ ಮೀರಿ ಪ್ರಸಾರಮಾಡಿತು.
ಡಾ. ಕೋರೆ ಅವರ ನೇರ ಮಾತು:
“1975ರಲ್ಲಿ ಆರಂಭಗೊಂಡ ಸಿನಿಮಾ ಹಾಲ್‌ಗೆ ಸ್ಪೀಕರ್ ಸಿಸ್ಟಮ್ ಅಪ್ಗ್ರೇಡ್ ಮಾಡಿದಾಗ ಜನ ಆಶ್ಚರ್ಯಚಕಿತರಾದರು. ಈಗ ಡಾಲ್ಬಿ ಧ್ವನಿ, ಡಿಜಿಟಲ್ ಪ್ರೊಜೆಕ್ಷನ್ ಸೇರಿಸಿದ್ದೇವೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿದೆ.
OTT ಯುಗದಲ್ಲೂ ಗ್ರಾಮೀಣರ ಹೃದಯ ಗೆದ್ದ ‘ಮಯೂರ’
ಇತ್ತೀಚಿನ ವರ್ಷಗಳಲ್ಲಿ ಹಲವು ಚಿತ್ರಮಂದಿರಗಳು ಮುಚ್ಚಿ ಹೋಗುತ್ತಿರುವಾಗ, ‘ಮಯೂರ್’ ತನ್ನ 50ನೇ ವರ್ಷವನ್ನು ಆಚರಿಸುತ್ತಿದೆ. ರಜನೀಕಾಂತ್, ಶಿವರಾಜ್ ಕುಮಾರ ಚಿತ್ರಗಳಿಂದ ಹಿಡಿದು ಸಾಮಾಜಿಕ ಸಂದೇಶದ ಚಲನಚಿತ್ರಗಳವರೆಗೆ—ಪ್ರೇಕ್ಷಕರನ್ನು ಒಲಿಸಿಕೊಂಡಿದೆ. “ಉತ್ತಮ ಚಿತ್ರಗಳನ್ನು ತೋರಿಸಿದರೆ, ಜನ ಹಿಂದಿರುಗುತ್ತಾರೆ” ಎನ್ನುವ ಡಾ. ಕೋರೆಯವರ ನಂಬಿಕೆ ಇಲ್ಲಿ ಸಾಕ್ಷಾತ್ಕರಿಸಿದೆ.
ಸಾಂಸ್ಕೃತಿಕ ವೈಭವದ ಸ್ಪರ್ಶ
‘ಮಯೂರ್’ ಕೇವಲ ಸಿನಿಮಾ ಹಾಲ್ ಅಲ್ಲ, ಗ್ರಾಮೀಣ ಯುವಜನರಿಗೆ ಕಲೆಯ ಆಶ್ರಯ. ಇಲ್ಲಿ ನಡೆದ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಳೀಯ ಪ್ರತಿಭೆಗಳಿಗೆ ರಂಗವನ್ನು ನೀಡಿವೆ. “ಈ ಮಂದಿರದಲ್ಲಿ ನಾನು ಮೊದಲ ಬಾರಿಗೆ ಸಿನಿಮಾ ನೋಡಿದೆ. ಇಂದು ನನ್ನ ಮಗುವಿಗೂ ಅದೇ ಅನುಭವ!” ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥರು.
ಡಾ. ಕೋರೆಯವರ ಸಿನೆಮಾ ಪ್ರೇಮ, ಸಮುದಾಯದ ಬೆಂಬಲ ಮತ್ತು ತಾಂತ್ರಿಕ ಅಪ್ಡೇಟ್ಗಳು ‘ಮಯೂರ್’ನನ್ನು ಶಾಶ್ವತಗೊಳಿಸಿವೆ. “ಇದು ನನ್ನ ಏಕೈಕ ಸಾಧನೆ ಅಲ್ಲ, ಅಂಕಲಿಯ ಪ್ರತಿಯೊಬ್ಬರದೂ ಕಥೆ” ಎಂದು ವಿನಮ್ರತೆಯಿಂದ ಹೇಳುವ ಕೋರೆ, ಚಿತ್ರಮಂದಿರದ ಮುಂದಿನ 50 ವರ್ಷಗಳಿಗಾಗಿ ಯೋಜನೆಗಳನ್ನು ರಹಸ್ಯವಾಗಿ ರೂಪಿಸುತ್ತಿದ್ದಾರೆ.
ಗ್ರಾಮೀಣ ಭಾರತದಲ್ಲಿ ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ, ಸಾಮಾಜಿಕ ಬದಲಾವಣೆಯ ಸಾಧನೆ. ಅಂಕಲಿಯ ‘ಮಯೂರ್’ ಅದರ ಜೀವಂತ ನಿದರ್ಶನ. ಚಿತ್ರರಂಗದ ಈ ವೀರಯೋಧನಿಗೆ 50 ವರ್ಷಗಳ ಸಲುವಾಗಿ ಸಿನೆಪ್ರೇಮಿಗಳ ಸಲಾಂ!